ಶಿವಮೊಗ್ಗ

ಇನ್ಸ್‌ಪೆಕ್ಟರ್ ದುಂಡಾವರ್ತನೆಗೆ ಬ್ರೇಕ್ ಹಾಕಿ

Published On :

ಕ.ಪ್ರ.ವಾರ್ತೆ    ಸಾಗರ    ಮೇ 30
ಇಲ್ಲಿನ ಸಾರಿಗೆ ಇಲಾಖೆಯಲ್ಲಿನ ಬ್ರೇಕ್ ಇನ್ಸ್‌ಪೆಕ್ಟರ್ ಈಶ್ವರ ಅವರ ದುಂಡಾವರ್ತನೆ ಖಂಡಿಸಿ ಶುಕ್ರವಾರ ಸಾರ್ವಜನಿಕರು ಎಆರ್‌ಟಿಓ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
 ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅರುಣಕುಮಾರ್ ಗಡಿಕಟ್ಟೆ, ಸಾಗರದ ಆರ್.ಟಿ.ಓ. ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನಸಾಮಾನ್ಯರು ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳಬೇಕಾದರೂ ಮದ್ಯವರ್ತಿಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬ್ರೇಕ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಈಶ್ವರ್ ಎಂಬುವವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
 ಗುರುವಾರ ಸಿದ್ದಾಪುರಕ್ಕೆ ವಾಹನದಲ್ಲಿ ಮದುವೆ ಕಾರ್ಯಕ್ಕೆ ಹೊರಟಿದ್ದವರನ್ನು ಅಡ್ಡಗಟ್ಟಿ ಹೆಚ್ಚಿನ ಜನರನ್ನು ಸಾಗಿಸುತ್ತಿದ್ದೀರಿ ಎಂದು ವಾಹನ ಸಮೇತ ಜನರನ್ನು ಕಚೇರಿಗೆ ಕರೆದು ತರಲಾಗಿದೆ. ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನರನ್ನು ಹಾಗೂ ವಾಹನವನ್ನು ಕಚೇರಿಯಲ್ಲಿ ನಿಲ್ಲಿಸಿಕೊಂಡು ಮದುವೆ ಕಾರ್ಯಕ್ಕೆ ಹೋಗುವುದನ್ನು ತಪ್ಪಿಸಲಾಗಿದೆ ಎಂದು ದೂರಿದರು.
ರು. 5 ಸಾವಿರ ಲಂಚಕ್ಕೆ ಬೇಡಿಕೆ: ಮದುವೆಗೆ ಹೊರಟಿದ್ದ ಕುಟುಂಬ ಅತ್ಯಂತ ಬಡತನದಿಂದ ಕೂಡಿದ್ದು, ಬಾಡಿಗೆ ವಾಹನದಲ್ಲಿ ಹೋಗುತ್ತಿದೆ. ವಾಹನ ಚಾಲಕರ ಹತ್ತಿರ ಬ್ರೇಕ್ ಇನ್ಸ್‌ಪೆಕ್ಟರ್ ಈಶ್ವರ ಅವರು ಐದು ಸಾವಿರ ರು. ಲಂಚ ಕೊಡಿ. ಇಲ್ಲದಿದ್ದರೆ ನ್ಯಾಯಾಲಯಕ್ಕೆ ನಿಮ್ಮ ವಾಹನ ಹಾಜರುಪಡಿಸಿ 50 ಸಾವಿರ ರು. ದಂಡ ಹಾಕುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
 ಈಗಾಗಲೆ ಆರ್.ಟಿ.ಓ. ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ವಿಧಾನಸಭಾಧ್ಯಕ್ಷರ ಗಮನಕ್ಕೂ ತರಲಾಗಿದೆ. ತಕ್ಷಣ ಬ್ರೇಕ್ ಇನ್ಸ್‌ಪೆಕ್ಟರ್ ಈಶ್ವರ ಅವರನ್ನು ವರ್ಗಾವಣೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಸೂಲಿಯ ಅಡ್ಡೆ: ನಗರಸಭೆ ಸದಸ್ಯ ಸುಂದರಸಿಂಗ್ ಮಾತನಾಡಿ, ಸಾಗರ ಆರ್.ಟಿ.ಓ. ಕಚೇರಿ ವಸೂಲಿಯ ಅಡ್ಡೆಯಾಗಿದೆ. ವಾಹನ ಸವಾರರು ಲೈಸೆನ್ಸ್, ಪರವಾನಿಗೆ ಪಡೆಯಲು ಬಂದರೆ ಸಾವಿರಾರು ರೂಪಾಯಿ ಲಂಚ ನೀಡಬೇಕಾದ ಸ್ಥಿತಿ ಇದೆ. ಶ್ರೀಮಂತರು ತಪ್ಪು ಮಾಡಿದರೆ ಲಂಚ ಪಡೆದು ಬಿಟ್ಟು ಕಳಿಸುವ ಅಧಿಕಾರಿಗಳು ಬಡವರ ಬಗ್ಗೆ ಕನಿಕರ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಇಂತಹ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.
 ಬಂಗಾರೇಶ್ವರ್, ರಮೇಶ್ ಗೌಡ, ಶಶಿಧರ್, ಕೊಳ್ಳೆ ಪರಮೇಶ್ವರ್, ರಾಘವೇಂದ್ರ, ಗಣಪತಿ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.