ಸರ್ಕಾರಿ ಭೂಮಿ ರಾಜಾರೋಷ ಒತ್ತುವರಿ
ತುಮಕೂರು: ತುಮಕೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ರಾಜಾರೋಷವಾಗಿ ನಡೆಯುತ್ತಿದ್ದು ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಇರುವ ದರ್ಗಾ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ಮಾಲೀಕತ್ವದ ಹೆಚ್ಎಂಎಸ್ ಪಾಲಿಟೆಕ್ನಿಕ್ ಮುಂಭಾಗ ಅನಧಿಕೃತ ಕಾಮಗಾರಿ ನಡೆದಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಇರುವ ದರ್ಗಾ ಮುಂಭಾಗದಲ್ಲಿ ಅನಧಿಕೃತ ಕಾಂಪೌಂಡ್ ನಿರ್ಮಿಸುತ್ತಿದೆ. ಹಾಗೂ ಹೆಚ್ಎಂಎಸ್ ಪಾಲಿಟೆಕ್ನಿಕ್ ಮುಂಭಾಗ ಅನಧಿಕೃತವಾಗಿ ಕಟ್ಟಡವೊಂದು ತಲೆ ಎತ್ತುತ್ತಿದೆ. ಇಷ್ಟೆಲ್ಲಾ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ತುಮಕೂರು ನಗರಸಭೆ ಆಯುಕ್ತರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಈ ಕೂಡಲೇ ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಅಧಿಕಾರಿಗಳು ಅಕ್ರಮ ಒತ್ತುವರಿ ತೆರವಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟ ರೂಪಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಎಚ್ಚರಿಸಿದ್ದಾರೆ.
ಸ್ಥಳೀಯ ಶಾಸಕರು, ಮಾಜಿ ಶಾಸಕರ ಒಡೆತನದ ಕಾಲೇಜಿನಿಂದಲೇ ಇಂತಹ ಕೃತ್ಯ ನಡೆದರೆ, ತಪ್ಪೆಸಗಿದ ಜನಸಾಮಾನ್ಯರಿಗೆ ಏನು ಹೇಳಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಸುಳ್ಳು ಮಾಹಿತಿ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ದಂಧೆ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಇಲಾಖೆ ಹೇಳಿರುವುದು ಸುಳ್ಳು ಎಂದ ಮಾಜಿ ಸಚಿವರು ಶಿರಾ ತಾಲೂಕಿನ ಮದಲೂರು ಕೆರೆಯಲ್ಲಿ 160 ಅಡಿ ಆಳದವರೆಗೆ ಮರಳು ತೆಗೆಯಲಾಗಿದೆ ಎಂದರು.
ಕಳೆದ 5 ವರ್ಷಗಳಲ್ಲಿ ಆಗದ ಮರಳು ಲೂಟಿ, ಕಾಂಗ್ರೆಸ್ ಸರಕಾರ ಬಂದ 5 ತಿಂಗಳಲ್ಲಿ ಆಗಿದೆ. ಆಲಿಬಾಬಾ ಮತ್ತು 40 ಮಂದಿ ಕಳ್ಳರಂತೆ, ಸರಕಾರ ಮತ್ತು ಅಧೀನ ಅಧಿಕಾರಿಗಳು ಮರಳು ಲೂಟಿ ಹೊಡೆಯುತ್ತಿದ್ದಾರೆ. ಶಿರಾದ ಅಕ್ರಮ ಮರಳು ದಂಧೆಯಲ್ಲಿ 7 ಮಂದಿ ಪೊಲೀಸರು ಶಾಮೀಲಾಗಿದ್ದು, ನಾಲ್ಕೈದು ಮಂದಿ ಬೇನಾಮಿ ಹೆಸರಲ್ಲಿ ಮರಳು ಲಾರಿ ಹೊಂದಿ ಅಕ್ರಮ ಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಮರಳು ದಂಧೆ ಇಲ್ಲ ಎನ್ನುವ ಡಿಸಿ , ಎಸ್ಪಿಗಳು ನನ್ನನ್ನು ಮಾಧ್ಯಮವರೊಟ್ಟಿಗೆ ಕರೆದೊಯ್ಯಲಿ ಅಕ್ರಮ ಎಲ್ಲೆಲ್ಲಿ ಎಂಬುತ್ತನ್ನು ತೋರಿಸುತ್ತೇನೆ ಎಂದು ಸೊಗಡು ಸವಾಲೆಸೆದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದ್ಲ 185 ಕೋಟಿ ಮೊತ್ತದ ವಿವಿಧ ವಾರ್ಡ್ಗಳ ಅಭಿವೃದ್ಧಿ ಕಾಮಗಾರಿಗಳು ನಗರದಲ್ಲಿ ನೆನೆಗುದಿಗೆ ಬಿದ್ದಿದ್ದು, ಶಾಸಕರು, ಸಂಸದರು ಬರೀ ರಸ್ತೆ ಕಾಮಗಾರಿ ಉದ್ಘಾಟಿಸಿದ ಫೋಟೋ ತೆಗೆಸಿಕೊಳ್ಳುವುದಕ್ಕೆ ಸೀಮಿತವಾಗಿದ್ದಾರೆ ಎಂದು ಛೇಡಿಸಿದರು. ಕ್ಯಾತ್ಸಂದ್ರ ಪೇಟೆ ಬೀದಿ ರಸ್ತೆ 6 ತಿಂಗಳಾದರೂ ನಿರ್ಮಾಣವಾಗದಿರಲು ಎಂಪಿ ಬಸವರಾಜು ಅವರು ಲೋಕಾಯುಕ್ತಕ್ಕೆ ಪತ್ರ ಬರೆದಿರುವುದೇ ಕಾರಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್. ಶಿವಪ್ರಸಾದ್, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಬಿ.ಕೆ. ಮಂಜುನಾಥ್, ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಶಬ್ಬೀರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸ್ನೇಕ್ ನಂದೀಶ್, ಉಪಾಧ್ಯಕ್ಷ ಗಿರೀಶ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

