ಶಿರಾದಲ್ಲಿ ಉತ್ತಮ ಸೇವೆ ಮಾಡಿದ್ದೇನೆಂಬ ಆತ್ಮತೃಪ್ತಿ ನನಗೆ
ಶಿರಾ: ಅತ್ಯಂತ ಬರಪೀಡಿತ ಪ್ರದೇಶವಾದ ಶಿರಾ ಭಾಗದಲ್ಲಿ ಕೇವಲ 61 ದಿನಗಳಲ್ಲಿಯೇ ಉತ್ತಮ ಸೇವೆಯನ್ನು ಮಾಡಿದ್ದೇನೆಂಬ ಆತ್ಮತೃಪ್ತಿ ನನಗಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಯಾವುದೇ ಅಧಿಕಾರಿಗೆ ಶಿರಾ ಭಾಗದ ಜನತೆ ನಿರಂತರವಾಗಿ ಸಹಕಾರ ನೀಡುತ್ತಾರೆ ಎನ್ನುವುದಕ್ಕೆ ನಾನೇ ಜ್ವಲಂತ ಸಾಕ್ಷಿ ಎಂದು ತಹಸೀಲ್ದಾರ್ ಕಾಂತರಾಜು ತಿಳಿಸಿದರು. ಅವರು ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ನೇಮಕಗೊಂಡ ಆರಂಭ ದಿನದಿಂದಲೂ ನಾನು ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಿಯಾಗಿ ನಿದ್ರೆಯನ್ನೂ ಮಾಡಿಲ್ಲ. ಇಲ್ಲಿನ ಕಂದಾಯ ಇಲಾಖೆಯ ಅನೇಕ ಸಿಬ್ಬಂದಿಯ ಸಹಕಾರ ನಿಜಕ್ಕೂ ನನ್ನ ಕರ್ತವ್ಯಕ್ಕೆ ಬೆನ್ನೆಲುಬಾಗಿತ್ತು. ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾದಾಗ ಅನೇಕ ಸಾರ್ವಜನಿಕರು ನೇರವಾಗಿ ದಂದೆ ನಡೆಯುವ ಸ್ಥಳಗಳನ್ನು ತೋರಿಸಿ ಸಹಕಾರ ನೀಡಿದ್ದಾರೆ. ವಿಧಾನಸಭಾ ಚುನಾವಣೆಯ ಸಂಬಂಧ ಕಾನೂನನ್ನು ಬಿಗಿಗೊಳಿಸುವ ಅನಿವಾರ್ಯತೆ ಒದಗಿ ಬಂದಾಗ ಹಲವು ಸಂಕಷ್ಟಗಳು ಎದುರಾದರೂ ಜಗ್ಗದೆ ಕಾರ್ಯ ನಿರ್ವಹಿಸಿದ್ದೇನೆ. ಮುಂದೂ ಕೂಡ ಎಲ್ಲಾ ಕಡೆಯಲ್ಲೂ ಉತ್ತಮ ಕರ್ತವ್ಯ ನಿರ್ವಹಿಸುತ್ತೇನೆ ಎಂಬ ಅಚಲ ವಿಶ್ವಾಸ ನನ್ನಲ್ಲಿದೆ ಎಂದರು.
ಗ್ರೇಡ್-2 ತಹಸೀಲ್ದಾರ್ ಆಗಿದ್ದ, ಪುಟ್ಟನರಸಪ್ಪ ಅವರು ಗ್ರೇಡ್-1 ತಹಸೀಲ್ದಾರ್ ಆಗಿ ಮಾನ್ವಿ ತಾಲೂಕಿಗೆ ವರ್ಗವಾದ ಹಿನ್ನೆಲೆಯಲ್ಲಿ ಅವರನ್ನೂ ಕೂಡ ಇದೇ ಸಂದರ್ಭದಲ್ಲಿ ಬೀಳ್ಕೊಡಲಾಯಿತು. ಪ್ರಭಾರ ತಹಸೀಲ್ದಾರ್ ಪಾಂಡುರಂಗಪ್ಪ, ಎನ್.ಈಶ್ವರಯ್ಯ, ಚುನಾವಣಾ ಶಿರಸ್ತೆದಾರ್ ಲಕ್ಷ್ಮೀಕಾಂತ್, ಕಂದಾಯ ತನಿಖಾಧಿಕಾರಿ ಜುಂಜೇಗೌಡ, ನಗರಸಭಾ ಆಯುಕ್ತ ಬಿ.ಟಿ.ರಂಗಸ್ವಾಮಿ, ಪಶುಪಾಲನಾ ಇಲಾಖೆಯ ನಿರ್ದೇಶಕ ಡಾ.ಗೌಮು ನಾಗರಾಜು, ಬಿಇಓ ರಾಜ್ಕುಮಾರ್, ರಾಜೇಶ್, ಮತ್ತಿತರರು ಹಾಜರಿದ್ದರು.
ಇಂದು ಜಾನಪದ ಕಲಾ ಉತ್ಸವ
ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಜಾನಪದ ಪರಿಷತ್ತು ಜಿಲ್ಲಾ ಘಟಕ, ಕನ್ನಡ ವಿಭಾಗ, ಸರ್ಕಾರಿ ಕಲಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಗೂ ಡಾ.ಎಸ್.ಕೆ.ಕರೀಂಖಾನ್ ಶತಮಾನ ಸ್ಮರಣೆ ಹಾಗೂ ವಿಚಾರ ಸಂಕಿರಣ ಮತ್ತು ಜಾನಪದ ಕಲಾ ಉತ್ಸವ ಏ.9ರಂದು ಬೆಳಿಗ್ಗೆ 10ಕ್ಕೆ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ರಾಜ್ಯ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಪರಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ, ಮತ್ತು ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿ ಹಾಗೂ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರು ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

