ತುಮಕೂರು

ರೈಲಿಗೂ ತಟ್ಟಿತು ಚುನಾವಣಾ ಬಿಸಿ

Published On :

ಕ.ಪ್ರ.ವಾರ್ತ್ಣೆ ತುಮಕೂರು ಏ.25
ದಿನೇ ದಿನೇ ಚುನಾವಣಾ ಕಾವು ಏರುತ್ತಿದ್ದು ಈಗ ಅದರ ಬಿಸಿ ರೈಲಿಗೂ ತಟ್ಟಿದೆ.
ಗುರುವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡ ರಫೀಕ್ ಅಹಮದ್ ಅವರು ರೇಲ್ವೆ ನಿಲ್ದಾಣಕ್ಕೆ ತೆರಳಿ ಮತಯಾಚಿಸಿದರು. ಅಷ್ಟೆ ಅಲ್ಲದೆ ರೈಲಿನಲ್ಲಿ ಕುಳಿತ ತುಮಕೂರು ನಗರದ ಪ್ರಯಾಣಿಕರ ಬಳಿಯೂ ಮತ ಯಾಚಿಸಿದರು.
ಪ್ರತಿ ದಿನ ಸಾವಿರಾರು ಮಂದಿ ತುಮಕೂರಿನ ಪ್ರಯಾಣಿಕರು ಉದ್ಯೋಗ, ವ್ಯಾಪಾರ, ವಹಿವಾಟಿನ ಸಲುವಾಗಿ ಬೆಂಗಳೂರಿಗೆ ಹೋಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಫೀಕ್ ಅಹಮದ್ ರೇಲ್ವೆ ನಿಲ್ದಾಣಕ್ಕೆ ತೆರಳಿ ಮತಯಾಚಿಸಿದರು.
ಇದಕ್ಕೂ ಮೊದಲು ರಫೀಕ್ ಅಹಮದ್ ಅವರು ವಾಕಿಂಗ್ ಸ್ಪಾಟ್‌ಗೆ ಬೆಳ್ಳಂಬೆಳಗ್ಗೆ ಹೋಗಿ ಚುನಾವಣಾ ಪ್ರಚಾರ ಮಾಡಿದ್ದರು. ಈಗ ಕೆಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಕೂಡ ಇದೇ ಹಾದಿ ಹಿಡಿದ್ದಾರೆ. ಉಳಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ ಅವರು ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಹಾಗೆಯೇ ಗೋವಿಂದರಾಜು ಅವರು ಬುಧವಾರದಿಂದ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.
ಇಂದು ರಾಹುಲ್ ಗಾಂಧಿ ಪ್ರಚಾರ: ಈಗಾಗಲೇ ಒಂದು ಸುತ್ತಿನ ರೋಡ್ ಶೋ ಕೂಡ ಮುಗಿದಿದೆ. ಶುಕ್ರವಾರ ಬೆಳಗ್ಗೆ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಈ ಮೂಲಕ ತುಮಕೂರು ನಗರಕ್ಕೆ ಈ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಸ್ಟಾರ್ ಕ್ಯಾಂಪೇನರ್ ಬರುವಂತಾಗಿದೆ.
ಬಿಜೆಪಿ ಪರವಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬರಲಿದ್ದಾರೆ. ಇನ್ನು ಜೆಡಿಎಸ್‌ನಿಂದ ದೇವೇಗೌಡ ಬರುವವರಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಬಂದು ಹೋಗಿದ್ದಾರೆ. ಹಾಗೆಯೇ ಕೆಜೆಪಿಯಿಂದ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೂಡ ಆಗಮಿಸಲಿದ್ದಾರೆ. ಒಟ್ಟಾರೆಯಾಗಿ ದಿನೇ ದಿನೇ ಚುನಾವಣಾ ಕಾವು ಏರುತ್ತಿದೆ. ಒಂದೆಡೆ ಅಭ್ಯರ್ಥಿಗಳು ಪತ್ನಿಯರು ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ. ಇನ್ನೊಂದೆಡೆ ಪಕ್ಷದ ಕಾರ್ಯಕರ್ತರು, ಮತ್ತೊಂದೆಡೆ ಮುಖಂಡರು ಪಾದಯಾತ್ರೆ ಮೂಲಕ ಮತಬೇಟೆಗೆ ತೆರಳುತ್ತಿದ್ದಾರೆ. ಮಗದೊಂದು ಕಡೆ ಸ್ವತಃ ಅಭ್ಯರ್ಥಿಗಳೇ ರೋಡ್ ಶೋ ನಡೆಸಿ ಮತಯಾಚಿಸುತ್ತಿದ್ದಾರೆ.
ಎಸ್‌ಎಂಎಸ್ ನಲ್ಲಿ ಹರಿದಾಡುತ್ತಿದೆ: ಈಗಾಗಲೇ ಎಸ್‌ಎಂಎಸ್‌ನಲ್ಲೂ ಕೂಡ ಚುನಾವಣಾ ಪ್ರಚಾರದ ಭರಾಟೆ ಆರಂಭವಾಗಿದೆ. ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್‌ಲಾಲ್ ಅವರು 28 ಸಾವಿರ ಮಂದಿ ಮತದಾರರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಅವರ ಮೊಬೈಲ್‌ಗಳಿಗೆ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವ ಸಂದೇಶವನ್ನು ಕಳುಹಿಸಲು ಸಜ್ಜಾಗಿದ್ದಾರೆ. ಹಾಗೆಯೇ ತುಮಕೂರು ನಗರದಲ್ಲೂ ಕೂಡ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಲಾಗಿದೆ.
ಇನ್ನು ಒಂದೆರೆಡು ದಿನಗಳಲ್ಲಿ ಪ್ರಚಾರದ ಭರಾಟೆ ತೀವ್ರಗೊಳ್ಳಲಿದೆ. ಇನ್ನು ಚುನಾವಣೆಗೆ ಕೆಲವೇ ದಿನ ಇರುವಾಗಲೇ ಅಭ್ಯರ್ಥಿಗಳು ತಮ್ಮ ಪ್ರಚಾರದ ಭರಾಟೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.