ನೈತಿಕತೆ ಜೀವನದಲ್ಲಿ ಅಳವಡಿಸಿಕೊಳ್ಳಿ: ದಿನೇಶ್ ಗುಂಡೂರಾವ್
ಕ.ಪ್ರ.ವಾರ್ತೆ ತುಮಕೂರು ಆ. 8
ವಿದ್ಯಾರ್ಥಿಗಳ ನೈತಿಕ ಶಿಕ್ಷಣ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸರಿಯಾದ ಮಾರ್ಗದಲ್ಲಿ ಮುನ್ನೆಡೆಯಬಹುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.
ಸಿದ್ಧಗಂಗಾ ಮಠದ ಆವರಣದಲ್ಲಿ ಏರ್ಪಡಿಸಿದ್ಧ ಸಂಯುಕ್ತ ವಿದ್ಯಾರ್ಥಿ ಸಂಘದ 2013-14 ನೇ ಸಾಲಿನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಸನ್ಮಾರ್ಗದಲ್ಲಿ ನಡೆಯಲು ನೈತಿಕ ಶಿಕ್ಷಣ ಅಗತ್ಯ. ಸಿದ್ಧಗಂಗಾ ಮಠದಲ್ಲಿ ಓದುತ್ತಿರುವ ಸಾವಿರಾರು ಮಕ್ಕಳಿಗೆ ನೈತಿಕ ಶಿಕ್ಷಣ ಪಡೆಯುವ ಎಲ್ಲಾ ವಾತವರಣವನ್ನು ಡಾ. ಶಿವಕುಮಾರ ಸ್ವಾಮೀಜಿ ಕಲ್ಪಿಸಿಕೊಟ್ಟಿದ್ದಾರೆ. ಮಠದಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬಣ್ಣಿಸಿದರು.
ದೇಶದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಟಿಲ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಆದರೆ ಜನಸಂಖ್ಯಾ ಸ್ಫೋಟ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಮುಂದೆ ಒತ್ತಡದಲ್ಲಿ ಜೀವನ ಸಾಗಿಸುವ, ಕೆಲಸ ನಿರ್ವಹಿಸುವ ಸ್ಥಿತಿ ಬರಲಿದೆ. ಮಾನವ ಸಂಪನ್ಮೂಲವನ್ನು ಕ್ರೋಢಿಕರಣಗೊಳಿಸಿ ಸಮರ್ಪಕವಾಗಿ ಬಳಕೆ ಮಾಡಿದರೆ ಮಾತ್ರ ದೇಶ ಉನ್ನತಿಗೆ ಬರಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಸಶಕ್ತರಾಗಬೇಕು: ದೇಶದ ಭವಿಷ್ಯವಾದ ವಿದ್ಯಾರ್ಥಿಗಳು ಕುಶಾಗ್ರಮತಿಗಳಾಗಿ. ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಾದರೆ ಅವರು ಸಶಕ್ತರಾಗುವುದು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ ಯೋಜನೆ ಮೂಲಕ ಅನ್ನ -ಹಾಲು ಕೊಟ್ಟು ಮಕ್ಕಳನ್ನು ದೈಹಿಕವಾಗಿ ಸದೃಡಗೊಳಿಸುತ್ತಿದೆಯೆಂದರು.
ಜಾತ್ಯಾತೀತವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಅನ್ನ-ವಿದ್ಯೆ ನೀಡುವ ಮೂಲಕ ಸಿದ್ಧಗಂಗಾ ಮಠ ಮಾದರಿಯಾದ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದ ಸಚಿವರು ಸಿದ್ಧಗಂಗಾ ಮಠದಂತೆಯೇ ಇತರ ಮಠಗಳು ಶೈಕ್ಷಣಿಕ ಸೇವಾ ಕಾರ್ಯ ಮಾಡಿದ್ದರೆ ಸಮಾಜದಲ್ಲಿ ಬಾರೀ ಬದಲಾವಣೆಯಾಗುತ್ತಿತ್ತು ಎಂದು ನುಡಿದರು.
ಯಾವುದೇ ಒಂದು ಜನಾಂಗ ಮಾತ್ರ ಬುದ್ಧಿವಂತರಾಗುತ್ತಾರೆಂಬುದು ಇಂದಿನ ಕಾಲಮಾನದಲ್ಲಿ ಸುಳ್ಳು. ಇಂದು ಪ್ರತಿಭೆಯನ್ನು ಕರಗತಮಾಡಿಕೊಂಡರೆ ಯಾರು ಬೇಕಾದರೂ ಮೇಲೇರಲು ಸಾಧ್ಯ ಎಂದು ಹೇಳಿ ಸಿದ್ಧಗಂಗಾ ಮಠದೊಂದಿಗಿನ ತಮ್ಮ ನಂಟನ್ನು ವಿದ್ಯಾರ್ಥಿಗಳೆದುರು ಬಿಚ್ಚಿಟ್ಟರು. ಸಮಾರಂಭದ ಸಾನಿಧ್ಯವನ್ನು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗಸ್ವಾಮೀಜಿ ವಹಿಸಿದ್ದರು. ಸನಿವಾಸ ವಿದ್ಯಾಸಂಸ್ಥೆಗಳ ಮುಖ್ಯೋಪಾಧ್ಯಾಯರು, ಆಡಳಿತಮಂಡಳಿಯವರು, ಕಾಂಗ್ರೆಸ್ ಮುಖಂಡ ನಟರಾಜ್ ಶೆಟ್ಟಿ ಇತರರು ಹಾಜರಿದ್ದರು. ಸಮಾರಂಭಕ್ಕೂ ಮುನ್ನ ಶತಾಯುಷಿ ಡಾ.ಶಿವಕುಮಾರಸ್ವಾಮೀಜಿಗಳ ಆಶೀರ್ವಾದ ಪಡೆದ ಸಚಿವ ಗುಂಡುರಾವ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲೂ ಪಾಲ್ಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

