ನೋಟಿನ ಮಾದರಿಯೇ ಇವರ ಓಟಿನ ಪಾಂಪ್ಲೆಟ್...
ತುರುವೇಕೆರೆ: ಇವರದ್ದು ಭ್ರಷ್ಟಾಚಾರ ದಮನ ಮಾಡುವುದೇ ಪರಮ ಧ್ಯೇಯ. ಕಾಸಿಗಾಗಿ ಓಟು ಮಾರಾಟ ಮಾಡಬೇಡಿ. ಓಟು ಮಾರಾಟ ಮಾಡಿಕೊಂಡರೆ ಓಟು ಪಡೆದು ಶಾಸಕನಾದವನು ನೋಟು ಮಾಡುವ ಕಾಯಕದಲ್ಲಿ ತಲ್ಲೀನನಾಗುತ್ತಾನೆ ಎಂದು ಕ್ಷೇತ್ರದ ಜನತೆಗೆ ಕಿವಿ ಮಾತು ಹೇಳುವ ಈ ಪಕ್ಷೇತರ ಅಭ್ಯರ್ಥಿ ಎನ್.ಸಿ.ಪ್ರಕಾಶ್ ತಮ್ಮ ಮತ ಪತ್ರವನ್ನು ನೋಟಿನ ಮಾದರಿಯಲ್ಲೇ ಮಾಡಿಸಿ ಮನೆ ಮನೆಗೆ ಹಂಚುತ್ತಿದ್ದಾರೆ.
ನೂರು ರೂಪಾಯಿಯ ಚಿತ್ರಣವಿರುವ ಈ ಕರ ಪತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ ಎನ್ನುವ ವಾಕ್ಯ ಘೋಷವನ್ನೂ ಮಾಡಿದ್ದಾರೆ. ಇವರ ಮನವಿ ಪತ್ರದಲ್ಲಿ ಭ್ರಷ್ಟಾಚಾರಿ ವಿರೋಧಿ ಆಂದೋಲನದ ಹರಿಕಾರರಾಗಿರುವ ಅಣ್ಣಾ ಹಜಾರೇ ಅವರೇ ಇವರ ಹೀರೋ. ಹೈಕಮಾಂಡ್. ನೀವು ಮೊದಲು ಭ್ರಷ್ಟಾಚಾರ ವಿರೋಧಿಗಳಾದರೆ ಮಾತ್ರ ನಿಮ್ಮ ಶಾಸಕರೂ ಭ್ರಷ್ಟಾಚಾರ ವಿರೋಧಿಗಳಾಗುತ್ತಾರೆ ಎಂಬ ಸಂದೇಶವನ್ನೂ ಸಹ ಎನ್.ಸಿ.ಪ್ರಕಾಶ್ ಸಾರಿದ್ದಾರೆ.
ಎಲ್ಲಾ ಹಂತಗಳಲ್ಲೂ ಭ್ರಷ್ಟಚಾರ ನಿಯಂತ್ರಣ ಮಾಡಲೇಬೇಕು ಎಂದು ಬಯಸಿ ಚುನಾವಣಾ ಅಖಾಡಕ್ಕೆ ಇಳಿದಿರುವ ಇವರು ಚುನಾವಣಾ ಆಯೋಗದವರು ಹಾಕಿರುವ ತಪಾಸಣಾ ಸ್ಥಳದಲ್ಲಿ ತಾವು ಮಾಡಿಸಿರುವ ಪಾಂಪ್ಲೆಟ್ನ ಬಾಬ್ತು ರಸೀತಿಯನ್ನು ಮನೆಯಲ್ಲೇ ಮರೆತು ಬಂದಿದ್ದರಂತೆ. ಬಹಳ ಹೊತ್ತು ಕಾಯಿಸಿ ಕಾಡಿಸಿದ ಪೋಲೀಸಪ್ಪನೊಬ್ಬ ಇವರಿಂದ ಕೈ ಬಿಸಿ ಮಾಡಿಸಿಕೊಂಡೇ ಇವರನ್ನು ಹೊರಗೆ ಬಿಟ್ಟನಂತೆ. ಅಖಾಡಕ್ಕೆ ಇಳಿಯುವ ಹಂತದಲ್ಲೇ ಭ್ರಷ್ಟಾಚಾರ ನಿಗ್ರಹಕ್ಕೆ ಮುಂದಾಗಿದ್ದ ಈ ಪಕ್ಷೇತರ ಅಭ್ಯರ್ಥಿ ಪ್ರಕಾಶ್ಗೆ ಕೇವಲ ಚೆಕ್ ಪೋಸ್ಟ್ನಲ್ಲೇ ಎಲ್ಲಾ ದಾಖಲೆಗಳು ಇದ್ದೇ ಯಾವುದೇ ಕೈ ಬಿಸಿ ಮಾಡದೇ ಹೊರಗೆ ಬರಲು ಸಾಧ್ಯವಾಗಲಿಲ್ಲ. ಇನ್ನು ಬೇರೆ ಕಡೆ ಹೇಗೋ ಎಂಬ ಚಿಂತೆ ಕಾಡುತ್ತಿದೆಯಂತೆ. ಈ ಸ್ಥಿತಿಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಅದೆಷ್ಟು ಹಣ ಚೆಲ್ಲಬೇಕೋ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ ಈ ಪ್ರಕಾಶ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

