ತುಮಕೂರು

ರಂಗ ವೃತ್ತಿ ಪರಿಣತಿ ರೂಢಿಸಿಕೊಳ್ಳದಿದ್ದರೆ ಪ್ರಗತಿ ಕಷ್ಟ

Published On :

ತುಮಕೂರು ಏ.19
ರಂಗಭೂಮಿಯಲ್ಲಿ ಕಲಾವಿದರು ವೃತ್ತಿ ಪರಿಣತಿ ಗಳಿಸದಿದ್ದರೆ ಪ್ರೇಕ್ಷಕರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು  ರಂಗ ವಿಮರ್ಶಕ ಗುಡಿಹಳ್ಳಿ ನಾಗರಾಜು ಎಚ್ಚರಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಪ್ರಯೋಗಶೀಲರ ಟ್ರಸ್ಟ್ ಆಯೋಜಿಸಿದ್ದ ಮೂರು ದಿನಗಳ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರು ಸಂಭಾಷಣೆ, ಭಾವಾಭಿನಯ, ಭಾಷಾ ಉಚ್ಛಾರಣೆ, ಸಂಗೀತದಲ್ಲಿ ಪಕ್ಕಾ ಆಗದಿದ್ದರೆ ಎಷ್ಟೇ ವಿಜೃಂಭಣೆಯಿದ್ದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹೊಸದಾಗಿ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯನ್ನು ಪ್ರವೇಶಿಸುತ್ತಿರುವ ಕಲಾವಿದರು ಹೆಚ್ಚಿನ ಗಮನ ನೀಡಬೇಕಾಗಿದೆ ಎಂದರು.
ರಂಗಭೂಮಿ ಎನ್ನುವುದೇ ಒಂದು ನಿರಂತರ ಪ್ರಯೋಗಶಾಲೆ. ಪ್ರತಿ ನಾಟಕವೂ ರಂಗದ ಮೇಲೆ ಕಲಾವಿದರು, ನಿರ್ದೇಶಕರು ನಡೆಸುವ ಪ್ರಯೋಗ. ಕಲಾವಿದರಿಗೆ ನಿನ್ನೆಯ ಹಂಗಿಲ್ಲ. ಹಾಗಾಗಿ ಪರಿಪಕ್ವತೆಯತ್ತ ಹೆಚ್ಚು ಗಮನ ಹರಿಸಬೇಕಾಗಿದೆ. ಹಲವು ಜನ ಕಲಾವಿದರು, ಸೃಜನಶೀಲರು ಸೇರಿ ಪ್ರಯೋಗಶೀಲರು ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.ಅದು ಇತರೆ ಸಂಸ್ಥೆಗಳ ರೀತಿ ಎತ್ತರಕ್ಕೆ ಬೆಳದು ನಾಡಿನ ಕೀರ್ತಿಯನ್ನು ಬೆಳಗುವಂತಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು. ನಾಡೋಜ ಅಂತಾರಾಷ್ಟ್ರೀಯ ತೊಗಲುಗೊಂಬೆಯಾಟ ಕಲಾವಿದ ಬೆಳಗಲ್ಲು ವೀರಣ್ಣ ಮಾತನಾಡಿ, ರಂಗಭೂಮಿ ಎಂಬುದು ಒಂದು ಪ್ರಬಲ ಮಾಧ್ಯಮ. ಕಾಳಿದಾಸ, ಭವಭೂತಿ ಕಾಲದಿಂದಲೂ ಜನರಿಗೆ ಮನರಂಜನೆಯ ಜೊತಗೆ, ಸಾಮಾಜಿಕ  ಮನಸ್ಸನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.ಕಳೆದ ಶತಮಾನದ ಫ್ರಾನ್ಸ್‌ಕ್ರಾಂತಿಯ ಕುರಿತೆ ಸಾವಿರಾರು ನಾಟಕಗಳು ಪ್ರದರ್ಶನಗೊಂಡಿರುವ ರಂಗಭೂಮಿಗೆ ಇರುವ ಚೈತನ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ ರಂಗಭೂಮಿ ಎನ್ನುವುದು ಇಂದು ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಒಳ್ಳೆಯ ಕಲಾವಿದರು ಸಿಗುವುದೇ ದೊಡ್ಡ ಸಾಹಸವಾಗಿದೆ. ಹಾಗಾಗಿ, ರಂಗಭೂಮಿಯತ್ತ ಬರುತ್ತಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಅವರನ್ನು ತಿದ್ದಿ ತೀಡಿ ಉತ್ತಮ ಕಲಾವಿದರನ್ನಾಗಿ ಮಾಡುವ ಕೆಲಸ ಆಗಬೇಕಾಗಿದೆ. ನಾಟಕ ಮನೆ ಮಹಾಲಿಂಗು ಮತ್ತು ಅವರ ಸ್ನೇಹಿತರು ಈ ಕೆಲಸವನ್ನು ಮಾಡುತ್ತಿದ್ದು, ನಿರಂತರ ನಾಟಕ ಪ್ರದರ್ಶನಕ್ಕೆ ಒಂದು ವೇದಿಕೆಯನ್ನು ಕಲ್ಪಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ನಾವೆಲ್ಲರೂ ಕೈಜೊಡಿಸಬೇಕಿದೆ.
ಅಂತಾರಾಷ್ಟ್ರೀಯ ಚಿತ್ರಕಲಾವಿದ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು ಅಪ್ಪಿನಕಟ್ಟೆ, ಪ್ರಯೋಗಶೀಲರು ಟ್ರಸ್ಟ್‌ನ ಟ್ರಸ್ಟಿ ವೆಂಕಟೇಶ್  ಮತ್ತಿತರರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ನಿಜಗುಣ ಪುರಂದರ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್ ಹಾಗೂ ಇತರರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.