ಶ್ರೀಸಾಮಾನ್ಯರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿ: ಸುಭಾಷ್
ಕ.ಪ್ರ.ವಾರ್ತೆ ಮಧುಗಿರಿ ಆ. 13
ಸಾಮಾನ್ಯರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿ ಇಲ್ಲವೇ ಅಮಾನತು ಆದೇಶ ಪಡೆದು ತನಿಖೆಗೆ ಸಜ್ಜಾಗಿ ಎಂದು ಉಪ ಲೋಕಾಯುಕ್ತ ಸುಭಾಷ್ ಬಿ.ಆದಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ಎಂಎನ್ಕೆ ಸಮುದಾಯ ಭವನದಲ್ಲಿ ಉಪ ವಿಭಾಗ ಮಟ್ಟದ ಲೋಕ-ಅದಾಲತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಮಧುಗಿರಿ ತಾ.ಪಂ.ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರುಗಳ ಸುರಿಮಳೆಗೈದ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ಸುಭಾಷ್ ಮಧುಗಿರಿ ಇಓ ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಹರಿಹಾಯ್ದು ತಾ.ಪಂ.ಇಓ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ನಿಮ್ಮ ಕಾರ್ಯ ವೈಖರಿ ಬಗ್ಗೆ ಹತ್ತು ಹಲವು ದೂರುಗಳು ಬಂದಿವೆ. ಇದೇ ರೀತಿ ನಿಮ್ಮ ಬಗ್ಗೆ ದೂರುಗಳು ಮುಂದುವರಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
2004 ರಿಂದ 12ರವರೆಗೆ 120 ಪ್ರಕರಣಗಳು ದಾಖಲಾಗಿದ್ದು ಎಲ್ಲವನ್ನು ಇತ್ಯರ್ಥಪಡಿಸಲಾಗಿದೆ. ಇಂದು ನಡೆದ ಸಭೆಯಲ್ಲಿ 63 ದೂರುಗಳು ಬಂದಿದ್ದು ಅದರಲ್ಲಿ 23 ದೂರುಗಳನ್ನು ದಾಖಲಿಸಲಾಗಿದೆ. ಈ ದೂರುಗಳ ಪೈಕಿ ಗ್ರಾ.ಪಂ.ಯಲ್ಲಿ ಖಾತೆ ಮಾಡಲು ಲಂಚ ಸ್ವೀಕಾರ, ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ದೂರುಗಳೇ ಹೆಚ್ಚು, ಹಾಗಾಗಿ ಯಾವುದೇ ಕಾರಣಕ್ಕೂ ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡ ಬೇಡಿ, ಲಂಚ ಪಡೆಯಬೇಡಿ, ಭ್ರಷ್ಟಾಚಾರ ನಿಲ್ಲಿಸಿ ಶ್ರೀಸಾಮಾನ್ಯರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುವಂತೆ ತಾಕೀತು ಮಾಡಿದರು. ಇಂದು ದಾಖಲಾಗಿರುವ 23 ದೂರುಗಳನ್ನು ಶೀಘ್ರ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕೆ.ಸತ್ಯಮೂರ್ತಿ ಮಾತನಾಡಿ, 2004 ರಿಂದ ಈವರೆಗೆ ಬಾಕಿ ಇದ್ದ ಮಧುಗಿರಿ ತಾ.40, ಶಿರಾ-38, ಕೊರಟಗೆರೆ-25 ಹಾಗೂ ಪಾವಗಡ 24 ಪ್ರಕರಣ ಸೇರಿದಂತೆ ಒಟ್ಟು 127 ಪ್ರಕರಣಗಳನ್ನು ಉಪ ಲೋಕಾಯುಕ್ತ ಸುಭಾಷ್ ಆದಿ ಅವರ ಅಧ್ಯಕ್ಷತೆಯಲ್ಲಿ ಕಕ್ಷಿದಾರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸಲಾಗಿದೆ ಎಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಗೋವಿಂದರಾಜು, ಎಸಿ ಅನಿತಾ, ಡಿವೈಎಸ್ಪಿ ಸೌಮ್ಯಲತಾ ಅಡಿಷನಲ್ ಎಸ್ಪಿ ಹನುಮಂತರಾಯಪ್ಪ, ಡಿಡಿಪಿಐ ಆಂಜನಪ್ಪ ತಾ.ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

