ಆಯನೂರು ಹೊಸ ಸರ್ಕಾರಿ ಪದವಿ ಕಾಲೇಜು ಪ್ರವೇಶ ಆರಂಭ
ಆಯನೂರು: ಆಯನೂರು ಭಾಗದ ಜನರ ಬಹುವರ್ಷದ ಬೇಡಿಕೆ ಅಂತೂ ಈಡೇರಿದೆ. 10 ಸಾವಿರ ಜನಸಂಖ್ಯೆಯ ಆಯನೂರು ಸೇರಿದಂತೆ ಹಾರನಹಳ್ಳಿ, ಚೋರಡಿ, ಸೂಡೂರು, ಹಣಗೆರೆ, ಕಲ್ಲುಕೊಪ್ಪ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳು ಪಿಯುಸಿ ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ಪ್ರತಿನಿತ್ಯ ಶಿವಮೊಗ್ಗಕ್ಕೆ ಬಂದು ಹೋಗಬೇಕಾಗಿತ್ತು.
ಆದರೆ, ಈ ವರ್ಷದಿಂದ ಆಯನೂರಿನಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭವಾಗುತ್ತಿದೆ. ಇಲ್ಲಿನ ಪದವಿಪೂರ್ವ ಕಾಲೇಜಿನ ಮೊದಲ ಮಹಡಿಯಲ್ಲಿ ಪದವಿ ಕಾಲೇಜು ತರಗತಿಗಳು ತಾತ್ಕಾಲಿಕವಾಗಿ ನಡೆಯಲಿದೆ.
ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ವಿತರಣೆ ಕಳೆದ 3 ದಿನಗಳಿಂದ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ಇದೆ ಎಂದು ನೋಡಲ್ ಅಧಿಕಾರಿ ರಾಮಚಂದ್ರಪ್ಪ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಸದ್ಯ ಈ ವರ್ಷ ಪ್ರಥಮ ವರ್ಷದ ಬಿ.ಎ. ಮತ್ತು ಬಿ.ಕಾಂ. ತರಗತಿಗಳು ಆರಂಭವಾಗುತ್ತಿದೆ. ಬಿ.ಎ.ನಲ್ಲಿ ಎಚ್ಇಪಿ ಮತ್ತು ಎಚ್ಇಎಸ್ ಸಂಯೋಜನೆ ಇದೆ. ಮೊದಲ 3 ದಿನಗಳಲ್ಲಿ 45 ಅರ್ಜಿ ಖಾಲಿಯಾಗಿದೆ. ಅನೇಕರು ವಿಚಾರಣೆ ನಡೆಸಿದ್ದಾರೆ.
ಕಾಮಗಾರಿ ಚುರುಕು: ಜು.1 ರಿಂದ ತರಗತಿಗಳು ಆರಂಭವಾಗಲಿದ್ದು, ಉಪನ್ಯಾಸಕರ ನಿಯೋಜನೆ ಕಾರ್ಯ ನಡೆದಿದೆ. ಪ್ರಾಂಶುಪಾಲರಾಗಿ ಕುಬೇರಪ್ಪ ನಿಯೋಜನೆಗೊಂಡರೆ, ನೋಡಲ್ ಅಧಿಕಾರಿಯಾಗಿ ರಾಮಚಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪದವಿಪೂರ್ವ ಕಾಲೇಜಿನ ಮೊದಲ ಮಹಡಿಯಲ್ಲಿ 4 ಕೊಠಡಿಗಳು ಪದವಿ ಕಾಲೇಜುಗಳಿಗಾಗಿಯೇ ತರಾತುರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದುದನ್ನು ಗಮನಿಸಿದ ಆಯನೂರು ಮಂಜುನಾಥ್ ಭೇಟಿ ಕೊಟ್ಟು ಕಾಮಗಾರಿ ಚುರುಕುಗೊಳ್ಳಲು ಕ್ರಮ ಕೈಗೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಅನುಕೂಲ: ಅದೇ ರೀತಿ ವಿದ್ಯಾರ್ಥಿನಿಯ ಪೋಷಕರು ಪ್ರತಿಕ್ರಿಯಿಸಿ, ಆಯನೂರು ಹತ್ತಾರು ಹಳ್ಳಿಗೆ ಕೇಂದ್ರಿತ ಪ್ರದೇಶ. ಇಲ್ಲಿ ಕಾಲೇಜು ಆರಂಭ ಆಗಿರುವುದರಿಂದ ಕುಂಸಿ, ಹಾರ್ನಹಳ್ಳಿ, ಚೋರಡಿ, ಸೂಡೂರು, ಹಣಗೆರೆ, ಕಲ್ಲುಕೊಪ್ಪ, ಮಲೇಶಂಕರ, ಮಲ್ಲಾಪುರ, ರಾಮನಗರ ಸೇರಿದಂತೆ ಸುತ್ತಮುತ್ತಲ ಊರುಗಳ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಪಡೆಯಬೇಕೆಂದರೆ ಆಯನೂರಿಗೆ ಬಂದು ಇಲ್ಲಿಂದ 18 ಕಿಲೋ ಮೀಟರ್ ದೂರದ ಶಿವಮೊಗ್ಗಕ್ಕೆ ಬಸ್ನಲ್ಲಿ ಹೋಗಿಬರಬೇಕಾಗಿತ್ತು. ಹೀಗಾಗಿ, ಅನೇಕರು ತಮ್ಮ ಮಕ್ಕಳನ್ನು ಪಿಯುಸಿಗೆ ಮೊಟಕುಗೊಳಿಸುತ್ತಿದ್ದರು. ಮುಖ್ಯವಾಗಿ ವಿದ್ಯಾರ್ಥಿನಿಯರು ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದರು. ಇದೀಗ ಕಾಲೇಜು ಆರಂಭ ಆಗಿರುವುದು ಸಾಕಷ್ಟು ಅನುಕೂಲವ ಎಂದು ಕರವೇ ಮುಖಂಡ ಉದಯ ಶೆಟ್ಟಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ನಾಡ ಕಚೇರಿ ಆರಂಭ
ಆಯನೂರು ಪಟ್ಟಣದಲ್ಲಿ ನಾಡ ಕಚೇರಿ ಕೆಲಸ ಕಾರ್ಯಗಳು ಆರಂಭವಾಗಿದೆ. ಚುನಾವಣೆಗೆ ಮುನ್ನ ನಾಡಕಚೇರಿ ಉದ್ಘಾಟನೆ ಆಗಿದ್ದರೂ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡುತ್ತಿರಲಿಲ್ಲ. ಮೇ 26 ರಿಂದ ನಾಡ ಕಚೇರಿ ಆರಂಭವಾಗಿದೆ. ಇಷ್ಟು ದಿನಗಳವರೆಗೆ ಆಯನೂರು ಸೇರಿದಂತೆ ಸುತ್ತಮುತ್ತಲ ಗ್ರಾಮದವರು ನಾಡ ಕಚೇರಿ ಕೆಲಸಗಳಿಗಾಗಿ 6 ಕಿಲೋ ಮೀಟರ್ ದೂರದ ಹಾರನಹಳ್ಳಿಗೆ ಹೋಗಿಬರಬೇಕಾಗಿತ್ತು. ಇನ್ನು ಮುಂದೆ ಪಹಣಿ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸೌಲಭ್ಯಗಳು ಇಲ್ಲೇ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

