ಪೌರಾಣಿಕ ನಾಟಕಗಳಿಗೆ ಉತ್ತಮ ಬೆಂಬಲ
ತುಮಕೂರು: ಯುವಜನತೆಯಿಂದ ತಿರಸ್ಕೃತಗೊಂಡು ಅಳಿವಿನಂಚಿನಲ್ಲಿರುವ ಪೌರಾಣಿಕ ನಾಟಕ ಕಲೆಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ದೊರೆಯುತ್ತಿರುವುದು ಸಂತಸದ ವಿಷಯ ಎಂದು ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಅಮರಸ್ನೇಹ ಕಲಾ ಬಳಗ ಬನಶಂಕರಿ ತುಮಕೂರು ಹಾಗೂ ಬೈಲಾಂಜನೇಯ ಸ್ವಾಮಿ ಕಲಾ ಬಳಗ ಹನುಮಂತಪುರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಮತ್ತು ಹಿರಿಯ ಕಲಾವಿದರಿಗೆ ಬೆಳ್ಳಿ ಕಿರೀಟಧಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿನಾಶದ ಅಂಚಿನಲ್ಲಿರುವ ಈ ಕಲೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆದಿರುವುದು ಶ್ಲಾಘನೀಯವಾಗಿದೆ ಎಂದರು. ಕಲಾವಿದರಿಗೆ ಸರಕಾರಗಳು ನೀಡುವ ಪ್ರಶಸ್ತಿಗಳಿಗಿಂತ ಜನರು ಅದರಲ್ಲಿಯೂ ಕಲಾಸಕ್ತರು ನೀಡುವ ಇಂತಹ ಗೌರವಗಳು ಹೆಚ್ಚು ಮನ್ನಣೆಯನ್ನು ತಂದುಕೊಡುತ್ತವೆ. ಅರ್ಜಿ ಹಾಕಿ ಪ್ರಶಸ್ತಿ ಪಡೆಯುವ ಇಂದಿನ ದಿನಗಳಲ್ಲಿ ಜನರೇ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆ ಪಡುವಂತಹ ವಿಚಾರವಾಗಿದೆ. ಅಲ್ಲದೆ ಪೌರಾಣಿಕ ನಾಟಕಗಳ ಸಂಗೀತ ನಿರ್ದೇಶಕ ಐ.ಎಲ್. ರಂಗಸ್ವಾಮಯ್ಯ ಮತ್ತು ಸಾವಿರಾರು ನಾಟಕಗಳಲ್ಲಿ ಅಭಿನಯಿಸಿರುವ ಅನಂತವೇಣಿ ಅವರನ್ನು ಗುರುತಿಸಿ ಬೆಳ್ಳಿಕಿರೀಟ ತೊಡಿಸಿ ಗೌರವಿಸಿರುವುದು ನಿಮ್ಮನ್ನೇ ನೀವೇ ಗೌರವಿಸಿಕೊಂಡಂತೆ. ಜೊತೆಗೆ ಈ ಕಲೆಯನ್ನು ಗೌರವಿಸಿದಂತೆ ಎಂದು ಸಂತಸ ವ್ಯಕ್ತಪಡಿಸಿದರು.
ಕಲಾಸಕ್ತರು ಮುಂದಾಗಲಿ: ಪಾಶ್ಚಾತ್ಯ ಸಂಸ್ಕೃತಿ, ಪರಂಪರೆಯ ಅನುಕರಣೆಯಲ್ಲಿ ರಂಗಭೂಮಿ ಅದರಲ್ಲಿಯೂ ಪೌರಾಣಿಕ ನಾಟಕಗಳ ಕಡೆಗೆ ನಮ್ಮ ಯುವಕರು ತಲೆ ಹಾಕದಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಿರುವ ಪ್ರಬುದ್ಧ ಕಲಾವಿದರ ನಂತರ ಪೌರಾಣಿಕ ನಾಟಕಗಳ ಪಾಡೇನು ಎಂಬಂತಹ ಚಿಂತೆ ನಮ್ಮಂತಹ ಹಲವರನ್ನು ಕಾಡುತ್ತದೆ. ಇಂತಹ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರಕಾರ, ಸಂಘ ಸಂಸ್ಥೆಗಳು ಹಾಗೂ ಕಲಾಸಕ್ತರು ಮುಂದಾಗಬೇಕಾಗಿದೆ ಎಂದು ಮುದ್ದಹನುಮೇಗೌಡ ತಿಳಿಸಿದರು.
ಮತ್ತಷ್ಟು ಮೆರುಗು: ಅಧ್ಯಕ್ಷತೆ ವಹಿಸಿದ್ದ ಕಲಾವಿದ ಹಾಗೂ ಕೈಗಾರಿಕೋದ್ಯಮಿ ಎಚ್.ಎ. ಮುಕ್ತಿಯಾರ್ ಮಾತನಾಡಿ, ರಂಗಭೂಮಿಯನ್ನು ಅದರಲ್ಲಿಯೂ ಪೌರಾಣಿಕ ನಾಟಕಗಳನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ರಂಗನಿರ್ದೇಶಕ ಐ.ಎಲ್. ರಂಗಸ್ವಾಮಯ್ಯ ಮತ್ತು ನಟಿ ಅನಂತವೇಣಿ ಅವರನ್ನು ಗೌರವಿಸುವ ಮೂಲಕ ರಂಗಭೂಮಿಗೆ ಮತ್ತಷ್ಟು ಮೆರುಗು ನೀಡುವ ಕೆಲಸವನ್ನು ಮಾಡಲಾಗಿದೆ. ಇದೇ ರೀತಿ ಮುಂದೆಯೂ ಹಿರಿಯರು, ಅರ್ಹರಾದವರನ್ನು ಗುರುತಿಸಿ ಅಭಿನಂದಿಸುವ ಅಭಿಲಾಷೆ ಸಂಘಕ್ಕೆ ಇದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹೆಚ್.ವಿ. ಪಾಂಡುರಂಗಶೆಟ್ಟಿ, ಹಿರಿಯ ಕಲಾವಿದರಾದ ಕೆ.ರಂಗರಾಜು, ಕಲಾವಿದೆ ಮಂಜುಳ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

