ತುಮಕೂರು

ಅತೃಪ್ತ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಡಿಕೆಶಿ

Published On :

ಕ.ಪ್ರ.ವಾರ್ತೆ    ಕುಣಿಗಲ್    ಆ. 16
ಶುಕ್ರವಾರ, ತಾಲೂಕಿನ ನೀಲತ್ತಹಳ್ಳಿ ಗ್ರಾಮದಲ್ಲಿ ಅಸಮಾಧಾನಗೊಂಡಿರುವ ಬಿಜೆಪಿ ಕಾರ್ಯಕರ್ತರ ಸಭೆಗೆ, ದಿಢೀರ್ ಹಾಜರಾದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲಯಾಚಿಸಿದ್ದು, ತಾಲೂಕಿನ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಗೆ ಕಾರಣವಾಯಿತು.
ಶುಕ್ರವಾರ, ಮೂಲ ಬಿಜೆಪಿ ಕಾರ್ಯಕರ್ತರು, ತಮ್ಮ ಪಕ್ಷದ ತಾಲೂಕು ವರಿಷ್ಠರ ಗೊಂದಲಕಾರಿ ನಿರ್ಣಯಗಳ ಬಗ್ಗೆ ಬೇಸತ್ತು, ತಮ್ಮ ಮುಂದಿನ ರಾಜಕೀಯ ನಡೆ ನಿರ್ಧರಿಸಲು ಪಟ್ಟಣ, ಕೊತ್ತಗೆರೆ, ಹುತ್ರಿದುರ್ಗ ಹೋಬಳಿಗಳಿಂದ ಆಗಮಿಸಿ ನೀಲತ್ತಹಳ್ಳಿ ಗ್ರಾಮದಲ್ಲಿ ಸೇರಿದ್ದರು. ಸದರಿ ಕಾರ್ಯಕರ್ತರು ಸಭೆ ಸೇರುವ ವಿಷಯವನ್ನು ಗುರುವಾರದಂದೇ ಕೆಲ ಕಾರ್ಯಕರ್ತರು ಕಾಂಗ್ರೆಸ್ ಮುಖಂಡ ಡಿಕೆಶಿ ಗಮನಕ್ಕೆ ತಂದಿದ್ದರೆನ್ನಲಾಗಿದೆ. ಕಾರ್ಯಕರ್ತರು ಸಭೆ ಪ್ರಾರಂಭಿಸುವ ವೇಳೆಗೆ ಸಭೆಗೆ ಆಗಮಿಸಿದ ಡಿಕೆಶಿ, ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.
ಗಮನಕ್ಕೆ ಬರಲಿಲ್ಲ: ತಾಲೂಕಿಗೆ ಕಾಂಗ್ರೆಸ್ ಮುಖಂಡ ಡಿಕೆಶಿ ಆಗಮಿಸಿರುವ ವಿಷಯ ಸ್ಥಳೀಯ ಯಾವುದೇ ಕಾಂಗ್ರೆಸ್ ಮುಖಂಡರ ಗಮನಕ್ಕೆ ಬರಲಿಲ್ಲ. ಸುಮಾರು ಮುಕ್ಕಾಲುಗಂಟೆ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು, ಸಭೆಯಲ್ಲಿ  ಬಿಜೆಪಿ ಕಾರ್ಯಕರ್ತ ವೆಂಕಟೇಶ್, ತಾಲೂಕು ಬಿಜೆಪಿ ಪಕ್ಷದ ವರಿಷ್ಠರು ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಗೊಂದಲಕಾರಿ ನಿಲವುಗಳು ತಳೆಯುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಅಭದ್ರತೆ ಜೊತೆ ಅಸ್ಥಿರತೆ ಸಹ ಉಂಟು ಮಾಡುತ್ತಿದೆ. ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರ ಸಭೆಗೆ, ರೇವಣ್ಣನವರು ಅಗಮಿಸುವ ವಿಷಯ ಗೊತ್ತಿದ್ದರೂ, ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಕತ್ತಲಲ್ಲಿಟ್ಟಿದ್ದು  ಕಾರ್ಯಕರ್ತರಿಗೆ ಬೇಸರ ತರಿಸಿದೆ ಎಂದರು.
ಎಪಿಎಂಸಿ ಉಪಾಧ್ಯಕ್ಷ ಸುರೇಶ್, ಸ್ಥಳೀಯವಾಗಿ ತಾಲೂಕು ಬಿಜೆಪಿಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರಗಳು ವ್ಯಕ್ತವಾಗದೆ, ಕಾರ್ಯಕರ್ತರು ಗೊಂದಲಕ್ಕೆ ಸಿಲುಕುವಂತಾಗಿದೆ. ಇನ್ನು ಜೆಡಿಎಸ್ ಜೊತೆ ಒಳ ಒಪ್ಪದಂದಂತ ಮಾತುಕತೆ ಕೇಳಿಬರುತ್ತಿದ್ದು, ಮೂಲ ಬಿಜೆಪಿ ಕಾರ್ಯಕರ್ತರು   ತಮ್ಮ ಮುಂದಿನ ನಡೆ ನಿರ್ಧರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಬಿಜೆಪಿ ಕಾರ್ಯಕರ್ತರುಗಳೆಲ್ಲರೂ, ಪ್ರಸಕ್ತ ವಿದ್ಯಾಮಾನಗಳಿಂದ ಬೇಸತ್ತು ಅಸಮಾಧಾನಗೊಂಡಿರುವ ಪರಿಸ್ಥಿತಿಯ ಲಾಭವನ್ನು ಡಿಕೆಸಿ ಸಮರ್ಥವಾಗಿ ಉಪಯೋಗಿಸಿಕೊಂಡರಲ್ಲದೆ, ಕಾರ್ಯಕರ್ತರು ಕಾಂಗ್ರೆಸ್ ಬೆಂಬಲಿಸಿದಲ್ಲಿ ಮುಂದೆ ಅವರಿಗೆ ತಮ್ಮ ಶ್ರೀರಕ್ಷೆ ಖಂಡಿತವೆಂದರು.
ಚುನಾವಣೆ ನಂತರ ಬರುವ ಯಾವುದೇ ಕಾರ್ಯಕರ್ತರಿಗೆ ಮಣೆಹಾಕುವುದಿಲ್ಲವೆಂದರು. ಒಂದೆಡೆ ಡಿಕೆಶಿ ತಾಲೂಕು ಬಿಜೆಪಿಯವರನ್ನು ಭೇಟಿ ಮಾಡಿ ತೆರಳಿದ್ದು,  ತಾಲೂಕು ಬಿಜೆಪಿಯಲ್ಲಿ ತಲ್ಲಣ ಮೂಡಿಸಿದ್ದರೆ, ಮತ್ತೊಂದೆಡೆ ತಾಲೂಕಿನ ಯಾವುದೇ ಕಾಂಗ್ರೆಸ್ ಮುಖಂಡರನ್ನು ಓಲೈಸದೆ ನೇರವಾಗಿ ಸಭೆಗೆ ಅಗಮಿಸಿ ತೆರಳಿದ ಡಿಕೆಶಿ ನಡೆಯ ಬಗ್ಗೆ ತಾಲೂಕು ಕಾಂಗ್ರೆಸ್ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಈ ಭಾಗದ ಕೆಲ ಜೆಡಿಎಸ್ ಕಾರ್ಯಕರ್ತರೂ ಸಹ ಸಭೆಯಲ್ಲಿ ಪಾಲ್ಗೊಂಡಿದ್ದು ಜೆಡಿಎಸ್ ಪಾಳೆಯದಲ್ಲೂ ತಲೆನೋವಿಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.