ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಒತ್ತಾಯಿಸಿ ರಸ್ತೆತಡೆ
ಕ.ಪ್ರ.ವಾರ್ತೆ , ಹುಳಿಯಾರು , ಆ.25
ಇಲ್ಲಿಗೆ ಸಮೀಪದ ಹೊಸಳ್ಳಿ ಕೈಮರದ ತಿರುವಿನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಖಾಸಗಿ ಬಸ್ ಹಾಗೂ ಓಮಿನಿ ನಡುವಿನ ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಮೃತನಾಗಿ, ಗಾಯಾಳುಗಳನ್ನು ಹುಳಿಯಾರಿನ ಆಸ್ಪತ್ರೆಗೆ ಕರೆತಂದಾಗ ಅವರಿಗೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಲು ಇಲ್ಲಿ ಯಾವುದೇ ಸೌಕರ್ಯವಿಲ್ಲದೆ ಇಬ್ಬರು ಅಸು ನೀಗಿದ್ದನ್ನು ಕಂಡ ರೊಚ್ಚಿಗೆದ್ದ ಜನರು ಆಸ್ಪತ್ರೆಗೆ ಕಾಯಂ ವೈದ್ಯರು ಹಾಗೂ ಮೂಲಸೌಕರ್ಯಗಳಿಗೆ ಒತ್ತಾಯಿಸಿ ಆಸ್ಪತ್ರೆಯ ಮುಂಭಾಗದ ಹೆದ್ದಾರಿಯಲ್ಲಿ ರಸ್ತೆತಡೆ ಮೂಲಕ ಪ್ರತಿಭಟನೆ ನಡೆಸಿದರು.
ಒಂದು ಹಂತದಲ್ಲಿ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಲಘುಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು
ಚಿ.ನಾ.ಹಳ್ಳಿ ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ, ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುವ, ಅಧಿಕ ವಾಹನಗಳ ಸಂಚಾರ ಹೊಂದಿರುವ ಹುಳಿಯಾರು ಹೋಬಳಿ ಕೇಂದ್ರವಾಗಿದ್ದರೂ ಸಹ ಇಲ್ಲಿ ನೆಪಮಾತ್ರಕ್ಕೆ ಆಸ್ಪತ್ರೆಯಿದೆ ಹೊರತು ಕಾಯಂ ವೈದ್ಯರಿಲ್ಲ, ಸ್ಚಚ್ಛತೆ ಕಣ್ಮರೆಯಾಗಿದೆ, ಮೂಲಸೌಕರ್ಯಗಳಿಲ್ಲದೆ ಇಲ್ಲಿಗೆ ಬರುವ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಹಲವಾರು ಪ್ರತಿಭಟನೆ, ಹೋರಾಟ ನಡೆದರೂ ಇತ್ತ ಕ್ಷೇತ್ರದ ಶಾಸಕರಾಗಲಿ, ಆರೋಗ್ಯ ಅಧಿಕಾರಿಗಳಗಲಿ, ಜಿಲ್ಲಾಧಿಕಾರಿಗಳಾಗಲಿ ಗಮನ ಹರಿಸಿಲ್ಲ, ಪ್ರತಿನಿತ್ಯ ವೈದ್ಯರು ಬದಲಾಗುತ್ತಿದ್ದು, ಒಂದು ದಿನ ಇದ್ದ ವೈದ್ಯರು ಮತ್ತೊಂದು ದಿನ ಇರುವುದಿಲ್ಲ. ಇದರಿಂದ ರೋಗಿಗಳ ಸಮಸ್ಯೆಗೆ ಸರಿಯಾದ ಚಿಕಿತ್ಸೆಯಾಗಲಿ, ಸೂಕ್ತ ಪರಿಹಾರವಾಗಲಿ ಸಿಗದೆ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಅಧಿಕ ಹಣ ತೆರಬೇಕಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಖಂಡನೆ: ಇಲ್ಲಿಗೆ ಸಮೀಪದ ಹೊಯ್ಸಲಕಟ್ಟೆ, ಗೂಬೆಹಳ್ಳಿ, ಹಂದನಕೆರೆ ಆಸ್ಪತ್ರೆಯ ವೈದ್ಯರು ಒಂದೊಂದು ದಿನ ಇಲ್ಲಿಗೆ ಬಂದು ಕಾರ್ಯ ನಿರ್ವಹಿಸುತ್ತಿರುವುದನ್ನು ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ ಡಿ.ಹೆಚ್.ಒ ಚನ್ನಮಲ್ಲಯ್ಯ ಅವರ ಗಮನಕ್ಕೆ ತಂದಾಗ ಅವರು ತಮ್ಮಿಂದ ವೈದ್ಯರನ್ನು ನೇಮಿಸಲು ಆಗುವುದಿಲ್ಲ. ತಮಗೆ ಅಧಿಕಾರವಿಲ್ಲ. ನಾನು ಅಸಹಾಯಕ ಎಂದು ಹೇಳಿದನ್ನು ಈ ಸಂದರ್ಭದಲ್ಲಿ ಖಂಡಿಸಿದ ಸಾರ್ವಜನಿಕರು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿ ಕಾಯಂ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯ ವಿಷಯ ತಿಳಿದು ವೃತ್ತ ನೀರೀಕ್ಷಕ ಪ್ರಭಾಕರ್, ಹಂದನಕೆರೆ ಪಿಎಸೈ ಸುನಿಲ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ ಯಾವುದೇ ಪ್ರಯೋಜನವಾಗದೇ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಲಘುಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು.
ದಲಿತ ಸಹಾಯವಾಣಿಯ ಹನುಮಂತಪ್ಪ, ಜಯಕರ್ನಾಟಕ ಸಂಘದ ಮೋಹನ್ ಕುಮಾರ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಪ್ರತಿಭಟನೆ ಕಾವು ತಣ್ಣಗಾಗಿದ್ದರೂ ಸಹ ಮತ್ತೆ ಮುಂದುವರಿಯುವ ಲಕ್ಷಣಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

