ಶಿವಮೊಗ್ಗ

ಜೆನರ್ಮ್ ಬಸ್ ಪರ್ಮಿಟ್ ವಿಳಂಬ: ಡಿಸಿ ವಿರುದ್ಧ ಟೀಕೆ

Published On :

ಶಿವಮೊಗ್ಗ: ಜೆನರ್ಮ್ ಬಸ್ಸು ಯೋಜನೆ ಅನುಷ್ಠಾನ ವಿಚಾರದಲ್ಲಿ ಉದಾಸೀನ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ  ಅಣ್ಣಾ ಹಜಾರೆ ಹೋರಾಟ ಸಮಿತಿ ಮತ್ತು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಗೆ ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆಯಡಿಯಲ್ಲಿ ಮಂಜೂರಾಗಿರುವ ಕ್ರಮವಾಗಿ 100 ನಗರ ಸಾರಿಗೆ ಬಸ್ಸುಗಳಿಗೆ (ಸಿಟಿ ಬಸ್ಸು) ಪರವಾನಿಗೆ ನೀಡಲು ಮೇ 24 ಮತ್ತು 26ರಂದು ಕರೆಯಲಾಗಿದ್ದ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಸಕಾರಣವಿಲ್ಲದೇ ಮುಂದೂಡಿರುವ ಪ್ರಾಧಿಕಾರದ ಅಧ್ಯಕ್ಷರೂ ಆದ ಶಿವಮೊಗ್ಗ ಜಿಲ್ಲಾಧಿಕಾರಿ ಕ್ರಮ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಶೋಕ್ಯಾದವ್ಹಾಗೂ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಕಲ್ಲೂರು ಮೇಘರಾಜ್ ಹೇಳಿದ್ದಾರೆ.
ಕರ್ತವ್ಯ ಲೋಪ: ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಗೆ ಕಳೆದ 6 ತಿಂಗಳ ಹಿಂದೆ ಜೆನರ್ಮ್ ಯೋಜನೆಯಡಿಯಲ್ಲಿ ಮಂಜೂರಾಗಿರುವ ನಗರ ಸಾರಿಗೆ ಬಸ್ಸುಗಳನ್ನು ಬರಮಾಡಿಕೊಳ್ಳಲು ಶಿವಮೊಗ್ಗ ಜಿಲ್ಲಾಧಿಕಾರಿಗಳು ಸಿಟಿ ಬಸ್ ಟರ್ಮಿನಲ್, ವರ್ಕ್‌ಶಾಪ್ ಮತ್ತು ಡಿಪೋಗಳಿಗೆ ಕನಿಷ್ಟ 6 ರಿಂದ 8 ಎಕರೆ ಜಾಗವನ್ನು 2 ತಿಂಗಳೊಳಗೆ ಗುರುತು ಮಾಡುವುದು ಹೊಣೆಗಾರಿಕೆಯಾಗಿತ್ತು. ಈ ಯೋಜನೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಕಲ್ಪಿಸುವಲ್ಲಿ ಈತನಕವೂ ವಿಫಲರಾಗಿ ತಮ್ಮ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಮಧ್ಯೆ ನಮ್ಮ ಒತ್ತಾಯಕ್ಕೆ ಮಣಿದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ಡಿಪೊ ಮ್ಯಾನೇಜರ್‌ರರು ನೂರು ಸಿಟಿ ಬಸ್ಸುಗಳಿಗೆ ಸಲ್ಲಿಸಿರುವ ಪರ್ಮಿಟ್ ಮಂಜೂರಾತಿ ಅರ್ಜಿಯನ್ನು ಈ ತಿಂಗಳ 24 ಮತ್ತು 26ರ ಸಭೆಯಲ್ಲಿ ಇತ್ಯರ್ಥಪಡಿಸಿ ಪರ್ಮಿಟ್ ನೀಡುವುದಾಗಿ ನಮ್ಮ ಹೋರಾಟ ಸಮಿತಿಗಳ ನಿಯೋಗಕ್ಕೆ ಭರವಸೆ ನೀಡಿದ್ದರು.
ಆದರೆ ಜಿಲ್ಲಾಧಿಕಾರಿ ಈ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದು ಶಿವಮೊಗ್ಗ ಜಿಲ್ಲಾ ಮ್ಯಾಜಿಸ್ಟ್ರೇಟರ್ ಆಗಿ ದಕ್ಷತೆಯಿಂದ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಶೋಕ್ ಯಾದವ್ ಹಾಗೂ ಕಲ್ಲೂರು ಮೇಘರಾಜ್ ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.