ತುಮಕೂರು

'ಜಿಲ್ಲೆಗೆ ಸಾಂಸ್ಕೃತಿಕ ನೆಲೆಗಟ್ಟು ಕಟ್ಟಿಕೊಡುವ ಕೇಂದ್ರ ಅವಶ್ಯ'

Published On :

ತುಮಕೂರು: ತುಮಕೂರು ಜಿಲ್ಲೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು ಇಂದಿನ ಪೀಳಿಗೆಗೆ ನಾಟಕ, ಸಾಹಿತ್ಯ, ಸಂಗೀತ, ಚಿತ್ರ ಶಿಲ್ಪಗಳಂತಹ ಲಲಿತಕಲೆಗಳೆಲ್ಲವೂ ಒಟ್ಟಿಗೆ ಸಿಗುವಂತಹ ಸಾಂಸ್ಕೃತಿಕ ನೆಲೆಗಟ್ಟನ್ನು ಕಟ್ಟಿಕೊಡುವ ಕೇಂದ್ರ ಜಿಲ್ಲೆಗೆ ಅವಶ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೂತನ ಆಯುಕ್ತ ಬಿ.ಟಿ. ಮುನಿರಾಜಯ್ಯ ತಿಳಿಸಿದರು. ಅವರು ಇಲ್ಲಿನ ಕಲರ್ಸ್ ಗ್ರೂಪ್ ಕಲಾವಿದರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಕ್ಕಳ ತಜ್ಞ ತುಮಕೂರು ಶಿವಕುಮಾರ್ ಮಾತನಾಡಿ ಕಲರ್ಸ್ ಗ್ರೂಪ್ ಸಂಸ್ಥೆಯ ದಶಮಾನೋತ್ಸವ ಸಂಭ್ರದಲ್ಲಿದ್ದು ಸತತ ಹತ್ತು ವರ್ಷಗಳಿಂದ ಚಿತ್ರಕಲಾ ಪ್ರದರ್ಶನ, ಸ್ಪರ್ಧೆ, ಶಿಬಿರ, ವಿಚಾರ ಸಂಕಿರಣ, ಮನೆಗೊಂದು ಕಲಾಕೃತಿ, ನಿಮ್ಮೊಂದಿಗೆ ನಾವು ಮುಂತಾದ ವಿಶಿಷ್ಟ ಕಲಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ರಾಜ್ಯಾದ್ಯಂತ ಸುಮಾರು 6 ಲಕ್ಷ ಮಕ್ಕಳಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಇಂದು ಪೊಲೀಸ್ ಕ್ರೀಡಾಕೂಟ
ತುಮಕೂರು: ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಡಿ.19 ರಿಂದ 21 ರವರೆಗೆ 3 ದಿನಗಳ ಕಾಲ ಏರ್ಪಡಿಸಲಾಗಿದೆ. ಡಿ. 19 ರಂದು ಬೆಳಗ್ಗೆ 9 ಗಂಟೆಗೆ ಎಸ್ಪಿ ಕಚೇರಿ ಆವರಣದಲ್ಲಿರುವ ಡಿಎಆರ್ ಮೈದಾನದಲ್ಲಿ  ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಉದ್ಘಾಟಿಸಲಿದ್ದಾರೆ. ಎಸ್ಪಿ ರಮಣಗುಪ್ತ ಹಾಗೂ ಎಎಸ್ಪಿ ಲಕ್ಷ್ಮಣ್ ಉಪಸ್ಥಿತರಿರುವರು. ಡಿ.21 ರಂದು ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಸಮಾರಂಭ ಏರ್ಪಾಟಾಗಿದೆ. ಕೇಂದ್ರ ವಲಯ ಐಜಿಪಿ ಅಮರ್‌ಕುಮಾರ್ ಪಾಂಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ. ಅಂಜಲಿ ಪಾಂಡೆ ಬಹುಮಾನ ವಿತರಿಸಲಿದ್ದಾರೆ.
ನರ್ಸರಿ ನಿರ್ವಹಣಾ ತಾಂತ್ರಿಕತೆ ತರಬೇತಿ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್‌ನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನರ್ಸರಿ ನಿರ್ವಹಣಾ ತಾಂತ್ರಿಕತೆಗಳ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ನಾಗಪ್ಪ ದೇಸಾಯಿ ನರ್ಸರಿ ನಿರ್ವಹಣೆಯಲ್ಲಿ  ಅನುಸರಿಸಬೇಕಾದ ವಿವಿಧ ಕ್ರಮಗಳನ್ನು ವಿವರಿಸಿದರು.  ತರಕಾರಿ ಬೆಳೆಗಳ ಸಸಿ ಮಡಿ ಮಾಡುವುದು, ನಿಂಬೆಯ ವಿವಿಧ ಜಾತಿಗಳು, ಮಾವು ಹಾಗೂ ಹಲಸಿನಲ್ಲಿ ಕಸಿ ಮಾಡುವ ವಿಧಾನವನ್ನು ರೈತರ ಭಾಗವಹಿಸುವಿಕೆ ಹಾಗೂ ಪ್ರಾತ್ಯಕ್ಷಿಕೆ ಮೂಲದ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಯಿತು. ಕೇಂದ್ರದ ವಿಜ್ಞಾನಿಗಳಾದ ಡಾ.ಶ್ರೀನಿವಾಸ್, ಡಾ.ಎಂ.ಎಚ್.ಶಂಕರ್, ಡಾ.ಬಿ. ಮಮತಾ, ಡಾ.ರೂಪಾ ಬಿ.ಪಾಟೀಲ್, ಡಾ. ಶಿವಪ್ಪನಾಯಕ ಸೇರಿದಂತೆ 25ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
'ಕೆಂಪೇಗೌಡ ಆಸ್ಪತ್ರೆ ನಿರ್ಮಾಣಕ್ಕೆ ಬದ್ಧ'
ಪಾವಗಡ: ಪಟ್ಟಣದಲ್ಲಿ ಕೆಂಪೇಗೌಡ ಆಸ್ಪತ್ರೆ ನಿರ್ಮಾಣ ಸೇರಿದಂತೆ ಒಕ್ಕಲಿಗರ ಸಂಘದ ವಿದ್ಯಾರ್ಥಿ ನಿಲಯ  ಅಭಿವೃದ್ಧಿಗೆ ಬದ್ಧರಾಗವುದಾಗಿ ಅಡಿಟರ್ ಯಲಚವಾಡಿ ನಾಗರಾಜ್ ತಿಳಿಸಿದರು.
ಜ.5ರಂದು ಬೆಂಗಳೂರಿನಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆ ಹಿನ್ನಲೆಯಲ್ಲಿ  ಪಾವಗಡಕ್ಕೆ ಭೇಟಿ ನೀಡಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಕ್ಕಲಿಗ ಸಂಘದ ರಾಜ್ಯ ನಿರ್ದೇಶಕರ ಚುನಾವಣೆ ಆಯ್ಕೆ ಹಿನ್ನಲೆಯಲ್ಲಿ ಭೇಟಿ ನೀಡಿ ತಾಲೂಕಿನದ್ಯಂತ ಈಗಾಗಲೇ ಪ್ರವಾಸ ಹಮ್ಮಿಕೊಂಡು ಸಂಘದ ಸದಸ್ಯರನ್ನು ಭೇಟಿ ಮಾಡಲಾಗಿದೆ. ಜನಾಂಗದ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ತಾ.ಜಂಗಮರಹಳ್ಳಿ ಗ್ರಾಮದ ನಾಗರಾಜ್ ಎಂಬುವರು 2ಎಕರೆ ಉಚಿತ ಜಮೀನು ಕಲ್ಪಿಸಿದ್ದು ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ 1ರಿಂದ 10ರವರೆವಿಗೆ ಸಿಬಿಎಸಿ ಶಾಲೆ ತೆರೆಯಲು ಯೋಜನೆ ರೂಪಿಸಲಾಗಿದೆ ಎಂದರು.
ಒಕ್ಕಲಿಗರೂ ಸೇರಿದಂತೆ ಎಲ್ಲಾ ಜನಾಂಗದ ಆರೋಗ್ಯ ದೃಷ್ಟಿಯಿಂದ ಪಟ್ಟಣದಲ್ಲಿ ಕೆಂಪೇಗೌಡ ಆಸ್ಪತ್ರೆ  ತೆರೆಯಲು ಯೋಜನೆ ರೂಪಿಸಿದ್ದು ಗಡಿಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬದ್ಧರಾಗುವ ಭರವಸೆ ನೀಡಿದರು.
ತಾಲೂಕಿನಲ್ಲಿ 8 ಸಾವಿರ ಸೇರಿದಂತೆ ಜಿಲ್ಲೆಯಲ್ಲಿ ಸಂಘದ ಸದಸ್ಯತ್ವ ಪಡೆದ ಒಟ್ಟು 20ಸಾವಿರ ಮತದಾರರಿದ್ದು ಜಿಲ್ಲೆಯಿಂದ ರಾಜ್ಯ ಒಕ್ಕಲಿಗ ಸಮುದಾಯ ಸಂಘಕ್ಕೆ ಈಗಾಗಲೇ 3 ಬಾರಿ ಸ್ಪರ್ಧಿಸಿ ಜಯಗಳಿಸಿ ಅನೇಕ ಅಭಿವೃದ್ಧಿ ಕಾರ್ಯಗಳು ಕೈಗೊಂಡಿದ್ದೇನೆ. ನಾಲ್ಕನೇ ಬಾರಿಗೆ ರಾಜ್ಯ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆಗೆ ಜಿಲ್ಲೆಯಿಂದ ಮತ್ತೆ ಸ್ಪರ್ಧಿಸಿದ್ದು ಸಮುದಾಯದ ಸದಸ್ಯತ್ವ ಪಡೆದ ಎಲ್ಲಾ ಮತದಾರರರು ಮತ ನೀಡಿ ಗೆಲ್ಲಿಸುವಂತೆ ಅವರು ಮನವಿ ಮಾಡಿದರು. ಹಿರಿಯ ಮುಖಂಡ ಚಿಕ್ಕನಾಗಪ್ಪ ಮಾತನಾಡಿ ಜನಪರ ಅಭಿವೃದ್ಧಿ ಸೇರಿದಂತೆ ಸರಳ ಸಜ್ಜನಿಕೆ ಹೆಸರಾದ ಹಾಲಿ ರಾಜ್ಯ ನಿರ್ದೇಶಕರ ಆಯ್ಕೆ ಚುನಾವಣೆಗೆ ಸ್ಪರ್ಧಿಸಿದ್ದ ಯಲಚವಾಡಿ ನಾಗರಾಜ್ ಅವರಿಗೆ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಸಂಘದ ತಾ. ಅಧ್ಯಕ್ಷ ತಿಪ್ಪೇಈರಣ್ಣ, ಸಹಾಯಕ ವೈದ್ಯಾಧಿಕಾರಿ ಮಲ್ಲೇಶ್, ದಾಸಣ್ಣ, ಧನಲಕ್ಷ್ಮೀ ಹಾರ್ಡ್‌ವೇರ್ ಮಹೇಶ್, ವೀರಭದ್ರಪ್ಪ ಹಾಗೂ ಜ್ಯೋತಿ ಸೇರಿದಂತೆ ಸಂಘದ ಹಿರಿಯ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ರಾಷ್ಟ್ರಕವಿ ನೆನಪಿಗಾಗಿ ಸ್ವರಚಿತ ಕವನಗಳ ಆಹ್ವಾನ
ತಿಪಟೂರು: ಸಿರಿಗನ್ನಡ ವೆದಿಕೆ ತಾಲೂಕು ಘಟಕದ ವತಿಯಿಂದ ಡಿ.29ರ ಭಾನುವಾರ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ತಾಲೂಕಿನ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದ್ದು, ಅವುಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಿದ್ದೇವೆ. ಜೊತೆಗೆ ಅತ್ಯುತ್ತಮ ಇಪ್ಪತ್ತು ಕವನಗಳನ್ನು ಸಮಾರಂಭದಲ್ಲಿ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಆದ್ದರಿಂದ ಆಸಕ್ತಿಯುಳ್ಳ ವಿದ್ಯಾರ್ಥಿಗಳು ತಮ್ಮ ಒಂದು ಕವಿತೆಯನ್ನು ಡಿ.21ರೊಳಗೆ ಸಂಚಾಲಕರು, ಸಿರಿಗನ್ನಡ ವೇದಿಕೆ ಶ್ರೀ ಶಂಕರ್ ಟ್ರೈನಿಂಗ್ ಸೆಂಟರ್ ರಾಮಮಂದಿರ ರಸ್ತೆ, ಜೈನ ಮಂದಿರದ ಎದುರು ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9945106366 ಸಂಪರ್ಕಿಸಿ.
ಜೂಜಾಟದಲ್ಲಿ ನಿರತರಾಗಿದ್ದವರ ಮೇಲೆ ದಾಳಿ
ಕುಣಿಗಲ್: ಆಶ್ರಯ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಮಂಗಳವಾರ ರಾತ್ರಿ ಬೀದಿ ದೀಪದ ಕೆಳಗೆ ಆಂದರ್ ಬಾಹರ್ ಜೂಜಾಟದಲ್ಲಿ ನಿರತರಾಗಿದ್ದ ರಂಗಸ್ವಾಮಿ, ಇತರೆ ಏಳು ಮಂದಿ ತಂಡದ ಮೇಲೆ ದಾಳಿ ನಡೆಸಿದ ಕುಣಿಗಲ್ ಪೊಲೀಸರು ಪಣಕ್ಕಿಟ್ಟಿದ್ದ 4,831 ರು. ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತುಂತುರು ನೀರಾವರಿ ಪರಿಕರಗಳ ವಿತರಣೆ
ತಿಪಟೂರು: ತಾಲೂಕಿನ ಶಿವರ ಉಪ ಜಲಾನಯನ ವ್ಯಾಪ್ತಿಯ ಅರ್ಹಫಲಾನುಭವಿಗಳಿಗೆ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯಡಿಯಲ್ಲಿ ತುಂತುರ ನೀರಾವರಿ ಘಟಕದ ಪರಿಕರಗಳನ್ನು ಶಾಸಕ ಕೆ. ಷಡಕ್ಷರಿ ವಿತರಿಸಿದರು. ಈ ಸಂದರ್ಭದಲ್ಲಿ ಮತ್ತಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಸಿದ್ದಾಪುರ ಮಲ್ಲೇಶ್, ಗುರುಗದಹಳ್ಳಿ ಗ್ರಾ.ಪಂ.ಅಧ್ಯಕ್ಷ ಬಸವರಾಜು ಮತ್ತಿತರರಿದ್ದರು.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: ದಂಡ
ಕುಣಿಗಲ್: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದವರ ಮೇಲೆ, ದಿಢೀರ್ ಕಾರ್ಯಾಚರಣೆ ನಡೆಸಿದ ಕುಣಿಗಲ್ ಪೊಲೀಸರು, ಮದ್ದೂರುರಸ್ತೆ, ಪುರಸಭೆ ಬಸ್ ನಿಲ್ದಾಣ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮುಖ್ಯರಸ್ತೆ, ಸೇರಿದಂತೆ ವಿವಿಧ ಪ್ರದೇಶದಲ್ಲಿ 68 ಮಂದಿಗೆ ದಂಡ ವಿಧಿಸಿದರು. ಎಂಟು ಸಾವಿರದ ಎಂಟು ನೂರು ರೂಪಾಯಿ ದಂಡ ವಸೂಲು ಮಾಡಿದ್ದು ಈ ಪೈಕಿ 18 ಪ್ರಕರಣವನ್ನು ನ್ಯಾಯಾಲಯಕ್ಕೆ ಕಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.