ತುಮಕೂರು

ಕ್ರೀಡೆಗೆ ಶಾಶ್ವತ ಅನುದಾನಕ್ಕೆ ಮಾತುಕತೆ

Published On :

ಕ.ಪ್ರ. ವಾರ್ತೆ  ತುಮಕೂರು  ಡಿ. 5
ಅಥ್ಲೆಟಿಕ್ಸ್ ಸೇರಿದಂತೆ ದೇಶಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಶಾಶ್ವತ ಅನುದಾನ ಹೊಂದುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಕೆ.ಪಿ.ಸಿ.ಸಿ.ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾಸಂಸ್ಥೆ ಹಮ್ಮಿಕೊಂಡಿರುವ ರಾಷ್ಟ್ರೀಯ ಕಿರಿಯ ಬಾಲಕ-ಬಾಲಕಿಯರು ಚಾಂಪಿಯನ್ ಶಿಫ್  ಮತ್ತು ಪುರುಷ ಮಹಿಳೆಯರ ಫೆಡರೇಷನ್ ಕಪ್ ಪಂದ್ಯಾವಳಿಯ ವೇಳೆ ಆಗಮಿಸಿ ಪಂಜಾಬ್ ಮತ್ತು ರಾಜಸ್ಥಾನ ತಂಡಗಳ ಆಟಗಾರರನ್ನು ಪರಿಚಯಿಸಿಕೊಂಡ ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಅಗತ್ಯ ಮೂಲಭೂತ ಸೌಕರ್ಯ ಹೊಂದುವ ನಿಟ್ಟಿನಲ್ಲಿ ಹೆಚ್ಚಿನ ಶಾಶ್ವತ ಅನುದಾನದ ಅಗತ್ಯವಿದೆ ಎಂದರು.
13 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್: ರಾಜ್ಯದಲ್ಲಿ ಅಥ್ಲೆಟಿಕ್ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 30 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಈಗಾಗಲೇ ಸಿಂಥಟಿಕ್ ಟ್ರಾಕ್ಸ್ ನಿರ್ಮಿಸಲಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಿಂಥಟಿಕ್ ಟ್ರ್ಯಾಕ್ ನಿರ್ಮಾಣಗೊಳ್ಳಲಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಆರಂಭಗೊಂಡಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಫ್ ಕ್ರೀಡಾಕೂಟದಲ್ಲಿ ಕರ್ನಾಟಕ ಈಗಾಗಲೇ 2 ಚಿನ್ನದ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದೆ ಎಂದರು.
ತರಬೇತಿ ಶಿಬಿರ: ಗ್ರಾಮೀಣ ಭಾಗಗಳಿಂದ ಹೆಚ್ಚಿನ ಕ್ರೀಡಾಪಟುಗಳು ಅಥ್ಲೆಟಿಕ್, ಖೋ-ಖೋ, ಕಬ್ಬಡಿಯಂತಹ ದೇಶಿಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅವರನ್ನು ಪ್ರೋತ್ಸಾಹಿಸಲು ಸರಕಾರ ಅವರಿಗೆ ವಿದ್ಯಾರ್ಥಿ ವೇತನ, ತರಬೇತಿ ಶಿಬಿರಗಳನ್ನು ಏರ್ಪಡಿಸುವ ಅಗತ್ಯವಿದೆ ಎಂದರು.
ರಾಜ್ಯದಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸಿಇಟಿ ಪ್ರವೇಶದಲ್ಲಿ ಎನ್.ಸಿ.ಸಿ., ಎನ್.ಎಸ್.ಎಸ್.ಗೆ ಇರುವಂತೆ ಕ್ರೀಡೆಗೂ ಮೀಸಲಾತಿ ಕಲ್ಪಿಸಲಾಗಿದೆ. ಇದರಿಂದ ಕ್ರೀಡಾಪಟುಗಳು ಡಾಕ್ಟರ್, ಎಂಜಿನಿಯರ್ ಮತ್ತಿತರರ ವೃತ್ತಿಪರ ಕೋರ್ಸುಗಳನ್ನು ಓದಲು ಸಹಕಾರಿಯಾಗಿದೆ. ಇದು ದೇಶದಲ್ಲಿ ಕರ್ನಾಟಕ ಮಾದರಿಯಾಗಿದೆ ಎಂದು ಡಾ.ಪರಮೇಶ್ವರ್ ನುಡಿದರು.
ಚಿನ್ನದ ಪದಕ ನೀಡಿ ಪ್ರೋತ್ಸಾಹ: ನಾನು ಸ್ವತಃ ಕ್ರೀಡಾಪುಟುವಾಗಿದ್ದು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ 100 ಮೀಟರ್ ಓಟವನ್ನು 10.9 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ದಾಖಲೆ ಮಾಡಿದ್ದು ಇದುವರೆಗೂ ಈ ದಾಖಲೆಯನ್ನು ಯಾರು ಮುರಿದಿಲ್ಲ. ಒಂದೇ ಈ ದಾಖಲೆಯನ್ನು ಅಳಿಸಿಹಾಕಿದರೆ ಅಂತಹವರಿಗೆ ಚಿನ್ನದಪದಕ ನೀಡಿ ಪ್ರೋತ್ಸಾಹಿಸುವುದಾಗಿ ಘೋಷಿಸಿದ ಪರಮೇಶ್ವರ್, ಮಕ್ಕಳು ಸೋಲು-ಗೆಲವಿನ ಜೊತೆಗೆ ಕ್ರೀಡಾಸ್ಪೂರ್ತಿಯೊಂದಿಗೆ ಕೂಟದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದ ಕ್ರೀಡಾಸಂಸ್ಥೆ ರಾಷ್ಟ್ರಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿ ನಡೆಸುವ ಮೂಲಕ ಒಂದು ಒಳ್ಳೆಯ ಕೆಲಸ ಮಾಡಿದೆ. ಕ್ರೀಡಾ ಕ್ಷೇತ್ರದಲ್ಲಿ ಅದರಲ್ಲಿಯೂ ಖೋ-ಖೋ, ಪುಟ್ಬಾಲ್ ಮತ್ತು ಕಬ್ಬಡಿಯಲ್ಲಿ ಕರ್ನಾಟಕ ಒಂದು ಕಾಲದಲ್ಲಿ ಸಾಕಷ್ಟು ಸಾಧನೆ ಮಾಡಿತ್ತು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಇಲ್ಲಿಂದ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದರು. ಎಷ್ಟೇ ಕಷ್ಟ, ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಇಂದಿಗೂ ಕೂಡ ಕರ್ನಾಟಕ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ದೇಶಿಯ ಕ್ರೀಡೆಗಳಾ ಖೋ-ಖೋ, ಕಬ್ಬಡಿಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಡಾ.ಪರಮೇಶ್ವರ್ ನುಡಿದರು.
ಅಖಿಲಭಾರತ ಖೋ-ಖೋ ಫೆಡರೇಷನ್‌ನ ಉಪಾಧ್ಯಕ್ಷ ಸುರೇಶ್ ಶರ್ಮ, ಉಪಾಧ್ಯಕ್ಷ ರಾಜಗೋಪಾಲ್, ಕಾಂಗ್ರೆಸ್ ಮುಖಂಡರಾದ ನಯಾಜ್ ಅಹಮದ್, ದಿನೇಶ್ ಕುಮಾರ್, ಸ್ವಾಮಿ ವಿವೇಕಾನಂದ ಕ್ರೀಡಾಸಂಸ್ಥೆಯ ಖಜಾಂಚಿ ಸುನಿಲ್, ಧನಿಯಾ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.