ಸ್ವಚ್ಛ, ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ
ಕ.ಪ್ರ. ವಾರ್ತೆ ಮಧುಗಿರಿ ಏ.17
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು ಸ್ವಚ್ಛ , ಸುಭದ್ರ ಆಡಳಿತಕ್ಕಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಕರೆ ನೀಡಿದರು.
ಮಂಗಳವಾರ ಮಧುಗಿರಿ ತಾಲೂಕು ಮಹಿಳಾ ಕಾಂಗ್ರೆಸ್ ವತಿಯಿಂದ ಇಲ್ಲಿನ ಎಂಎನ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ರಾಜಣ್ಣ, ಕಾಂಗ್ರೆಸ್ ಬಡವರ, ಕೂಲಿ ಕಾರ್ಮಿಕರ, ಅಲ್ಪಸಂಖ್ಯಾತರ ಹಾಗೂ ಎಲ್ಲ ಜಾತಿ ಬಡವರ ಪಕ್ಷ. ಹಾಗಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಏಕೈಕ ಪಕ್ಷ ಕಾಂಗ್ರೆಸ್. ಚುನಾವಣೆಯಲ್ಲಿ ರಾಜ್ಯದಲ್ಲಿ ಜನರ ಆಶೀರ್ವಾದದಿಂದ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತ ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಜಣ್ಣ ತಾವು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಎಲ್ಲ ವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿ ಕೊಡುವ ಹಾಗೂ ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಸ್ವಾಭಿಮಾನದ ಬದುಕು ಅಗತ್ಯ: ಹೆಣ್ಣುಮಕ್ಕಳು ಆರ್ಥಿಕ, ಸಾಮಾಜಿಕವಾಗಿ ಸಬಲೀಕರಣ ಹೊಂದುವ ನಿಟ್ಟಿನಲ್ಲಿ ಸ್ವಾಭಿಮಾನದ ಬದುಕು ಸಾಗಿಸಬೇಕು. ಹಳ್ಳಿಗಾಡು ಪ್ರದೇಶದಲ್ಲಿ ಉಪ ಕಸುಬು ಕೈಗೊಳ್ಳಲು ಡಿಸಿಸಿ ಬ್ಯಾಂಕ್ ವತಿಯಿಂದ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತದೆ. ಆ ನಿಟ್ಟಿನಲ್ಲಿ ಸ್ತ್ರಿಶಕ್ತಿ, ಸ್ವಸಹಾಯ ಸಂಘಗಳು ಸಾಲ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಮಹಿಳೆಯರು ಸ್ವಾಲಂಬಿ ಬದುಕು ಸಾಗಿಸುವ ಮೂಲಕ ಸಮಾಜದ ಮುಖ್ಯವಾಹನಿ ಸೇರುತ್ತಿರುವುದು ಶ್ಲಾಘನೀಯ ಎಂದರು.
ಗೆಲವು ಖಚಿತ: ತಾ.ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾರತಮ್ಮ ಮಾತನಾಡಿ, ರಾಜಣ್ಣ ಅವರ ಗೆಲವು ಖಚಿತ ಎಂದರು.
ಉದ್ಯಮಿ ಆರ್.ಸಿ. ವಿಜಯ್ಕುಮಾರ್ ಜೈನ್, ಮುಖಂಡ ಎಂ.ಜಿ. ಶ್ರೀನಿವಾಸಮೂರ್ತಿ, ಜಿ.ಪಂ.ಸದಸ್ಯ ಶಾಂತಲ ರಾಜಣ್ಣ, ಸುಮನ, ಮಂಜುಳಾ ಮಾತನಾಡಿದರು. ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಉಪಾಧ್ಯಕ್ಷೆ ಸಿದ್ಧಗಂಗಾಂಬಿಕೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಉಪಾಧ್ಯಕ್ಷ ತುಂಗೋಟಿ ರಾಮಣ್ಣ, ಕೋಟೆಕಲ್ಲಪ್ಪ, ಅದ್ಧೂರಿ ಗೌಡ, ಪುರಸಭೆ ಸದಸ್ಯರಾದ ಎನ್. ಗಂಗಣ್ಣ, ಎಂ.ಕೆ.ನಂಜುಂಡಯ್ಯ, ಶ್ರೀನಿವಾಸ್, ಅಯ್ಯೂಬ್, ಅಲೀಂ, ಮುಖಂಡರಾದ ಎಂ.ಎಸ್. ಶಂಕರನಾರಾಯಣ, ಡಿ.ಜಿ. ಶಂಕರನಾರಾಯಣಶೆಟ್ಟಿ, ಚಿಕ್ಕಣ್ಣ, ಗೋವಿಂದರಾಜು, ನಾರಾಯಣ, ರಂಗನಾಥಬಾಬು, ಶ್ರೀಧರ, ಚಂದ್ರಮ್ಮ,ಪಾರ್ವತಮ್ಮ, ಇಂದ್ರಮ್ಮ, ಹೊಸಕೆರೆ ಜಯಣ್ಣ, ವೆಂಕಟೇಶಬಾಬು, ಎಂ.ಎಸ್.ಚಂದ್ರಶೇಖರ್ ಇನ್ನು ಅನೇಕ ಮಹಿಳಾ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ನಾಗಮ್ಮ ಸ್ವಾಗತಿಸಿ, ಇಂದ್ರಮ್ಮ ನಿರೂಪಿಸಿ, ಪಾರ್ವತಮ್ಮ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

