ತುಮಕೂರು

ದಲಿತ, ಮಹಿಳೆ, ರೈತರ ಏಳಿಗೆಯಾದರೆ ರಾಷ್ಟ್ರಾಭಿವೃದ್ಧಿ: ಕುಲಪತಿ ರಾಜಾಸಾಬ್

Published On :

ಕನ್ನಡಪ್ರಭ ವಾರ್ತೆ ,  ತುಮಕೂರು ,  ಆ.23
ಸಮಾಜದಲ್ಲಿ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವ ದಲಿತರು, ಮಹಿಳೆಯರು ಮತ್ತು ರೈತರನ್ನು ಸರಿಯಾಗಿ ನೋಡಿಕೊಂಡರೆ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ತುಮಕೂರು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್ ಅಭಿಪ್ರಾಯಪಟ್ಟಿದ್ದಾರೆ. ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ. ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಈ ಮೂರು ವರ್ಗಗಳು ಮೇಲೆ ಬಂದರೆ ದೇಶ ತಾನಾಗಿಯೇ ಅಭಿವೃದ್ಧಿ ಪಥದತ್ತ ಮುಂದುವರೆಯುತ್ತದೆ ಎಂದರು.
ನಾಡಿನಲ್ಲಿ ಶ್ರೀಮಂತರ ಮಕ್ಕಳು ಪ್ರಸಿದ್ಧಿ ಪಡೆದ ಖಾಸಗಿ ಕಾಲೇಜುಗಳಲ್ಲಿ ಓದಿದರೆ ಬಡವರ ಮಕ್ಕಳು ಮಠ ಮಾನ್ಯಗಳಲ್ಲಿ, ಸರಕಾರಿ ಶಾಲೆಗಳಲ್ಲಿ ಕಷ್ಟಪಟ್ಟು ಓದಿ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದಕ್ಕೆ ನಮ್ಮ ಹಳ್ಳಿಯೇ ಉದಾಹರಣೆ. ಕೆಲವರು ಚನ್ನಗಿರಿಯಿಂದ ಸ್ನೇಹ್ನಾದ್ರಿ ಕಾಲೇಜಿಗೆ ನಡೆದುಕೊಂಡು ಹೋಗಿ ಅಭ್ಯಾಸ ಮಾಡಿದರೆ ಮತ್ತೆ ಕೆಲವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಂದು ಅಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಗಳಿಸಿದ್ದಾರೆ. ನಮ್ಮ ಹಳ್ಳಿಯಲ್ಲಿ ಅಧಿಕಾರಿಯಿಲ್ಲದ ಮನೆಯೇ ಇಲ್ಲ. ಇದು ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದರು.
ನನ್ನ ಪರಿಶ್ರಮದ ಫಲವಾಗಿ ಇಂದು ನಾನು ತುಮಕೂರು ವಿವಿಯ ಉಪಕುಲಪತಿಯಾಗಿ ನೇಮಕಗೊಂಡಿದ್ದೇನೆ ಎಂದು ಡಾ.ರಾಜಾಸಾಬ್ ನುಡಿದರು.
ಇಂದಿನ ಶಿಕ್ಷಕರ ಮೇಲೆ ಅತ್ಯಂತ ಹೆಚ್ಚಿನ ಜವಾಬ್ದಾರಿಯಿದೆ. ಕೇವಲ ಪಠ್ಯಕ್ರಮದಿಂದಲ್ಲದೆ ಮಕ್ಕಳನ್ನು ಸಾಂಸ್ಕೃತಿಕವಾಗಿ, ಕ್ರೀಡಾಸಕ್ತರಾಗಿ, ಎನ್.ಸಿ.ಸಿ., ಎನ್.ಎಸ್.ಎಸ್. ನಂತಹ ಚಟುವಟಿಕೆಗಳ ಮೂಲಕ ಅವರ ಸಮಗ್ರ ವಿಕಾಸದ ಹೊಣೆ ನಮ್ಮ ಮೇಲಿದ್ದು, ತಮ್ಮಲ್ಲಿರುವ ಎಲ್ಲಾ ಪ್ರತಿಭೆಯನ್ನು ಧಾರೆ ಎರೆಯುವ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಾಗಬೇಕು ಎಂದ ಕುಲಪತಿಗಳು, ಮಕ್ಕಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಜ್ಞಾನವನ್ನು ಹಂಚಿಕೆ ಮಾಡುವವನು ಮಾತ್ರ ನಿಜವಾದ ಶಿಕ್ಷಕನಾಗಲು ಆರ್ಹ ಎಂದರು.
ಕಾರ್ಯಕ್ರಮದಲ್ಲಿ ಚಟ್ನಹಳ್ಳಿ ಮಹೇಶ್ ಮಹಿಳಾ ಸಬಲೀಕರಣ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಎಲ್. ವೈದ್ಯೇಶ್ವರ್ ವಹಿಸಿದ್ದರು. ಪ್ರೊ. ಸಿದ್ದಪ್ಪ, ಸತೀಶ್ ವರದೇವ್, ಪ್ರೊ. ಆರ್.ಎಸ್. ಸುರೇಶ್ ಮತ್ತಿತರರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಡಾ. ಶಿವಕುಮಾರಸ್ವಾಮೀಜಿ ಅವರ ಪಾದ ಪೂಜೆ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.