ಪತ್ನಿ, ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆ, ಕೊಲೆ ಯತ್ನ: ಆರೋಪಿ ಪರಾರಿ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.15
ದುಶ್ಚಟಗಳ ದಾಸನಾಗಿದ್ದ ಪತಿ ವಿನಾಕಾರಣ ಹೆಂಡತಿ ಹಾಗೂ ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಬಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ಬಂಡಿಗನಹಳ್ಳಿ ಗ್ರಾಮದ ಸುಂದ್ರಮ್ಮ ಎಂಬುವವರ ಪುತ್ರಿ ಅಶ್ವಿನಿ (25) ಯನ್ನು ಚನ್ನರಾಯಪಟ್ಟಣ ತಾಲೂಕಿನ ದೊಡ್ಡಮಂಡಿಗನಹಳ್ಳಿಯ ಮೋಹನ ಎಂಬಾತನಿಗೆ 8 ವರ್ಷಗಳ ಹಿಂದೆ ವಿವಾಹ ಮಾಡಲಾಗಿತ್ತು. ಮದುವೆಯಾದ ಕೆಲ ವರ್ಷಗಳವರೆಗೂ ಯಾವುದೇ ತಕರಾರಿಲ್ಲದೇ ಸಂಸಾರ ನಡೆಸುತ್ತಿದ್ದ ಮೋಹನ, ನಂತರದಲ್ಲಿ ಇದ್ದಕ್ಕಿದ್ದಂತೆಯೇ ಹೆಂಡತಿ ಅಶ್ವಿನಿಗೆ ವಿನಾಕಾರಣ ಕಿರುಕುಳ ನೀಡಲಾರಂಭಿಸಿದ ಎಂದು ದೂರಲಾಗಿದೆ.
ಪದೇ ಪದೇ ಕಿರುಕುಳ ನೀಡತ್ತಿದ್ದ ಮೋಹನನಿಗೆ ಈತನ ಹೆಂಡತಿ ಅಶ್ವಿನಿಯ ಪೋಷಕರು ಹಾಗೂ ಸಂಬಂಧಿಗಳು ಹಲವು ಸಲ ಕರೆಸಿ ಪಂಚಾಯಿತಿ ಮಾಡಿದ್ದಲ್ಲದೇ, ಪೊಲೀಸರಿಗೆ ದೂರು ಸಹ ನೀಡಿದ್ದರು. ಎರಡು ಮಕ್ಕಳು ಆದ ನಂತರವೂ ಗಂಡನ ಕಿರುಕುಳ ಹೆಚ್ಚಾದ ಕಾರಣ ಅಶ್ವಿನಿ ಹಲ್ಲೆ ಹಾಗೂ ಜಗಳಗಳಾದಾಗ ತನ್ನ ತಾಯಿಯ ಮನೆಗೆ ಹೋಗಿದ್ದಳು. ಆದರೆ ನಂತರದಲ್ಲಿ ನಯವಾಗಿ ಮಾತನಾಡಿ ಹೆಂಡತಿಯನ್ನು ಆಕೆಯ ತಾಯಿಯ ಮನೆಯಿಂದ ಕರೆತರುತ್ತಿದ್ದ ಗಂಡ ಕೆಲ ದಿನಗಳಾದ ನಂತರ ಮತ್ತೆ ಹೆಂಡತಿಯ ಮೇಲೆ ಹಲ್ಲೆ ಮಾಡುತ್ತಿದ್ದನೆಂದು ದೂರಲಾಗಿದೆ.
ಈಗ್ಗೆ 15 ದಿನಗಳ ಹಿಂದೆಯೂ ಹೆಂಡತಿಯೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿದ್ದ ಗಂಡನ ವರ್ತನೆಯಿಂದ ಬೇಸತ್ತ ಅಶ್ವಿನಿಯು ತಾಲೂಕಿನಲ್ಲಿರುವ ತನ್ನ ತಾಯಿಯ ಮನೆಗೆ ಬಂದಿದ್ದಳು. ಈ ಘಟನೆಯನ್ನೇ ಮುಂದಿರಿಸಿಕೊಂಡು ಮೋಹನ ಆ.14ರಂದು ತನ್ನ ಅತ್ತೆಯ ಮನೆಗೆ ಬಂದು ಏಕಾಏಕಿ ತನ್ನ ಹೆಂಡತಿ ಅಶ್ವಿನಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ, ಇದನ್ನು ತಡೆಯಲು ಹೋದ ಆತನ ಅತ್ತೆ ಸುಂದ್ರಮ್ಮ ಅವರ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಈ ಘಟನೆಯಿಂದಾಗಿ ಅಶ್ವಿನಿಯ ಎಡ ಕಿವಿ, ಕೈ ಹಾಗೂ ತೊಡೆಗೆ ತೀವ್ರ ಪೆಟ್ಟು ಬಿದ್ದಿದೆಯಲ್ಲದೇ, ಸುಂದ್ರಮ್ಮ ಎಂಬುವವರಿಗೂ ತಲೆ, ಕೈ ಹಾಗೂ ಇನ್ನಿತರ ಭಾಗಗಳಿಗೂ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾದ ಕಾರಣದಿಂದಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಂತೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿ ಪರಾರಿಯಾಗಿರುವ ಮೋಹನನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

