ಶಿವಮೊಗ್ಗ

'ಫಲವತ್ತತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿ'

Published On :

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕೆಂದು ಹೇಳುತ್ತಿರುವುದು ರೈತರಲ್ಲಿ ಗೊಂದಲವನ್ನು ಉಂಟುಮಾಡುತ್ತಿದೆ. ಆದರೆ, ರೈತರು ಸಾವಯವ ಕೃಷಿ ಮತ್ತು ರಾಸಾಯನಿಕ ಕೃಷಿ ಎರಡನ್ನೂ ಅನುಸರಿಸಿದ್ದಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು, ಉತ್ತಮ ಗುಣಮಟ್ಟದ ಆಹಾರ ಧಾನ್ಯ ಬೆಳೆಯಲು ಸಹಕಾರಿಯಾಗುವುದು ಎಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ. ಟಿ.ಹೆಚ್. ಗೌಡ, ಹೇಳಿದರು.
ಅವರು ಸೋಮವಾರ ನವುಲೆ ವಿವಿ ಆವರಣದಲ್ಲಿ ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ಸಹಯೋಗದೊಂದಿಗೆ ಸಾವಯವ ಭಾಗ್ಯ ಯೋಜನೆಯಡಿ ಸಾವಯವ ಕೃಷಿ ಕುರಿತು ಸರ್ಕಾರೇತರ ಸಂಸ್ಥೆಗಳ ವಿಸ್ತರಣಾ ಕಾರ್ಯಕರ್ತರಿಗೆ ಆಯೋಜಿಸಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ  ಮಾತನಾಡಿದರು.
ವೈಜ್ಞಾನಿಕ ಕೃಷಿ ಪದ್ಧತಿ: ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಜಮೀನುಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಶಿಫಾರಸಿಗಿಂತ ಹೆಚ್ಚು ಒದಗಿಸಿರುವ ಕಾರಣ ಭೂಮಿಯು ಬರಡಾಗಿದೆ. ಹೆಚ್ಚಿನ ಆಹಾರ ಉತ್ಪಾದಿಸಲು ಮತ್ತು ಮಣ್ಣಿನ ಆರೋಗ್ಯ ಕಾಪಾಡಲು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ರಾಸಾಯನಿಕ ಗೊಬ್ಬರಗಳಷ್ಟೇ ಅಲ್ಲದೆ, ಎರೆಹುಳುಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಭೂಮಿಗೆ ಒದಗಿಸಬೇಕೆಂದರು.
ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಾರುತಿ, ಸರ್ಕಾರವು ಪ್ರತಿ ವರ್ಷ ರಾಸಾಯನಿಕ ಗೊಬ್ಬರಗಳ ಮೇಲೆ 1.3 ಸಾವಿರ ಕೋಟಿ ರು. ಅನುದಾನ ನೀಡುತ್ತಿದೆ. ಸಬ್ಸಿಡಿ ಮೊತ್ತ ಕಡಿಮೆಗೊಳಿಸಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಸಾವಯವ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಭೂಮಿ ಬರಡು: ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಬಿ.ಸಿ. ಹನುಮಂತಸ್ವಾಮಿ, ಸಾವಯವ ಕೃಷಿ ಅನುಸರಿಸಲು ಹೊಸ ಪದ್ಧತಿಯೇನಲ್ಲ. ಹಿಂದೆ ನಮ್ಮ ಪೂರ್ವಜರು ಸಾವಯವ ಕೃಷಿಯನ್ನೇ ಅಳವಡಿಸಿಕೊಂಡಿದ್ದರು. ಆದರೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆಯನ್ನು ಒದಗಿಸುವ ಸಲುವಾಗಿ ಹೆಚ್ಚು ಆಹಾರ ಉತ್ಪಾದಿಸುವ ಉದ್ದೇಶದಿಂದ ಕ್ರಮೇಣ ಸಾವಯವ ಗೊಬ್ಬರಗಳನ್ನು ಭೂಮಿಗೆ ಹಾಕುವುದನ್ನು ಕೈ ಬಿಟ್ಟು ರಾಸಾಯನಿಕ ಗೊಬ್ಬರಗಳನ್ನು ಯಥೇಚ್ಚಗಿ ಬಳಸುತ್ತಿರುವುದರಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಂಡು, ಆಹಾರ ಉತ್ಪಾದನೆ ಕ್ಷೀಣಿಸುತ್ತಿದೆ ಎಂದರು.
ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಎಸ್. ಪ್ರದೀಪ್, ಆಹಾರ ಧಾನ್ಯಗಳು ಮತ್ತು ಮುಖ್ಯವಾಗಿ ಹಣ್ಣಿನ ಬೆಳೆಗಳಲ್ಲಿ ಶಿಫಾರಸಿಗಿಂತ ಹೆಚ್ಚಿನ ಪ್ರಮಾಣದ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿದ್ದು, ಇದಕ್ಕೆ ಸಾವಯವ ಕೃಷಿ ಪರ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಇಮ್ರಾನ್ ಖಾನ್ ಸ್ವಾಗತಿಸಿದರು, ಡಾ. ದಿವ್ಯಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.