ತುಮಕೂರು

ಪಟ್ಟಿಗೆ ಸೇರಲು ಆಧಾರ್ ಮಾನದಂಡವಾಗಲಿ

Published On :

ಕ.ಪ್ರ.ವಾರ್ತೆ   ತುಮಕೂರು   ಏ.8
ಮತದಾರರ ಪಟ್ಟಿ ಸೇರ್ಪಡೆಗೆ ಆಧಾರ್ ಕಾರ್ಡ್ ಪರಿಗಣಿಸುವಂತೆ  ಅಭಿವೃದ್ಧಿ ರೆವೂಲ್ಯೂಷನ್ ಫೋರಂ (ಆರ್ಪ್) ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿದರು.
ರಾಜ್ಯಾದ್ಯಂತ  ಎಲ್ಲ ಮತದಾರರ ಪಟ್ಟಿಯಲ್ಲಿ ಲೋಪ - ದೋಷಗಳಾಗಿವೆ. ಕೆಲವು ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿರುವುದಿಲ್ಲ. ಕೆಲವರ ಹೆಸರು ಹೊಸದಾಗಿ ಸೇರ್ಪಡೆಯಾಗಬೇಕಾಗಿರುತ್ತದೆ. ಮತದಾರರ ಪಟ್ಟಿಯಲ್ಲಿ ಮತದಾರರು ತಮ್ಮ ಸೇರಿಸಲು ಹೆಚ್ಚಿನದಾಗಿ ಆಧಾರ್ ಕಾರ್ಡ್ನ್ನು ಲಗತ್ತಿಸಿರುತ್ತಾರೆ.
ಆದರೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳು ಮತದಾರರ ಪಟ್ಟಿಗೆ ಹೆಸರು ಸೇರಿಸಲು ದಾಖಲೆಯಾಗಿ ಆಧಾರ್ ಕಾರ್ಡ್ನ್ನು ಪರಿಗಣಿಸುತ್ತಿಲ್ಲ. ಆಧಾರ್ ಕಾರ್ಡ್ನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಿದ್ದು, ಸಾರ್ವಜನಿಕರ ಎಲ್ಲ ಉದ್ದೇಶಗಳಿಗೂ ಆಧಾರ್ ಕಾರ್ಡ್ನ್ನು ಪರಿಗಣಿಸಬಹುದೆಂದು ತಿಳಿಸಿದೆ. ಆಧಾರ್ ಕಾರ್ಡ್ನ್ನು ಬಳಸುವ ಕುರಿತು ಹೆಚ್ಚಿನ ಪ್ರಚಾರ ಕೂಡ ಮಾಡಲಾಗಿದೆ. ಆದರೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ದಾಖಲೆಯಾಗಿ ಆಧಾರ್ ಕಾರ್ಡ್ ಪರಿಗಣಿಸದೆ ಇರುವುದು ಮತದಾರರ ಮೂಲಭೂತ ಹಕ್ಕನ್ನೇ ಕಸಿದಂತಾಗುತ್ತದೆ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ ರಮೇಶ್  ತಿಳಿಸಿದ್ದಾರೆ.
ಸ್ಪಷ್ಟ ಸೂಚನೆ ನೀಡಿಲ್ಲ: ಏ.6 ರಂದು ತುಮಕೂರು ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಖುದ್ದಾಗಿ ಚರ್ಚಿಸಿದ್ದು, ಅವರು ಮತದಾರರ ಪಟ್ಟಿಗೆ ಆಧಾರ್ ಕಾರ್ಡ್ನ್ನು ಪರಿಗಣಿಸುವ ಬಗ್ಗೆ ಬಿಎಲ್ಓ ಹ್ಯಾಂಡ್ ಪುಸ್ತಕದಲ್ಲಿ ಸ್ಪಷ್ಟ ಸೂಚನೆ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ. ತುಮಕೂರು ನಗರದಲ್ಲಿಯೇ ಸುಮಾರು 10ರಿಂದ 15 ಸಾವಿರ ಮತದಾರರು ಮತದಾನದಿಂದ ವಂಚಿತರಾಗುವ ಸಂಭವ ಇರುತ್ತದೆ. ಈಗಾಗಲೇ ಕಳೆದ ನಗರಸಭೆ ಚುನಾವಣೆಯಲ್ಲಿ ಆಧಾರ್ ಕಾರ್ಡ್ನ್ನು ಪರಿಗಣಿಸಲಾಗಿದೆ. ಆದ್ದರಿಂದ ರಾಜ್ಯಾದ್ಯಾಂತ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಧಾರ್ ಕಾರ್ಡನ್ನು ಪರಿಗಣಿಸಬಹುದೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮತದಾರ ನೋಂದಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಆದೇಶ ಹೊರಡಿಸಬೇಕೆಂದು ಕೋರಿದ್ದಾರೆ.


ಮುಂಗಡಪತ್ರಕ್ಕೆ ಅವಮಾನ
ಈ ಬಾರಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿದ ಮುಂಗಡಪತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಅವಮಾನ ಮಾಡಿದ್ದಾರೆ ಎಂದು ಕುಂದರನಹಳ್ಳಿ ರಮೇಶ್ ಆರೋಪಿಸಿದ್ದಾರೆ. ಪರಮಶಿವಯ್ಯ ಅವರ ವಾಟರ್ ಗ್ರಿಡ್ ಕೆನಾಲ್ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆದರೆ ಸಚಿವ ಸೊಗಡು ಈ ಯೋಜನೆಗೆ ರಾಜಕೀಯ ಬಣ್ಣ ಕಟ್ಟಿ ಮಾತನಾಡಿರುವುದು ಸಚಿವ ಸಂಪುಟಕ್ಕೆ ಮಾಡಿದ ಅವಮಾನ. ಹಾಗೂ ಮುಂಗಡಪತ್ರಕ್ಕೆ ಮಾಡಿದ ಅಪಚಾರ. ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲು ಅಥವಾ ರಾಜ್ಯಪಾಲರಿಗೆ ದೂರು ನೀಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.