ಶಿವಮೊಗ್ಗ

ಮಳೆಗೆ 70ಕ್ಕೂ ಹೆಚ್ಚು ಮನೆ ಧರೆಗೆ: ತತ್ತರಿಸಿದ ತಡಗುಂದ, ಕೊಳಗಿ

Published On :

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮೇ 29
ತಾಲೂಕಿನ ಗಡಿಭಾಗದ ತಂಡಗುಂದ ಮತ್ತು ಕೊಳಗಿ ಗ್ರಾಮದಲ್ಲಿ ಮಳೆ, ಗಾಳಿ ಆರ್ಭಟಕ್ಕೆ ಈಡೀ ಗ್ರಾಮಗಳು ತತ್ತರಿಸಿವೆ. ತಂಡಗುಂದ ಗ್ರಾಮದ ಸುಮಾರು 35ಕ್ಕೂ ಹೆಚ್ಚು ಹಾಗೂ ಕೊಳಗಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿ ಗ್ರಾಮಸ್ಥರ ನಿದ್ದೆಗೆಡಿಸಿದ ಘಟನೆ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ ಹತ್ತಿರದ ಮಳೂರ-ಜಾವಗಟ್ಟಿ ಗ್ರಾಮದಲ್ಲಿ ಮಳೆ ಗಾಳಿಯಿಂದ 600ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿರುವ ಬೆನ್ನೆಲ್ಲೆ ಮತ್ತೆ ಮಳೆಗಾಳಿ ಸಂಭವಿಸಿ ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಇದ್ದಕ್ಕಿದಂತೆಯೇ ಆಗಮಿಸಿದ ಮಳೆ ಗಾಳಿಗೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೊಳಗಿ ಗ್ರಾಮದಲ್ಲಿ ಮನೆಯ ಮೇಲಿನ ತಗಡು ಎಲ್ಲಿ ಹೋಗಿವೆ ಎಂದು ತಿಳಿದಂತಾಗಿವೆ. ಹಾಗೆಯೇ ಮನೆ ಹಂಚುಗಳು ಹಾರಿ ಬಿದ್ದು ಚೂರುಚೂರು ಆಗಿವೆ. ರಾತ್ರಿ ಮತ್ತೆ ಎಲ್ಲಿ ಮಳೆ ಬರುತ್ತದೋ, ಮನೆ ಬಿದ್ದು ಹಾನಿ ಆಗುತ್ತದೋ ಎಂಬ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಮನೆ ರಿಪೇರಿ ಕಾರ್ಯವನ್ನು ರಾತ್ರೋರಾತ್ರಿಯೇ ಕೈಗೊಂಡಿದ್ದಾರೆ.
ಧರೆಗುರುಳಿದ ಮರಗಳು:  ತಂಡಗುಂದ ಗ್ರಾಮದಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದು, ಮನೆಯಲ್ಲಿ ಯಾರಿಗೂ ಹಾನಿ ಆಗದೇ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಕೊಳಗಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಮರಗಳು ಉರುಳಿಬಿದ್ದಿವೆ. ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಕಾರಣ ಈ ಭಾಗದ ಗ್ರಾಮಸ್ಥರು ರಾತ್ರಿ ಕತ್ತಲಲ್ಲಿ ದಿನ ಕಳೆಯುವಂತಾಗಿದೆ. ಗ್ರಾಮದಲ್ಲಿ ಸಾಕಷ್ಟು ಮರಗಳು ಉರುಳಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇನ್ನೂ ಹಲವಾರು ಗ್ರಾಮಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿರುವ ಸಾಧ್ಯತೆ ಇದೆ. ಮಳೆ ಗಾಳಿ ಜೊತೆಗೆ ಸಿಡಿಲಿನ ಆರ್ಭಟ ಸಾಕಷ್ಟು ಕೇಳಿಬಂದಿತ್ತು. ಹಾನಿಯ ಅಂದಾಜು ಶುಕ್ರವಾರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟಾಗ ತಿಳಿಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶುಕ್ರವಾರ ತಹಸೀಲ್ದಾರ್ ಭೇಟಿ:  ತಾಪಂ ಮಾಜಿ ಅಧ್ಯಕ್ಷ ಕೊಳಗಿ ರೇವಣಪ್ಪ 'ಕನ್ನಡಪ್ರಭ'ದೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಗ್ರಾಮದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ ಎಂಬ ಸಂಗತಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಗೆ ತಿಳಿಸಲಾಗಿದೆ. ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.