ತುಮಕೂರು

ನಡೆಯದ ಗ್ರಾಮಸಭೆ, ಗ್ರಾಮಸ್ಥರಿಂದ ಸಿಬ್ಬಂದಿಗೆ ದಿಗ್ಬಂಧನ

Published On :

ತುರುವೇಕೆರೆ: ಕರೆಯಲಾಗಿದ್ದ ಗ್ರಾಮಸಭೆಯನ್ನು ನಡೆಸದೇ ಏಕಾಏಕಿ ಸಭೆಯನ್ನು ಮುಂದೂಡಿದ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು ಸಭೆ ನಡೆಸಲು ಬಂದಿದ್ದ ಸಿಬ್ಬಂದಿಗೇ ದಿಗ್ಬಂಧನ ಹಾಕಿರುವ ಪ್ರಕರಣ ಸಮೀಪದ ಕೋಳಘಟ್ಟ ಗ್ರಾಮದಲ್ಲಿ ನಡೆದಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದೆಛ್ಯೂಗ ಖಾತ್ರಿ ಯೋಜನೆಯ 2013- 14 ನೇ ಸಾಲಿನ 2 ನೇ ಸುತ್ತಿನ ಸಾಮಾಜಿಕ ಪರಿಶೀಲನಾ ಕಾರ್ಯಕ್ರಮದ ಗ್ರಾಮ ಸಭೆಯನ್ನು  ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ಕೋಳಘಟ್ಟದಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಲಾಗಿತ್ತು. ಕಾರ್ಯಕ್ರಮದ ಕುರಿತು ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಶಾರದಮ್ಮ ಎಲ್ಲಾ ಗ್ರಾಮ ಪಂಚಾಯ್ತಿಯ ಸದಸ್ಯರಿಗೆ ಮಾಹಿತಿ ನೀಡಿ ಸಭೆಗೆ ಆಹ್ವಾನಿಸಿದ್ದರು.  ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿ ವಾಳ್ವೇಕರ್ ಅವರು ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕಿತ್ತು. ಸಭೆ 11 ಗಂಟೆಗೆಂದು ನಿಗದಿಯಾಗಿತ್ತು. ಆದರೆ ಸಭೆಗೆ ಸಾಮಾಜಿಕ ಪರಿಶೋಧನಾ ತಾಲೂಕು ಸಂಯೋಜಕಿ ಹೇಮಾವತಿ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾಗಿ ತ್ರಿವೇಣಿ, ಉಮೇಶ್, ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಶಾರದಮ್ಮ ಆಗಮಿಸಿದ್ದರು. ಸಮಯ ಮೀರಿದರೂ ಸಹ ಇಓ ಸಭೆಗೆ ಹಾಜರಾಗಲಿಲ್ಲ. ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ದೇವರಾಜು, ಗ್ರಾಮ ಪಂಚಾಯ್ತಿ ಸದಸ್ಯರಾದ ಇಂದಿರಮ್ಮ, ಇಂದ್ರಕುಮಾರ್, ಆಶಾ ಹರೀಶ್ ಹಾಜರಿದ್ದರು.
ಬುಗಿಲೆದ್ದ ಅಸಮಾಧಾನ:  ಸಭೆ ಆರಂಭಗೊಳ್ಳದ ಬಗ್ಗೆ ಗ್ರಾಮದ ಮುಖಂಡರಾದ ಯೋಗಾನಂದ್, ಗುರುಲಿಂಗಯ್ಯ ಮೊದಲಾದವರಲ್ಲಿ ಅಸಮಾಧಾನ ಭುಗಿಲೆದ್ದಿತು. ಸಭೆಗೆ ಹಾಜರಾಗಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇಓ ಅವರು ಗ್ರಾಮ ಸಭೆ ಕುರಿತು ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿಲ್ಲದಿರುವುದರಿಂದ ಕೂಡಲೇ ಸಭೆಯನ್ನು ಮುಂದೂಡಿ ಗ್ರಾಮದಿಂದ ಬರುವಂತೆ ಇಓ ವಾಳ್ವೇಕರ್ ಸಿಬ್ಬಂದಿಗೆ ಸೂಚಿಸಿದರು. ಇದರಿಂದ ಕೆರಳಿದ ಗ್ರಾಮದ ಮುಖಂಡರುಗಳು ನಿನ್ನೆ ಹಾಗೂ ಇಂದು ಗ್ರಾಮದ ಎಲ್ಲ ಜನರಿಗೂ ಸಭೆ ಇರುವ ಬಗ್ಗೆ ಟಾಂ ಟಾಂ ಹೊಡಿಸಿ ವಿಷಯ ಮುಟ್ಟಿಸಲಾಗಿದೆ. ಜನರು ಸಭೆಗೆ ಹಾಜರಾಗುತ್ತಿರುವ ವೇಳೆ ದಿಡೀರನೇ ಸಭೆ ಮುಂದೂಡಲು ಕಾರಣವೇನು. ರೈತರ ಸಮಯಕ್ಕೆ ಬೆಲೆ ಇಲ್ಲವೇ ಎಂದು ಕಿಡಿಕಾರಿದರು. ಆ ವೇಳೆಗೆ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಇದ್ದ ಇಓ ವಾಳ್ವೇಕರ್ ಅವರು ಸಿಬ್ಬಂದಿಯನ್ನು ಕರೆತರುವಂತೆ ಜೀಪನ್ನು ಕಳಿಸಿದರು. ಇದರಿಂದ ಮತ್ತೂ ಕೋಪೋದ್ರಿಕ್ತರಾದ ಜನರು ವಾಹನ ಸಹಿತ ಸಿಬ್ಬಂದಿಯನ್ನು ಗ್ರಾಮದ ಅರಳೀಕಟ್ಟೆಯ ಕೆಳಗೆ ಕೂರಿಸಿ ಗ್ರಾಮದಿಂದ ಹೊರಗೆ ಹೋಗದಂತೆ ದಿಗ್ಬಂಧನ ಹಾಕಿದರು. ಸ್ಥಳಕ್ಕೆ ಇ ಓ ರವರೇ ಆಗಮಿಸಿ ಸಭೆಯನ್ನು ಮುಂದೂಡಲು ಇರುವ ಕಾರಣವನ್ನು ವಿವರಿಸುವವರೆಗೂ ಸಿಬ್ಬಂದಿಯನ್ನು ಗ್ರಾಮದಿಂದ ಹೊರಗೆ ಕಳಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇತ್ತ ಅಸಹಾಯಕರಾದ ಸಾಮಾಜಿಕ ಪರಿಶೋಧನಾ ತಾಲೂಕು ಸಂಯೋಜಕಿ ಹೇಮಾವತಿ, ಸಂಪನ್ಮೂಲ ವ್ಯಕ್ತಿಗಳಾದ ತ್ರಿವೇಣಿ, ಉಮೇಶ್ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಶಾರದಮ್ಮ ಅವರನ್ನು ಹಾಗೂ ಜೀಪ್ ಚಾಲಕ ಪೆಚ್ಚು ಮೋರೆ ಹಾಕಿಕೊಂಡು ಗ್ರಾಮದಲ್ಲೇ ಕುಳಿತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.