ನಂಬಿಕೆ ದ್ರೋಹಿ ನಾಗೇಶ್ ಸೋಲಲಿ
ಕ.ಪ್ರಭ. ವಾರ್ತೆ ತಿಪಟೂರು ಏ.10
ನಂಬಿಸಿ ಮೋಸ ಮಾಡಿದ, ಬೆನ್ನಿಗೆ ಚೂರಿ ಹಾಕಿದ ಶಾಸಕ ನಾಗೇಶ ಅವರನ್ನು ಕಲ್ಪತರು ನಾಡಿನ ಪ್ರಬುದ್ಧ ಮತದಾರ ಮನೆಗೆ ಕಳುಹಿಸಬೇಕು ಎಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ತಾಲೂಕಿನ ಬಿದರೆಗುಡಿ ದೇವಾಲಯದ ಆವರಣದಲ್ಲಿ ಬುಧವಾರ ನಡೆದ ಕೆಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಪತರು ನಾಡಿನ ಪ್ರಬುದ್ಧ ಮತದಾರರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಮನವಿಗೆ ಓಗೊಟ್ಟು ನಾಗೇಶ್ ಅವರನ್ನು ಶಾಸಕರನ್ನಾಗಿ ಆರಿಸಿದ್ದರು. ಅಂದು ನಾನು ನೀಡಿದ ವಾಗ್ದಾನದಂತೆ ಹೊನ್ನವಳ್ಳಿ ಏತ ನೀರಾವರಿ, ರಸ್ತೆ ಅಗಲೀಕರಣ, ದಲಿತ ಕಾಲೋನಿಗಳ ಅಭಿವೃದ್ದಿ, ಗ್ರಾಮೀಣ ರಸ್ತೆಗಳಿಗೆ ಸೇರಿದಂತೆ ನೂರಾರು ಕೋಟಿ ಹಣ ನೀಡಿದೆ. ಆದರೆ ನನ್ನ ಹೆಸರಿನಲ್ಲಿ ಗೆದ್ದ ನಾಗೇಶ್ ವಿರೋಧಿ ಬಣ ಸೇರಿ ನನ್ನ ಬೆನ್ನಿಗೆ ಚೂರಿ ಹಾಕಿದ್ದರಿಂದ ನಾಗೇಶ ಅವರನ್ನು ಈ ಬಾರಿ ಮನೆಗೆ ಕಳುಹಿಸಿ ಎಂದು ಯಡಿಯೂರಪ್ಪ ಸಾವಿರಾರು ರೈತರು ತುಂಬಿದ ಸಭೆಯಲ್ಲಿ ಮನವಿ ಮಾಡಿದರು.
ಈ ಕೃತಘ್ನನನ್ನು ಗೆಲ್ಲಿಸಿದರೆ ಆತ ನಿಮ್ಮ ಬೆನ್ನಿಗೂ ಚೂರಿ ಹಾಕದೆ ಬಿಡಲಾರ. ಈ ನಿಟ್ಟಿನಲ್ಲಿ ನಿಮಗೆಲ್ಲಾ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೆ ಮತ್ತೊಮ್ಮೆ ನಾಗೇಶನಿಗೆ ಮತ ನೀಡದೆ ಕೆಜೆಪಿ ಅಭ್ಯರ್ಥಿ ಲೋಕೇಶ್ವರ್ ಹೆಚ್ಚಿನ ಮತ ನೀಡಿ ಗೆಲ್ಲಿಸಿಕೊಡಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಸಾಲ ಮನ್ನಾ: ರಾಜ್ಯದ ಜನತೆ ಕೆಜೆಪಿ ಅಧಿಕಾರಕ್ಕೆ ತಂದಲ್ಲಿ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ಅನ್ನದಾತರ ರು. 1 ಲಕ್ಷ ವರೆಗಿನ ಸಾಲ ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಂದರ್ಭದಲ್ಲಿ ಘೋಷಿಸಿದರು.
ಪಕ್ಷದ ಪ್ರಣಾಳಿಕೆಯಲ್ಲಿ ನಗರ, ಹಳ್ಳಿಗಳ ಮತ್ತು ಅಲ್ಲಿನ ಜನತೆಯ ಅಭಿವೃದ್ಧ್ದಿ, ಸಂಕಷ್ಟ ನಿವಾರಣೆ, ಬಡತನ ನಿರ್ಮೂಲನೆ, ದಲಿತ, ಮುಸ್ಲಿಂ ಸೇರಿದಂತೆ ಎಲ್ಲಾ ವರ್ಗಗಳ ಏಳಿಗೆಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ, ಹಾಲಿಗೆ ಸಬ್ಸಿಡಿ, ಕೆರೆಗಳಿಗೆ ನೀರು ತುಂಬಿಸುವಿಕೆ, ಸಾಲಮನ್ನಾ, ಸೈಕಲ್ ವಿತರಣೆಯಂತಹ ಜನಪರ ಕಾರ್ಯಕ್ರಮ ಜಾರಿಗೊಳಿಸಿದ್ದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಬಿಜೆಪಿ ನಿರ್ಮೂಲನೆ ಮಾಡಿ ಕೆಜೆಪಿಯನ್ನೇ ಅಧಿಕಾರಕ್ಕೆ ತರಲು ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕೆಂದರು.
ಮುದುಡಿದ ಬಿಜೆಪಿ: ಬೆಂಗಳೂರಿನಲ್ಲಿ ಬಿಜೆಪಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಆಂದೋಲನಾ ಕಾರ್ಯಕ್ರಮಕ್ಕೆ ಡೆಲ್ಲಿ ನಾಯಕರು ಬರಲಾಗದೇ ಇರುವುದೇ ಅವರಿಗೆ ಅಶುಭ ಸೂಚನೆ. ಯಾವುದೇ ಕಾರಣಕ್ಕೂ ರಾಜ್ಯದ ಮತದಾರ ಬಿಜೆಪಿ ಬೆಂಬಲಿಸಲ್ಲ. ಸುಖಾಸುಮ್ಮನೆ ನನಗೆ ತೊಂದರೆ, ಅವಮಾನ ಬಳುವಳಿಕೊಟ್ಟ ಬಿಜೆಪಿಯನ್ನು ರಾಜ್ಯದ ಮತದಾರ ಮುಗಿಸಲು ಮೇ.5ರನ್ನು ಎದುರು ನೋಡುತ್ತಿದ್ದಾನೆ ಎಂದರು.
ಕಾಂಗ್ರೆಸ್ ಬಿಜೆಪಿಗೆ ಮತ ನೀಡಬೇಡಿ: ಮಾಜಿ ಶಾಸಕ ಬಿ. ನಂಜಾಮರಿ ಮಾತನಾಡಿ, ಕೆಜೆಪಿ ಕಾರ್ಯಕರ್ತರೇ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ನಾಗೇಶ್ ಗೆಲ್ಲದಂತೆ ನೋಡಿಕೊಳ್ಳಬೇಕು. ಸಂಸದ ಜಿ.ಎಸ್. ಬಸವರಾಜ್ ಮಾತನಾಡಿ, ಬಿಜೆಪಿ ಶಾಸಕ ನಾಗೇಶ್ ಯಾವ ಕಾರಣಕ್ಕೂ ಗೆಲ್ಲಬಾರದು. ಆತ ದ್ರೋಹಿ. ಕಾಂಗ್ರೆಸ್ ಮುಕಂಡರು ಜಾತೀಯನ್ನೇ ಮುಂದು ಮಾಡಿಕೊಂಡು ಹೊರಟಿರುವ ಮಾಹಿತಿ ಇದೆ. ನಾನು ಕಾಂಗ್ರೆಸ್ಗೆ ಮತ ಹಾಕಲು ಹೇಳುತ್ತಿದ್ದೇನೆ ಎಂದು ಇಲ್ಲಿ ಕೆಲವರು ಗೊಂದಲ ಸೃಷ್ಠಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿಗೆ ಮತ ನೀಡಿ ಎಂದು ಎಲ್ಲಿಯೂ ಹೇಳಿಲ್ಲ, ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಜೆಪಿ ಅಭ್ಯರ್ಥಿ ಲೋಕೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

