ಅಖಿಲ ಭಾರತ ಶಿಶಿಕ್ಷು ಪರೀಕ್ಷೆ ಪ್ರತಿಬಂಧಕಾಜ್ಞೆ ಜಾರಿ
ಶಿವಮೊಗ್ಗ: ಉದ್ಯೋಗ ಮತ್ತು ತರಬೇತಿ ಇಲಾಖೆಯು ಮೇ 21ರಿಂದ 28ರ ವರೆಗೆ ಭದ್ರಾವತಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆಯನ್ನು ನಡೆಸಲಿದೆ.
ಈ ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಅಥವಾ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡಲು ಪರೀಕ್ಷೆ ನಡೆಯುವ ದಿನಾಂಕಗಳಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ವ್ಯಾಪ್ತಿಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಪ್ರವೇಶಿಸುವುದನ್ನು ನಿಷೇಧಿಸಿದೆ. ಕೇಂದ್ರದ ಸುತ್ತಮುತ್ತಲಿರುವ ಟೈಪಿಂಗ್, ಝೆರಾಕ್ಸ್ ಹಾಗೂ ಫ್ಯಾಕ್ಸ್ ಅಂಗಡಿಗಳು ತೆರೆಯುವುದನ್ನು ಹಾಗೂ ಮೊಬೈಲ್ ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಜಾರಿ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೇ 21 ರಿಂದ 30ರವರೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕೆ.ಓ.ಎಸ್. ಪರೀಕ್ಷೆಯನ್ನು ನಡೆಸಲಿದೆ.
ಪರೀಕ್ಷೆಯು ಸುಗಮ ಮತ್ತು ಸಮರ್ಪಕವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರ ಸುತ್ತಲಿನ 200 ಮೀ. ವ್ಯಾಪ್ತಿಯ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಅವರು ಆದೇಶ ಹೊರಡಿಸಿದ್ದಾರೆ.
ಶಾಲೆ ಕಟ್ಟಡಕ್ಕೆ ಗುದ್ದಲಿ ಪೂಜೆ ನಾಳೆ
ಶಿವಮೊಗ್ಗ: ಅರಹತೊಳಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಗೆ ಮೇ 23ರಂದು ಗುದ್ದಲಿ ಪೂಜೆ ನೆರವೇರಲಿದೆ.
ಕಟ್ಟಡ ನಿರ್ಮಾಣ ಕಾಮಗಾರಿ ಮೊದಲ ಹಂತದಲ್ಲಿ 15 ಲಕ್ಷ ಹಣ ಬಿಡುಗಡೆಯಾಗಿದ್ದು, ಗ್ರಾಮದ ಹೊರ ವಲಯದಲ್ಲಿ ಪ್ರೌಢಶಾಲೆಗೆಂದು ಮಿಸಲಿಟ್ಟಿರುವ 6 ಎಕರೆ ಜಮೀನಿನಲ್ಲಿ ಕಾಮಗಾರಿ ನಡೆಯುವುದು.
ಅಂದು ಮಧ್ಯಾಹ್ನ 12 ಗಂಟೆಗೆ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಗುದ್ದಲಿ ಪೂಜೆ ನೆರವೇರಿಸಲಿದ್ದು, ಜಿಪಂ ಸದಸ್ಯ ಎಚ್.ಎಲ್. ಷಡಕ್ಷರಿ, ತಾಪಂ ಸದಸ್ಯ ಹಾಲಪ್ಪ, ಗ್ರಾಪಂ ಅಧ್ಯಕ್ಷ ರುದ್ರಣ್ಣ ಸೇರಿದಂತೆ ಗ್ರಾಪಂ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಮೂರು ವರ್ಷದಿಂದ ಹಾಲಿ ಪ್ರಾಥಮಿಕ ಶಾಲಾ ಆವರಣದಲ್ಲೇ ಪ್ರೌಢಶಾಲೆ ಕರ್ತವ್ಯ ನಿರ್ವಹಿಸುತ್ತಿದ್ದು, ಸುಮಾರು 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಹರಿಂದ ಅರ್ಜಿ ಆಹ್ವಾನ
ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ಪೂರ್ವ ನಂತರ ಬಾಲಕ - ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ 5ನೇ ತರಗತಿಯಿಂದ 10ನೇ ತರಗತಿ ಹಾಗೂ ಪ್ರಥಮ-ದ್ವಿತೀಯ ಪದವಿಪೂರ್ವ 2014-15ನೇ ಸಾಲಿನಲ್ಲಿ ಪ್ರವೇಶ ನೀಡಲು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಕಚೇರಿಯಿಂದ ಮತ್ತು ಸಂಬಂಧಿಸಿದ ಆಯಾ ನಿಲಯದ ಮೇಲ್ವಿಚಾರಕರಿಂದ ಅಧಿಕೃತ ಅರ್ಜಿ ನಮೂನೆಯನ್ನು ಪಡೆದು ಜೂನ್ 15 ರೊಳಗೆ ಕಚೇರಿಗೆ ಅಥವಾ ಆಯಾ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಿಗೆ ಸಲ್ಲಿಸಬಹುದಾಗಿದೆ.
ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ, ಸಮವಸ್ತ್ರ, ಪಠ್ಯ-ಪುಸ್ತಕ, ಸಂಕೀರ್ಣ ಸಾಮಗ್ರಿ, ತಲೆಕ್ಷೌರ, ಭಾಗಶಃ ಬೋಧನೆ, ಇತ್ಯಾದಿ ಮತ್ತು ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು. 5ರಿಂದ 10ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಮತ್ತು ಪ್ರಥಮ-ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸಬಹುದು. ಹಾಸ್ಟೆಲ್ ಇರುವ ಸ್ಥಳದಿಂದ 5ಕಿಮೀ. ಅಂತರದಲ್ಲಿರುವ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆಗೆ ಕಳೆದ ವರ್ಷದ ತರಗತಿಯಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸದ ದೃಢೀಕರಣ ಪತ್ರ ಮತ್ತು 3 ಭಾವಚಿತ್ರಗಳನ್ನು ಲಗತ್ತಿಸಬೇಕು. ವಿದ್ಯಾರ್ಥಿಯ ಪಾಲಕರ ಆದಾಯವು 2.50 ಲಕ್ಷ ಒಳಗಿರಬೇಕು.
ವಿದ್ಯಾರ್ಥಿಗಳು ಪ್ರವೇಶಕ್ಕೆ ಸಂಬಂಧಿಸಿದ ಎಲ್ಲಾ ದೃಢೀಕೃತ ದಾಖಲೆಗಳನ್ನು ಸಂಬಂಧಿಸಿದ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಿಗೆ ಅಥವಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಜೂನ್ 15ರೊಳಗೆ ಸಲ್ಲಿಸುವಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಹೆಚ್ಚು ಶುಲ್ಕ ವಸೂಲಿ ಆರೋಪ: ಪ್ರತಿಭಟನೆ
ಶಿವಮೊಗ್ಗ: ಡಿವಿಎಸ್ ಆಡಳಿತ ಮಂಡಳಿಯು ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಂದ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ ಅವರು, ಸರ್ಕಾರ ಆಡಳಿತಾಧಿಕಾರಿಗಳ ಅವಧಿಯಲ್ಲಿ ಡಿವಿಎಸ್ ಸಂಸ್ಥೆಯ ಎಲ್ಲಾ ಕಾಲೇಜುಗಳಲ್ಲಿ ಒಂದೇ ರೀತಿಯ ಅರ್ಜಿ ಮತ್ತು ಶುಲ್ಕ ನಿಗದಿಪಡಿಸಿತ್ತು. ಆದರೆ 2013-14ನೇ ಸಾಲಿನಲ್ಲಿ ನೂತನ ಆಡಲಿತ ಮಂಡಳಿಯು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿ ಶುಲ್ಕ ನಿಗದಿಪಡಿಸಿದೆ ಎಂದು ಆರೋಪಿಸಿದರು.
ಸರ್ಕಾರದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ಅತಿ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ, ಜಿಲ್ಲಾ ಸಂಚಾಲಕ ಟಿ.ಎಚ್. ಹಾಲೇಶಪ್ಪ, ತಾಲೂಕು ಸಂಚಾಲಕ ರಮೇಶ್ ಚಿಕ್ಕಮರಡಿ, ರವಿ, ಕೃಷ್ಣ, ಮಧುಸೂದನ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.
ಚಿತ್ರಕಲಾ ಶಿಕ್ಷಣ ಪ್ರವೇಶಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ: ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯು ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ಮೂಲ ತರಗತಿ, ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ (ಗ್ರಾಫಿಕ್ಸ್), ಅನ್ವಯ ಕಲೆ, ಛಾಯಾಚಿತ್ರ ಮತ್ತು ಪತ್ರಿಕೋದ್ಯಮ ಹಾಗೂ ಕಲಾ ಇತಿಹಾಸ ವಿಷಯಗಳ ಪ್ರಥಮ ಬಿ.ಎಫ್.ಎ. ಮತ್ತು ಪ್ರಥಮ ಎಂ.ಎಫ್.ಎ. ತರಗತಿಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಥಮ ಮೂಲ ತರಗತಿಗೆ 22 ವರ್ಷದೊಳಗಿನ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಜೂನ್ 2ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೂನ್ 10ರಂದು ಬೆಳಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಹಾಗೂ ಅಂದು ಮಧ್ಯಾಹ್ನ 2 ಗಂಟೆಗೆ ಸಂದರ್ಶನ ನಡೆಯಲಿದೆ. ಪ್ರವೇಶ ಪಡೆದ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಲು ಜೂನ್ 14 ಕೊನೆಯ ದಿನ. ಜೂನ್ 16 ರಿಂದ ತರಗತಿಗಳು ಆರಂಭವಾಗಲಿವೆ.
ಪ್ರಥಮ ಬಿಎಫ್ಎ ತರಗತಿಗೆ 24 ವರ್ಷದೊಳಗಿನ ದ್ವಿತೀಯ ಮೂಲ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವಿಶ್ವವಿದ್ಯಾನಿಲಯದ ಅಧಿಸೂಚನೆಯನ್ವಯ ಶುಲ್ಕ ಪಾವತಿಸಬೇಕು. ಪ್ರವೇಶ ಅರ್ಜಿ ಮತ್ತು ವಿವರಣಾ ಪತ್ರಿಕೆಖುದ್ದಾಗಿ ಅಥವಾ 150 ಡಿ.ಡಿ.ಯನ್ನು ಡೀನ್, ಕಾವಾ, ಸಯ್ಯಾಜಿರಾವ್ ರಸ್ತೆ, ಸಿಟಿಐ ಕಟ್ಟಡ, ಮೈಸೂರು ಇವರ ಹೆಸರಿನಲ್ಲಿ ಪಡೆದು, ಅಂಚೆ ಮೂಲಕ ಕಳುಹಿಸಿ ಪಡೆಯಬಹುದು. ವಿವರಗಳಿಗಾಗಿ ಪ್ರಾಂಶುಪಾಲರು, ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ, ಸಿಟಿಐ ಕಟ್ಟಡ, ಸಯ್ಯಾಜಿರಾವ್ ರಸ್ತೆ, ಮೈಸೂರು-1. ದೂ.0821-2438931ನ್ನು ಸಂಪರ್ಕಿಸಬಹುದು.
ಉಪಠಾಣೆ ಆರಂಭಕ್ಕೆ ಒತಾಯ
ಶಿವಮೊಗ್ಗ: ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಪೊಲೀಸ್ ಉಪಠಾಣೆ ಆರಂಭಿಸುವಂತೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ 22 ವರ್ಷಗಳ ಹಿಂದೆ ರಚಿಸಲಾದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ, ಅನೈತಿಕ ಚಟುವಟಿಕೆ, ಕಳ್ಳತನ, ಹೆಣ್ಣುಮಕ್ಕಳಿಗೆ ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗಿವೆ. ಹೊರಗಿನಿಂದ ಪುಂಡರು, ರೌಡಿಗಳು ಬಂದು ದಾಂಧಲೆ ನಡೆಸುತ್ತಿದ್ದಾರೆ. ಇದರಿಂದಾಗಿ ಬಡಾವಣೆಯಲ್ಲಿ ನೆಮ್ಮದಿಯೇ ಇಲ್ಲವಾಗಿದೆ ಎಂದು ದೂರಿದರು.
ಬಡಾವಣೆಯ ಎ ಯಿಂದ ಎಚ್ ಬ್ಲಾಕ್ ವರೆಗೆ ಸುಮಾರು 20 ಸಾವಿರ ಜನಸಂಖ್ಯೆ ಇದೆ. ನಿವಾಸಿಗಳು ಶಾಂತಿಯಿಂದ ಬದುಕು ನಡೆಸುವುದು ಕಷ್ಟವಾಗಿದೆ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಪೊಲೀಸ್ ಉಪಠಾಣೆ ಆರಂಭಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜಾನಾಯ್ಕ್, ಸಂತೋಷ್ ನಾಯ್ಕ್, ವಸಂತಮ್ಮ, ಶೇಖರಮ್ಮ, ಕೊಟ್ರಮ್ಮ ಸೇರಿದಂತೆ ಹಲವರು ಇದ್ದರು.
ಅರ್ಜಿ ಆಹ್ವಾನ
ಶಿವಮೊಗ್ಗ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ನಿಧಿಗೆ-ಮಾಚೇನಹಳ್ಳಿಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 3 ಪ್ಲಸ್ 1 ವರ್ಷಗಳ ಅವಧಿಯ ಟೂಲ್ ಅಂಡ್ ಮೇಕಿಂಗ್ ಡಿಪ್ಲೋಮಾ ತರಬೇತಿ ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ.ಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮೆರಿಟ್ ಮತ್ತು ಮೀಸಲಾತಿಯನ್ವಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಆಸಕ್ತರು ಮಾಹಿತಿ ಪುಸ್ತಕ ಮತ್ತು ಅರ್ಜಿಗಳನ್ನು ಸಮೀಪದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರಿಂದ ಖುದ್ದಾಗಿ ಅಥವಾ ಅಂಚೆ ಮೂಲಕ ಕ್ರಾಸ್ ಮಾಡಿದ 250 ಡಿಮ್ಯಾಂಡ್ ಡ್ರಾಫ್ಟ್ (ಎಸ್ಸಿಎಸ್ಟಿ ಮತ್ತು ವರ್ಗ-1 ಅಭ್ಯರ್ಥಿಗಳಿಗೆ 125) ಸಲ್ಲಿಸಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂನ್ 4 ರೊಳಗಾಗಿ ಸಲ್ಲಿಸಬೇಕು. ವಿವರಗಳಿಗಾಗಿ ದೂ- 08182-246054, ಮೊ- 9448307027ನ್ನು ಸಂಪರ್ಕಿಸುವಂತೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: 2014-15ನೇ ಶೈಕ್ಷಣಿಕ ಸಾಲಿನಲ್ಲಿ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೋಮಾ ತರಬೇತಿ ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಯು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 23 ವರ್ಷ ಹಾಗೂ ಪರಿಶಿಷ್ಟ ಅಭ್ಯರ್ಥಿಗಳು 25 ವರ್ಷ ವಯೋವುತಿಯೊಳಗಿನವರಾಗಿರಬೇಕು. ಸೀಮಿತ 42 ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮಾತ್ರ ಪ್ರವೇಶಾವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗೆ ಮಾಹೆಯಾನ ಶಿಷ್ಯವೇತನ ನೀಡಲಾಗುವುದು. ಹಾಗೂ ಹಣ ಪಾವತಿಸುವ ಷರತ್ತಿನ ಮೇರೆಗೆ ವಸತಿ ನಿಲಯದ ಸೌಲಭ್ಯವನ್ನು ಒದಗಿಸಲಾಗುವುದು. ಮೆರಿಟ್ ಹಾಗೂ ಮೀಸಲಾತಿಯನ್ವಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯಾ ಡಿಪ್ಲೋಮಾ ಸಂಸ್ಥೆಗಳಲ್ಲಿ ಕೋರ್ಸ್ ಪ್ರವೇಶ ಕುರಿತಂತೆ ಕೌನ್ಸೆಲಿಂಗ್ಗೆ ಕರೆಯಲಾಗುವುದು. ಆಸಕ್ತರು ನಿಗದಿತ ನಮೂನೆಯ ಅರ್ಜಿ ಹಾಗೂ ವಿವರಗಳಿಗಾಗಿ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ-ಬೆಟಗೇರಿ, ದೂ-08372-218696 ಅಥವಾ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ನ್ನು ಸಂಪರ್ಕಿಸಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ-ಗದಗ- 582102 ವಿಳಾಸಕ್ಕೆ ಜೂನ್ 12 ರೊಳಗಾಗಿ ಸಲ್ಲಿಸಬಹುದಾಗಿದೆ.
ಮನೆ ಕುಸಿದು ಮೃತಪಟ್ಟ ಕುಟುಂಬದವರಿಗೆ ಪರಿಹಾರ ವಿತರಣೆ
ಶಿಕಾರಿಪುರ: ಸೋಮವಾರ ಸಂಜೆಯ ಭಾರಿ ಮಳೆ ಗಾಳಿಗೆ ತಾಲೂಕಿನ ಕಾಗಿನಲ್ಲಿಯಲ್ಲಿ ಮನೆ ಕುಸಿತದ ಪರಿಣಾಮದಿಂದ ಮೃತಪಟ್ಟವರಿಗೆ ತಾಲೂಕು ಆಡಳಿತ ಪರಿಹಾರ ವಿತರಿಸಿದೆ.
ಮಂಗಳವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಆಗಮಿಸಿ ಪ್ರಕೃತಿ ವಿಕೋಪ ಪರಿಹಾರದಡಿಯಲ್ಲಿ ತಲಾ ರು. 1.5 ಲಕ್ಷ ಪರಿಹಾರದ ಚೆಕ್ಕನ್ನು ಮೃತಪಟ್ಟ ಮನೆಯ ಮಾಲಿಕ ನಿವೃತ್ತ ಶಿಕ್ಷಕ ಸುರೇಂದ್ರಪ್ಪ, ಪುತ್ರ ಅಂಜನ್ ಕುಮಾರ್ ಹಾಗೂ ಕಾರ್ಮಿಕ ಕೆಂಗಟ್ಟೆ ಗ್ರಾಮದ ಮಂಜಪ್ಪ ಮತ್ತು ಶೇಖರಪ್ಪನವರ ಕುಟುಂಬದ ಸದಸ್ಯರಿಗೆ ವಿತರಿಸಿದರು.
ಸಾಂತ್ವನ: ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ತಾಲೂಕು ಆಡಳಿತ ಪ್ರಕೃತಿ ವಿಕೋಪದಲ್ಲಿ ಮೃತಪಟ್ವರಿಗೆ ಶೀಘ್ರ ಪರಿಹಾರ ವಿತರಿಸಿದ್ದು, ಗಾಯಾಳುಗಳಿಗೆ ಸರ್ಕಾರದ ಸುತ್ತೋಲೆ ಮೇರೆಗೆ ವೈದ್ಯಕೀಯ ದೃಢೀಕರಣ ಪತ್ರವನ್ನು ಆಧರಿಸಿ ಶೇಕಡಾವಾರು ಗಾಯದ ಪ್ರಮಾಣ ಮೇರೆಗೆ ಪರಿಹಾರ ನಿರ್ಧರಿಸಲಾಗುವುದು ಎಂದರು.
ಪ್ರೊಬೆಷನರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಕುಳೇರ್, ತಹಸೀಲ್ದಾರ್ ಜಗದೀಶ್, ಕಂದಾಯ ಅಧಿಕಾರಿ ಮಂಜುನಾಥ್, ಕುಲ್ಹೇರ ಮೊದಲಾದವರು ಇದ್ದರು.
ಅಭಿನಂದನಾ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಭೆ
ಕ.ಪ್ರ.ವಾರ್ತೆ , ಸೊರಬ , ಮೇ 21
ತಾಲೂಕಿನ ಮಾವಲಿಯ ಉಮಾಮಹೇಶ್ವರ ಗ್ರಾಮಾಂತರ ಪ್ರೌಢಶಾಲೆ ಮುಖ್ಯ ಶಿಕ್ಷಕ, ದಲಿತ ಹೋರಾಟಗಾರ ರಾಜಪ್ಪ ಮಾಸ್ತರ್ ಮೇ ಕೊನೆ ವಾರ ಸೇವೆಯಿಂದ ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಅವರ ಶಿಷ್ಯವೃಂದ ಹಮ್ಮಿಕೊಳ್ಳಲಿರುವ ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಪಟ್ಟಣದಲ್ಲಿ ನಡೆಯಿತು.
ಸಭೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ವೈ. ಸುರೇಶ್ ಬಿಳುವಾಣಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶಿಕ್ಷಕ ಆರ್.ಬಿ. ಚಂದ್ರಪ್ಪ, ಕೆ. ಮಂಜುನಾಥ, ಕಾರ್ಯದರ್ಶಿಗಳಾಗಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಡಿ. ಹೊಳೆಲಿಂಗಪ್ಪ, ಎನ್. ಲಲಿತಾ, ಖಜಾಂಚಿಗಳಾಗಿ ಬಿ. ಹನುಮಂತಪ್ಪ ಚನ್ನಾಪುರ ಹಾಗೂ ಆಹಾರ ಸಮಿತಿ, ಸ್ವಾಗತ ಸಮಿತಿ, ವೇದಿಕೆ ನಿರ್ವಹಣಾ ಸಮಿತಿ, ಸಲಹಾ ಸಮಿತಿಗಳನ್ನು ರಚಿಸಲಾಯಿತು.
ಜೂನ್ 8 ರಂದು ನಡೆಯಲಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ರಾಜಪ್ಪ ಮಾಸ್ತರ್ ಶಿಷ್ಯವೃಂದ ಹೊರತರುತ್ತಿರುವ ಸಮತೆಯ ದನಿ ಕೃತಿ ಬಿಡುಗಡೆ ಮಾಡುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.
ಅಭಿನಂದನಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

