ತುಮಕೂರು

ಸರ್ಕಾರಿ ಶಾಲೆಯೆಂದು ಅಸಡ್ಡೆ ಬೇಡ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಡಿ.2
ಸರ್ಕಾರಿ ಶಾಲೆಯಲ್ಲಿ ಕಲಿತ ನಾನು ಇಂದು ಜಿಲ್ಲಾಧಿಕಾರಿಯಾಗಿದ್ದೇನೆ. ತುಮಕೂರಿನ ಜವಹರ್ ನವೋದಯ ವಿದ್ಯಾಲಯದಲ್ಲಿ ಕಲಿತ ಅನಿಲ್ಕುಮಾರ್ ಗುಬ್ಬಿ ತಹಸೀಲ್ದಾರ್ ಆಗಿದ್ದಾರೆ. ಕಠಿಣ ಪರಿಶ್ರಮಕ್ಕೆ ನಾವಿಂದು ಉದಾಹರಣೆಗಳಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮಾರ್ಮಿಕವಾಗಿ ನುಡಿದರು.
ಅವರು ತಾಲೂಕಿನ ಉರ್ಡಿಗೆರೆ ಹೋಬಳಿ ಗೊಲ್ಲಹಳ್ಳಿಯಲ್ಲಿರುವ ಜವಹರ ನವೋದಯ ವಿದ್ಯಾಲಯದ ಆವರಣದಲ್ಲಿ ಶಾಲೆಯ 25 ನೇ ವರ್ಷದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ರಜತಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸಮಾವೇಶದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಉದಾತ್ತ ಗುರಿಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮದಿಂದ ಸರಿಯಾದ ದಾರಿಯಲ್ಲಿ ಸಾಗಿದರೆ ನಿಜವಾಗಿಯೂ ಅದ್ಭುತ ಎನಿಸಬಹುದಾದ ಸಾಧನೆ ಮಾಡಬಹುದು. ಇದಕ್ಕೆ ನಾನು ಸೇರಿದಂತೆ ಇಲ್ಲಿರುವ ಬಹುತೇಕರು ಜೀವಂತ ನಿದರ್ಶನಗಳಿದ್ದೇವೆ. ಸರಿಯಾಗಿ ಕುಳಿತುಕೊಳ್ಳಲು ಜಾಗವಿಲ್ಲದ ಕಾಫಿ ತೋಟವೊಂದರಲ್ಲಿ ನಡೆಯುತ್ತಿದ್ದ ಸರಕಾರಿ ಶಾಲೆಯಲ್ಲಿ ಕಲಿತ ನಾನು ಇಂದು ಜಿಲ್ಲಾಧಿಕಾರಿಯಾದರೆ, ಇಲ್ಲಿಯೇ ಕಲಿತ ಅನಿಲ್ಕುಮಾರ್ ಗುಬ್ಬಿಯ ತಹಸೀಲ್ದಾರ್ ಆಗಿದ್ದಾರೆ. ನನಗೆ ಪಾಠ ಮಾಡಿದ ನಾಗೇಶ್ ಭಟ್ಟ ಎಂಬ ಶಿಕ್ಷಕರ ಮಾರ್ಗದರ್ಶನ ನನ್ನನ್ನು ಇಂದು ಈ ಮಟ್ಟಕ್ಕೆ ತಂದು ಕೂರಿಸಿದೆ ಎಂದು ಕ್ಷಣ ಕಾಲ ಭಾವುಕರಾದರು.
ಸಂಸ್ಕೃತಿ, ಪರಂಪರೆಗಳ ಸಮ್ಮಿಲನ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಬೇರೆ ಬೇರೆ ರಾಜ್ಯಗಳ ಸಂಸ್ಕೃತಿ, ಪರಂಪರೆಗಳ ಸಮ್ಮಿಲನದ ದೃಷ್ಟಿಯಿಂದ 1985 ರಲ್ಲಿ ಈ ನವೋದಯ ವಿದ್ಯಾಲಯಗಳನ್ನು ಅಸ್ತಿತ್ವಕ್ಕೆ ತಂದಿದ್ದು, ಗ್ರಾಮೀಣ ಮಕ್ಕಳು ಜಾಗತಿಕ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಸಮೃದ್ಧಿ-ಸಮಸ್ಯೆ ನಾಡು: ಜಿಲ್ಲೆಯಲ್ಲಿ ಒಂದೆಡೆ ಸಮೃದ್ದಿಯಿದ್ದರೆ, ಮತ್ತೊಂದೆಡೆ ಕುಡಿಯುವ ನೀರು, ನಕ್ಸಲ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಒಳಗೊಂಡ ಪಾವಗಡವೂ ಇದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕೆಂದು ಕೆ.ಎಸ್. ಸತ್ಯಮೂರ್ತಿ ಕಿವಿ ಮಾತು ಹೇಳಿದರು.
ಕೋಳಿ ಫಾರಂ ತೆರವಿಗೆ ಕ್ರಮ: ಅಲ್ಲದೆ ಇಲ್ಲಿನ ನೂರಾರು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಕೋಳಿ ಫಾರಂ ತೆರವಿಗೆ ಈಗಾಗಲೇ ಮೌಖಿಕ ಆದೇಶ ನೀಡಲಾಗಿದೆ. ಒಂದು ವೇಳೆ ನಮ್ಮ ಅಧಿಕಾರಿಗಳು ಈ ಕೆಲಸ ಮಾಡುವಲ್ಲಿ ವಿಫಲರಾದರೆ ಲಿಖಿತ ಆದೇಶದ ಮೂಲಕವೇ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಶೇ. 100 ಫಲಿತಾಂಶ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜವಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ದ್ರಾವಿಡ ಮಣಿ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಪ್ರಾರಂಭವಾದ ನವೋದಯ ವಿದ್ಯಾಲಯ ಪಠ್ಯ, ಪಠ್ಯೇತರ ಚಟವಟಿಕೆಗಳಲ್ಲಿಯೂ ರಾಷ್ಟ್ರದ ಗಮನ ಸೆಳೆದಿದೆ. ನಮ್ಮ ಮಕ್ಕಳ ಕ್ರೀಡೆ,ಎನ್.ಸಿ.ಸಿ.,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಬಹುಮಾನ ಗಳಿಸಿದ್ದಾರೆ. ಅಲ್ಲದೆ ಪ್ರತಿವರ್ಷ 10 ನೇ ತರಗತಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶಾಲೆ ಶೇ 100 ಫಲಿತಾಂಶ ಪಡೆಯುತ್ತಿದೆ. ಈ ಬಾರಿ 21 ವಿದ್ಯಾರ್ಥಿಗಳು ಕ್ರೀಡೆಯಲ್ಲಿ, 4 ಮಂದಿ ವಿದ್ಯಾರ್ಥಿಗಳು ಎನ್.ಸಿ.ಸಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಭಾಗದಿಂದ ಬಂದಿರುವ ಮಕ್ಕಳಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟನಲ್ಲಿ ಹೆಣ್ಣು ಮಕ್ಕಳಿಗಾಗಿ 210 ಬೆಡ್ಗಳ ಹೊಸ ಡಾರ್ಮೆಟ್ರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗಂಡು ಮಕ್ಕಳಿಗೂ ಹೊಸ ಡಾರ್ಮೆಟ್ರಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಸೇರಿದಂತೆ ಇದುವರೆಗೂ ಗೊಲ್ಲಹಳ್ಳಿ ನವೋದಯ ಶಾಲೆಯಲ್ಲಿ ಕೆಲಸ ಮಾಡಿ ಬೇರೆ ಕಡೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದರು.ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಸಂತಸದ ಕ್ಷಣ
ಇದೊಂದು ಸಂತಸದ ಕ್ಷಣ. ಕಳೆದ 25 ವರ್ಷಗಳ ಹಿಂದೆ ಒಂದೆಡೆ ಕಲೆತು ಓದಿದ ಗೆಳೆಯರು, ಕಲಿಸಿದ ಗುರುಗಳನ್ನು ನೋಡುವ ಅವರೊಂದಿಗೆ ಮಾತನಾಡುವ,ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ. ಬೇರೆ ಬೇರೆ ಜವಾಬ್ದಾರಿಗಳನ್ನು ಹೊತ್ತಿರುವ ಜನ ಕಲೆತು ತಮ್ಮ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಮೆಲುಕು ಹಾಕುವುದು ಒಂದು ಅಪೂರ್ವ ಅನುಭವ ಎಂದ ಸತ್ಯಮೂರ್ತಿ, ಹಿರಿಯರಾಗಿರುವ ನೀವು  ಕಿರಿಯರಿಗೆ ಮಾರ್ಗದರ್ಶನ ಮಾಡುವ ಮೂಲಕ ಅವರು ನಿಮ್ಮಂತೆಯೇ ಒಳ್ಳೆಯ ವಿದ್ಯಾವಂತರಾಗಿ, ಸಮಾಜದ ಸತ್ಪ್ರಜೆಗಳಾಗಿ ಬದುಕುವಂತೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.