ತುಮಕೂರು

24 ರಂದು ವಿವೇಕಾನಂದರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

Published On :

ಕ.ಪ್ರ. ವಾರ್ತೆ  ತುಮಕೂರು  ಏ.17
ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆಯ ಅಂಗವಾಗಿ ತುಮಕೂರು ವಿವಿ ತುಮಕೂರಿನ ರಾಮಕೃಷ್ಣ-ವಿವೇಕಾನಂದಾಶ್ರಮದ ಸಹಯೋಗದಲ್ಲಿ ಯುಗಪುರುಷ ಸ್ವಾಮಿ ವಿವೇಕಾನಂದ ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಏ. 24 ರಂದು ಆಯೋಜಿಸುತ್ತಿದೆ ಎಂದು ಸ್ವಾಮಿ ವೀರೇಶಾನಂದ ಸರಸ್ವತಿ ಶ್ರೀಗಳು ತಿಳಿಸಿದರು.
ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದಾಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ 150 ನೇ ಜನ್ಮ ವರ್ಷಾಚರಣೆಯನ್ನು ದೇಶವಷ್ಟೇ ಅಲ್ಲ, ಜಗತ್ತಿನ ವಿವಿಧೆಡೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ವಿವೇಕಾನಂದರ ಮಹಾನ್ ಆದರ್ಶಗಳನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಈ ರಾಷ್ಟ್ರೀಯ ವಿಚಾರ ಸಂಕಿರಣವನ್ನು ತುಮಕೂರು ವಿವಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
24 ರಂದು ಬೆಳಗ್ಗೆ 9.20 ಕ್ಕೆ ಉದ್ಘಾಟನಾ ಸಮಾರಂಭ ತುಮಕೂರು ವಿವಿಯ ಡಾ. ಶಿವಕುಮಾರಸ್ವಾಮಿಗಳ ಸಭಾಂಗಣದಲ್ಲಿ ಏರ್ಪಾಟಾಗಿದೆ. ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಹರ್ಷಾನಂದರು ಸಮಾರಂಭ ಉದ್ಘಾಟಿಸಲಿದ್ದಾರೆ. ಸುಮಾರು 800 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಗಣ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಸ್ವಾಮಿ ವಿವೇಕಾನಂದರ ತತ್ವಗಳ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ಕ್ಷೇತ್ರದ ಅವಶ್ಯಕತೆಗಳ ಕುರಿತು ನವದೆಹಲಿಯ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಶಾಂತಾತ್ಮನಂದಜೀ ಮಹಾರಾಜ್ ವಿಚಾರ ಮಂಡಿಸಲಿದ್ದಾರೆ. ವಿಜ್ಞಾನ ಮತ್ತು ಧರ್ಮ ಸಮನ್ವಯ - ಸ್ವಾಮಿ ವಿವೇಕಾನಂದರ ದೃಷ್ಟಿಕೋನ ಕುರಿತು ಗದಗ - ರಾಮಕೃಷ್ಣ - ವಿವೇಕಾನಂದಾಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿಯವರು ಮಾತನಾಡಲಿದ್ದಾರೆ.
ಜಾಗೃತ ಭಾರತ: ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಜಾಗೃತ ಭಾರತ ವಿಷಯದ ಕುರಿತು ಕೇರಳದ ರಾಮಕೃಷ್ಣ ಮಠದ ಸ್ವಾಮಿ ವೀರಭದ್ರಾನಂದಜೀ ಮಹಾರಾಜ್ ಮಾತನಾಡಲಿದ್ದಾರೆ. ಸ್ವಾಮಿ ವಿವೇಕಾನಂದರ ಮಾನವೀಯ ಹಾಗೂ ಸಾಮಾಜಿಕ ದೃಷ್ಟಿಕೋನ ಕುರಿತು ಮಂಗಳೂರಿನ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್‌ನ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ವಿಚಾರ ಮಂಡಿಸಲಿದ್ದಾರೆ. ಭಾರತದ ಆರ್ಥಿಕ ಹಿನ್ನೆಡೆ ಮತ್ತು ಪರಿಹಾರ - ಸ್ವಾಮಿ ವಿವೇಕಾನಂದರು ಕಂಡಂತೆ ಕುರಿತು ತುಮಕೂರಿನ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದರು ಮಾತನಾಡಲಿದ್ದಾರೆ.
ಸಮಾರೋಪ: ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆಯ ರಾಮಕೃಷ್ಣ - ಶಾರದಾಶ್ರಮದ ಹಿರಿಯ ಶ್ರೀಗಳಾದ ಸ್ವಾಮಿ ಜಗದಾತ್ಮನಂದಜೀ ಮಹಾರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಹಾಗೂ ಗದಗ -ಬಿಜಾಪುರದ ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿಯವರು ಸಾನಿಧ್ಯ ವಹಿಸಲಿದ್ದಾರೆ.
ಸಮ್ಮೇಳನದಲ್ಲಿ ತುಮಕೂರು ವಿವಿ ಕುಲಪತಿ ಡಾ. ಎಸ್.ಸಿ. ಶರ್ಮ ಸೇರಿದಂತೆ ಸಿಬ್ಬಂದಿ ವರ್ಗ ಪಾಲ್ಗೊಳ್ಳಲ್ಲಿದೆ. ಸುದ್ದಿಗೋಷ್ಠಿಯಲ್ಲಿ ತುಮಕೂರು ವಿವಿ ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ, ಅಧ್ಯಾಪಕರಾದ ಕೊಟ್ರೇಶ್, ಸೀಬಂತಿ ಪದ್ಮನಾಭ, ವೆಂಕಟರೆಡ್ಡಿ ರಾಮರೆಡ್ಡಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.