ತುಮಕೂರು

ಮದ್ಯವ್ಯಸನಿಗಳೇ ಕುಡಿತ ಬಿಡಿ: ಸ್ವಾಮೀಜಿ ಕಿವಿಮಾತು

Published On :

ಕ.ಪ್ರ. ವಾರ್ತೆ  ಹುಳಿಯಾರು  ಏ.13
ಕುಡಿತಕ್ಕೆ ದಾಸರಾಗಿ ಜೀವನದಲ್ಲಿ ತಾವು ನೆಮ್ಮದಿಯಿಂದಿರದೆ ತಮ್ಮ ಸಂಸಾರದಲ್ಲಿನ ನೆಮ್ಮದಿಯನ್ನು ಹಾಳುಮಾಡಿಕೊಂಡು, ಜನರಿಂದ ದಿನ ನಿತ್ಯ ಹಿಡಿಶಾಪ ಹಾಕಿಸಿಕೊಳ್ಳುತ್ತಾ, ಜೀವನವನ್ನು ನರಕದತ್ತ ಕೊಂಡೊಯುತ್ತಿರುವ ಮದ್ಯವ್ಯಸನಿಗಳೇ ನಿಮ್ಮ ಮನಸ್ಸನ್ನು ಪರಿಪಕ್ವವಾಗಿಸಿಕೊಂಡು ಕುಡಿತವನ್ನು ಬಿಟ್ಟು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಅರಸೀಕೆರೆ ಮಹಾಸಂಸ್ಥಾನದ ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.
ಹುಳಿಯಾರಿನ ಸೀತಾರಾಮ ಕಲ್ಯಾಣಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಗ್ರಾಮಾಭಿವೃದ್ಧಿ ಯೋಜನೆಯಡಿ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ವಿಪ್ರಪ್ರತಿಷ್ಠಾನ, ಮದ್ಯವರ್ಜನ ವ್ಯವಸ್ಥಾಪನ ಸಮಿತಿಯ ಸಹಯೋಗದಲ್ಲಿ  ಆಯೋಜಿಸಿರುವ ಒಂದು ವಾರ ಕಾಲದ 577ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
 ಮಾನವ ಜನ್ಮವೆಂಬುದು ಶ್ರೇಷ್ಠವಾದ್ದು, ನಾವು ನಮ್ಮ ಮನಸ್ಸಿನ ಚಂಚಲತೆಗೆ ಬಲಿಯಾಗಿ ಹತ್ತು ಹಲವು ಕಾರ್ಯಗಳನ್ನು ಕಾರಣವಿಲ್ಲದೆ ಮಾಡುತ್ತೇವೆ. ಅಂತಹ ಕಾರ್ಯಗಳಗಳಲ್ಲಿ ಮದ್ಯಪಾನ ಮಾಡುವುದನ್ನು ಕಲಿಯುತ್ತಾರೆ. ಆದರೆ ಕುಡಿಯುವರಿಗೆ ತಾವು ಮಾಡುತ್ತಿರುವುದು ತಪ್ಪು, ಅದರಿಂದ ಆಗುವಂತ ನಷ್ಟ, ತೊಂದರೆ, ಸಮಸ್ಯೆಗಳು ಎಂತಹವು ಎಂಬುದನ್ನು ಮನವರಿಕೆ ಮಾಡಿಕೊಡುವ ಕಾರ್ಯ ಆಗಬೇಕಿದ್ದು, ಆ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮುಂದಾಗಿದೆ. ಜೀವನದಲ್ಲಿ ನಮ್ಮ ನಡೆ, ನುಡಿ, ದಿನನಿತ್ಯದ ಕಾರ್ಯಚಟುವಟಿಕೆಗಳು ಉತ್ತವಾಗಿದ್ದಾಗ ನಮ್ಮನ್ನು ಸಮಾಜ ಗೌರವಿಸುತ್ತದೆ ಎಂದರು.
ಉತ್ತಮರನ್ನು ಆಯ್ಕೆ ಮಾಡಿ: ಚುನಾವಣೆ ಸಂದರ್ಭದಲ್ಲಿ ಕುಡಿತದ ತೀವ್ರತೆ ಹೆಚ್ಚಾಗುವುದು ಸಾಮಾನ್ಯವಾಗಿದ್ದು, ಸಾಕಷ್ಟು ಜನ ಕುಡಿತಕ್ಕೆ ದಾಸರಾಗುತ್ತಾ ಉತ್ತಮ ಜನಪ್ರತಿನಿಧಿಗಳ ಆಯ್ಕೆ ಮಾಡುವಲ್ಲಿ ವಿಫಲರಾಗುತ್ತಿದ್ದು, ಬಾಟಲಿಯ ಆಸೆಗೆ ಬಾಯೊಡ್ಡದೇ ಯಾರು ಸಮಾಜಕ್ಕೆ ಉತ್ತಮ ಕಾರ್ಯ ಮಾಡುತ್ತಾರೆ ಎಂಬುದನ್ನು ಅರಿತುಕೊಂಡು ಮತಚಲಾಯಿಸಿ ಎಂದರು. ಮಾನವನ ಜೀವನದಲ್ಲಿ ಬದಲಾವಣೆಯಾದರೆ ಸಮಾಜವೇ ಬದಲಾಣೆಯಾಗುತ್ತದೆ. ಇದಕ್ಕೆಲ್ಲಾ ನಮ್ಮ ನಾಗರಿಕತೆಗಳು ಬೆಳೆದು ಬಂದ ಮಾರ್ಗ ನಮಗೆಲ್ಲ ತಿಳಿದಿರುವ ವಿಷಯವಾಗಿದೆ ಎಂದರು. ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡಿರುವ ಮದ್ಯವ್ಯಸನಿಗಳು ಮುಂದಿನ ಒಂದು ವಾರದ ನಂತರ ಪಾನಮುಕ್ತರಾಗಿ ದೇಶ, ತಮ್ಮ ಸಂಸಾರಕ್ಕೆ ಉತ್ತಮ ಪ್ರಜೆಯಾಗಲಿ ಎಂದು ಹಾರೈಸಿದರು.
 ಜಿಲ್ಲಾ ನಿರ್ದೇಶಕ ಪುರುಷೋತ್ತಮ್, ಮದ್ಯವರ್ಜನ ಶಿಬಿರದ ಅಧ್ಯಕ್ಷ ನಟರಾಜ್‌ಗುಪ್ತ, ನಿವೃತ್ತ ಶಿಕ್ಷಕ ಹೆಚ್.ಎಸ್. ಲಕ್ಷ್ಮಿನರಸಿಂಹಯ್ಯ, ಮುಖಂಡರಾದ ನಂದಿಹಳ್ಳಿ ಶಿವಣ್ಣ, ಜಲಾಲ್ ಸಾಬ್, ಧರ್ಮಸ್ಥಳ ಸಂಘದ ಶಿಬಿರಾಧಿಕಾರಿ ನಾಗೇಶ್, ಆರೋಗ್ಯಾಧಿಕಾರಿ ಜಯಲಕ್ಷ್ಮಿ, ರೋಹಿತಾಕ್ಷ, ಕಮಾಲಕರ್, ಕೆಂಕೆರೆ ಲೋಕೇಶ್, ಹೇಮಲತ ಸೇರಿದಂತೆ ಹೋಬಳಿಯ ಎಲ್ಲಾ ಧರ್ಮಸ್ಥಳ ಸಂಘದ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.