ತುಮಕೂರು

ಕುತೂಹಲ ಮೂಡಿಸಿದ ಕುಣಿಗಲ್ ಕಣ

Published On :

ಕ.ಪ್ರ. ವಾರ್ತೆ ,  ಕುಣಿಗಲ್ ,  ಆ.26
ಕುಣಿಗಲ್ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ, ತೀವ್ರ ಪೈಪೋಟಿ ನಡೆದಿದ್ದು, ಚುನಾವಣೆ ಸಮಯದಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯನವರ ಬೆಂಬಲಕ್ಕಿದ್ದ ಅಭ್ಯರ್ಥಿಗಳೆ ಅಧ್ಯಕ್ಷಗಾದಿಗೇರುವ ಸಾಧ್ಯತೆ ಹೆಚ್ಚೆಂಬ ಮಾತು ಜೆಡಿಎಸ್ ಪಾಳೆಯದಲ್ಲಿ ಕೇಳಿ ಬರುತ್ತಿದೆ.
ಕುಣಿಗಲ್ ಪುರಸಭೆಯಲ್ಲಿ 23 ಸದಸ್ಯರಿದ್ದು, ಚುನಾವಣೆ ನಡೆದ ವೇಳೆ, ತಾಲೂಕು ಜೆಡಿಎಸ್‌ನಲ್ಲಿ 2013ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಗಾದಿ ಲಾಬಿ ತೀವ್ರಗೊಂಡಿತ್ತು. ಅಂದಿನ ಪರಿಸ್ಥಿತಿಯಲ್ಲಿ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪುರಸಭೆ ಚುನಾವಣೆ ಎದುರಿಸಿತ್ತು. ಇದಕ್ಕೆ ಪ್ರತಿಯಾಗಿ ಮಾಜಿ ಸಚಿವ, ಹಾಲಿ ಶಾಸಕ ಡಿ.ನಾಗರಾಜಯ್ಯ ಬಂಡಾಯವೆದ್ದು 23 ವಾರ್ಡ್‌ಗಳ ಪೈಕಿ 21 ವಾರ್ಡ್‌ಗಳಲ್ಲಿ ತಮ್ಮ ಬೆಂಬಲಿಗರನ್ನು ಆಟೋರಿಕ್ಷಾ ಗುರುತಿನ ಅಡಿಯಲ್ಲಿ ಕಣಕ್ಕಿಳಿಸಿದ್ದರು.
   ಎರಡೂ ಬಣಗಳು ತಲಾ 7 ಸ್ಥಾನಗಳನ್ನು ಪಡೆದಿದ್ದವು. ಕಳೆದ ಮೇ ಮಾಹೆಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರ ಬಿ ಫಾರಂ ಮತ್ತು ಸಿಫಾರಂ ಬಿರುಗಾಳಿಗೆ ಸಿಕ್ಕ ಎಸ್.ಪಿ.ಮುದ್ದಹನುಮೇಗೌಡರು ವಿಧಾನಸಭೆ ಚುನಾವಣೆಯಲ್ಲಿ ತಟಸ್ಥರಾಗಿ, ನಂತರ ಕಾಂಗ್ರೆಸ್ ಸೇರ್ಪಡೆಯಾದರು. ಸದ್ಯ 14 ಸದಸ್ಯರನ್ನು ಹೊಂದಿರುವ ಮೂಲಕ ಜೆಡಿಎಸ್ ಬಲಿಷ್ಠವಾಗಿದ್ದು, ಇದರ ಜೊತೆ ಶಾಸಕರು ಇದೆ ಪಕ್ಷದವರಾಗಿದ್ದರಿಂದ 15ರ ಸಂಖ್ಯಾಬಲ ಇದೆ.
ತಲೆನೋವು: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯವರ್ಗಕ್ಕೆ ಮೀಸಲಾಗಿರುವ ಕಾರಣ ಆಕಾಂಕ್ಷಿತರು ಸಹಜವಾಗಿಯೇ ಹೆಚ್ಚಿದ್ದು, ಮುಖಂಡರ ತಲೆನೋವಿಗೆ ಕಾರಣವಾಗಿದ್ದಾರೆ. ಹಾಲಿ ತಾಲೂಕು ಅಧ್ಯಕ್ಷ, ಮೂರು ಬಾರಿ ಪುರಸಭೆ ಅಧ್ಯಕ್ಷರಾಗಿ ಅನುಭವ ಹೊಂದಿರುವ ಮತ್ತು ಸದಾ ಡಿ.ನಾಗರಾಜಯ್ಯನವರ ಜೊತೆಯಲ್ಲಿ ಗುರುತಿಸಿಕೊಂಡಿರುವ ಕೆ.ಎಲ್.ಹರೀಶ್  ಹೆಸರು ಅಧ್ಯಕ್ಷ ಗಾದಿಗೆ ಹೆಚ್ಚಿನದಾಗಿ ಕೇಳಿಬರುತ್ತಿದೆ. ಆದರೆ, ಇದಕ್ಕೆ ಅವರ ಪಕ್ಷದಲ್ಲೆ ಭಿನ್ನಮತ ತಲೆದೋರಿದ್ದು ಈಗಾಗಲೆ ಮೂರು ಬಾರಿ ಅಧ್ಯಕ್ಷರಾಗಿರುವ ಅವರ ಆಯ್ಕೆಗೆ, ಪ್ರಬಲ ಪ್ರತಿಸ್ಪರ್ಧಿಗಳು ವಿರೋಧ ವ್ಯಕ್ತಪಡಿಸಿ, ತಮ್ಮನ್ನು ಪರಗಿಣಿಸುವಂತೆ ದುಂಬಾಲು ಬಿದ್ದಿರುವುದು ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ.
ಬಂಡಾಯ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಸದಸ್ಯ ಈ. ಮಂಜು, ಮಾಜಿ ಪುರಸಭಾಧ್ಯಕ್ಷೆ ಹಾಲಿ ಬಂಡಾಯ ಜೆಡಿಎಸ್ ಸದಸ್ಯೆ ನಳಿನಾ, ಈ ಹಿಂದೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ, ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಗೆದ್ದಿರುವ ಚಂದ್ರಶೇಖರ್, ಸಮೀವುಲ್ಲಾ ಅವರು ಅಧ್ಯಕ್ಷಗಾದಿಗೆ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಮೇಲ್ನೋಟಕ್ಕೆ ಅಷ್ಟೇನು ಲಾಬಿ ನಡೆಯದಿದ್ದರೂ, ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟಿರುವವರು ತಮ್ಮದೇ ತಂತ್ರದ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಮಾಡುವುದಾಗಿ ಕೆಲ ಸದಸ್ಯರನ್ನು ಓಲೈಸುತ್ತಿದ್ದಾರೆ. ಮೇಲ್ನೋಟಕ್ಕೆ ಯಾವುದೇ ಸದಸ್ಯರು ಎಷ್ಟೇ ಲಾಬಿ, ಪ್ರಯತ್ನಗಳು ಮಾಡಿದರೂ, ಶಾಸಕ ಡಿ.ನಾಗರಾಜಯ್ಯನವರು ಕೈಗೊಳ್ಳುವ ತೀರ್ಮಾನದ ಮೇಲೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿ ಯಾರಪಾಲಾಗುತ್ತದೆ ಎಂದು ನಿರ್ಧಾರವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.