ರೈತರಿಗೆ ಕೃಷಿ ತಂತ್ರಜ್ಞಾನ ಮಾಹಿತಿ ಅಗತ್ಯ
ಸೊರಬ: ರೈತನಿಗೆ ಯಾವ ಕಾಲಕ್ಕೆ ಯಾವ ಬೆಳೆ ಮತ್ತು ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕುರಿತು ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದು ಜಿಪಂ ಸದಸ್ಯೆ ಕೋಮಲಾ ನಿರಂಜನ ತಿಳಿಸಿದರು.
ಬುಧವಾರ ತಾಲೂಕಿನ ಕುಪ್ಪಗಡ್ಡೆಯಲ್ಲಿ ಹೋಬಳಿ ಮಟ್ಟದ ಭೂಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಅನ್ನ ನೀಡುವ ರೈತರಿಗೆ ಅಗತ್ಯವಿರುವ ಬೀಜ, ಗೊಬ್ಬರ ಮತ್ತು ಪರಿಕರಗಳು ದಾಸ್ತಾನು ಇರುವಂತೆ ಸರ್ಕಾರ, ಇಲಾಖೆ ನೋಡಿಕೊಂಡಾಗ ಮಾತ್ರ ರೈತರು ಸಕಾಲಕ್ಕೆ ಸರಿಯಾಗಿ ಕೃಷಿ ಕೈಗೊಳ್ಳಲು ಸಾಧ್ಯ ಎಂದವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಸಹಾಯಕ ನಿರ್ದೇಶಕಿ ಮುಂಜುಳಾ 2008ರಲ್ಲಿ ಮೊದಲ ಹಂತದ ಭೂ ಚೇತನಾ ಕಾರ್ಯಕ್ರಮ ಆರಂಭವಾಗಿದ್ದು, ಈ ಹಂತದಲ್ಲಿ ಮಳೆ ಆಧಾರಿತ ಖುಷ್ಕಿ ಪ್ರದೇಶದಲ್ಲಿ ಲಘು ಪೋಷಕಾಂಶ ಬಳಕೆ ಮಾಡಿಕೊಂಡು ಶೇ.20 ಆದಾಯ ಹೆಚ್ಚಿಸುವುದಾಗಿತ್ತು ಎಂದರು.
ಮಣ್ಣು, ನೀರಿಗೆ ಆದ್ಯತೆ: ಈಗ 2ನೇ ಹಂತದ ಭೂ ಚೇತನಾ ಕಾರ್ಯಕ್ರಮ ಆರಂಭವಾಗಿದ್ದು, ಖುಷ್ಕಿ ಮಳೆ ಆಧಾರಿತ ಹಾಗೂ ನೀರಾವರಿ ಪ್ರದೇಶಗಳೆರಡರಲ್ಲಿಯೂ ಮಣ್ಣು ಮತ್ತು ನೀರಿಗೆ ಹೆಚ್ಚಿನ ಆದ್ಯತೆ ನೀಡಿ, ಪರಿಸರದ ಬದಲಾವಣೆಗೆ ಅನುಗುಣವಾಗಿ ಬೀಜೋಪಚಾರ ಮಾಡಿ ಸಕಾಲಕ್ಕೆ ಸರಿಯಾಗಿ ತಾಂತ್ರಿಕತೆಯನ್ನು ಹೆಚ್ಚಿಸಿಕೊಂಡು ಶೇ.20 ರಿಂದ 30 ಇಳುವರಿ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಿಂದ ರೈತರ ಆರ್ಥಿಕತೆ ಹಾಗೂ ಜೀವನ ಮಟ್ಟ ಸುಧಾರಣೆಗೊಳ್ಳಲಿದೆ ಎಂದರು.
ರೈತರು ಬಿತ್ತನೆ ಮಾಡುವಾಗ ಹೊಸ ಹೈಬ್ರಿಡ್ ತಳಿ ಬತ್ತವನ್ನೇ ಬೀಜೋಪಚಾರ ಮಾಡಿ ಬಿತ್ತಬೇಕು. ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸದೇ ಸಾವಯುವ ಲಘು ಪೋಷಕಾಂಶಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಮಣ್ಣು ಪರೀಕ್ಷೆ ಮಾಡಿಸಿ ಸುಣ್ಣ ಬಳಸುವುದರಿಂದ ಮಣ್ಣಿನಲ್ಲಿರುವ ಹುಳಿ ಅಂಶವನ್ನು ಹತೋಟಿಗೆ ತರಬಹುದಾಗಿದೆ. ಇಲಾಖೆಯಲ್ಲಿ ನೇಗಿಲು ಮತ್ತು ಹಸಿರೆಲೆ ಬೀಜ ಲಭ್ಯವಿದ್ದು, ಇದೇ ತಿಂಗಳ 25ರಿಂದ ವಿತರಿಸಲಾಗುವುದು ಎಂದರು.
ಕೀಟ ಬಾಧೆ ದೂರ: ಕೃಷಿ ಅಧಿಕಾರಿ ಸನಾವುಲ್ಲಾ ಕೃಷಿ ತಾಂತ್ರಿಕತೆಯ ಬಗ್ಗೆ ಮಾಹಿತಿ ನೀಡಿ, ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡುವುದರಿಂದ ನೀರು ಮತ್ತು ಮಣ್ಣಿನ ಸಂರಕ್ಷಣೆ ಜೊತೆಗೆ ಬೆಳೆಗಳನ್ನು ಸಮಗ್ರ ಕೀಟ ಭಾದೆಯಿಂದ ದೂರವಿಡಬಹುದಾಗಿದೆ. ಮಣ್ಣಿನ ಆರೋಗ್ಯ ಕಾಪಾಡುವುದರ ಮೂಲಕ ಹೆಚ್ಚಿನ ಇಳುವರಿ ಕಾಣಲು ಸಾಧ್ಯ. ಮಣ್ಣಿನ ಸೂಕ್ಷ್ಮಾಣುಗಳನ್ನು ರಕ್ಷಿಸುವುದರಿಂದ ಸುಸ್ಥಿರ ಆದಾಯ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಗ್ರಾಪಂ ಸದಸ್ಯ ಆನಂದಪ್ಪ ವಹಿಸಿದ್ದರು. ತಾಪಂ ಮಾಜಿ ಉಪಾಧ್ಯಕ್ಷ ದಾನಪ್ಪ, ಗೆಂಡ್ಲ ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ, ಕೃಷಿ ಅಧಿಕಾರಿಗಳಾದ ಕೃಷ್ಣ ಹೆಗಡೆ, ಸನಾವುಲ್ಲಾ, ರಜಪೂತ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

