ತುಮಕೂರು

ಗೋಮಾಳದಲ್ಲಿ ಸಾರಿಗೆ ಡಿಪೋ, ರೈತಸಂಘದ ಪ್ರತಿಭಟನೆ

Published On :

ಚಿಕ್ಕನಾಯಕನಹಳ್ಳಿ: ಗ್ರಾಮೀಣ ಭಾಗದಲ್ಲಿ ಅಳಿದುಳಿದಿರುವ ಗೋಮಾಳವನ್ನು ಪಟ್ಟಣದ ಅವಶ್ಯಕತೆಗಾಗಿ ಕಬಳಿಸುವುದರ ವಿರುದ್ಧ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಕಾಡೇನಹಳ್ಳಿ ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ನೆಹರು ಸರ್ಕಲ್‌ನಿಂದ ಹೊರಟು ತಾಲೂಕು ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು,ಕಾಡೇನಹಳ್ಳಿ ಗ್ರಾಮ ಹೊನ್ನೇಬಾಗಿ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಮಪಂಚಾಯ್ತ ವ್ಯಾಪ್ತಿಯಲ್ಲಿ ನಿರ್ಣಯ ಕೈಗೊಳ್ಳುವ ಅಧಿಕಾರ ಗ್ರಾಮಪಂಚಾಯ್ತಿಗೆ ಮಾತ್ರ ಸೇರಿರುತ್ತದೆ. ಆದರೆ ಪಟ್ಟಣದ ಪುರಸಭೆಯವರು ಗ್ರಾಮಪಂಚಾಯ್ತಿಯ ಹಕ್ಕನ್ನು ಕಸಿದುಕೊಳ್ಳುವ ನಿರ್ಣಯ ಮಾಡಿರುವುದು ಖಂಡನೀಯ ಎಂದರು. ತಮ್ಮ ವ್ಯಾಪ್ತಿಗೊಳಪಡದ ಭೂಮಿಯ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಇವರಿಗೆ ಯಾರು ನೀಡಿದರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಈಗಾಗಲೇ ಗೋಮಾಳ ಜಮೀನು ಕಾಣೆಯಾಗಿದ್ದು,ಇರಕುವ ಜಾನುವಾರುಗಳಿಗೆ ಮೇವಿಗೆ ಕೊರತೆ ಉಂಟಾಗಿದೆ. ಸರ್ಕಾರದ ಮಾನದಂಡದಂತೆ ಜಾನುವಾರುಗಳ ಸಂಖ್ಯೆಯ ಆಧಾರದ ಮೇಲೆ ಗೋಮಾಳವನ್ನು ಮೀಸಲಿಡ ಬೇಕಾಗುತ್ತದೆ. ಗ್ರಾಮದಲ್ಲಿರುವ ಜಾನುವಾರುಗಳಿಗೆ ಹಾಲಿ ಇರುವ ಗೋಮಾಳ ಕಡಿಮೆಯಿದ್ದು, ಇರುವ ಅಲ್ಪಸ್ವಲ್ಪ ಜಮೀನನ್ನು ಅನ್ಯಕಾರ್ಯಗಳಿಗೆ ಬಳಸಿದರೆ, ಮುಂದೆ ನಾವು ನಮ್ಮ ಜಾನುವಾರುಗಳನ್ನು ಮನೆಯಿಂದ ಹೊರಗೆ ಬಿಡಲು ಜಾಗವಿಲ್ಲದಂತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗೋಮಾಳದ ಜಮೀನನ್ನು ಸಾರಿಗೆ ಸಂಸ್ಥೆಯ ಡಿಪೋ ನಿರ್ಮಾಣಕ್ಕೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಸದಸ್ಯರು ಮತ್ತು ಹಸಿರು ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.