ತುಮಕೂರು

ಸಿದ್ದು ಸರ್ಕಾರ ಸಂಪೂರ್ಣ ವಿಫಲ

Published On :

ಕ.ಪ್ರ.ವಾರ್ತೆ ,  ಕುಣಿಗಲ್ ,  ಡಿ.20
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವೈಫಲ್ಯ ಕಂಡಿದೆ. ತೆರಿಗೆ ಸಂಗ್ರಹಣೆಯಲ್ಲಿ ವೈಫಲ್ಯ ಕಂಡ ಕಾರಣ, ಹಲವು ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗದೆ, ಜನ ಸಾಮಾನ್ಯರು ಪರದಾಡುವಂತಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ತಮ್ಮ ತಾಯಿ ತವರೂರಾದ ತಾಲೂಕಿನ ನಿಡಸಾಲೆ ಗ್ರಾಮದಲ್ಲಿನ ಗ್ರಾಮದೇವತೆ ಮತ್ತು ತಾಲೂಕಿನ ಪ್ರಮುಖ ಶಕ್ತಿದೇವತೆ ತಾಣವಾದ ಉಜ್ಜಿನಿ ಚೌಡೇಶ್ವರಿ ದೇವಾಲಯದಲ್ಲಿ  ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಎಲ್ಲಿದೆ ಎಂಬ ಸಂದೇಹ ಮೂಡುತ್ತಿದೆ. ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತ ಸ್ಥಿತಿಗೆ ಸರ್ಕಾರ ಕಾರಣವಾಗಿದೆ, ಅಭಿವೃದ್ಧಿ ಕಾಮಗಾರಿಗಳಿಗೆ ಪೂರಕವಾಗಿ ಅನುದಾನ ನೀಡಲು, ತೆರಿಗೆ ಸಂಗ್ರಹಣೆಯಲ್ಲಿ ಸರ್ಕಾರ ವಿಫಲವಾಗಿ, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನವಾಗುತ್ತಿಲ್ಲ ಎಂದರು.
ಅನ್ನದಾತ ಸಂಕಷ್ಟದಲ್ಲಿದ್ದಾನೆ: ಬತ್ತ ಬೆಳೆಗಾರರಿಗೆ ಕಬ್ಬು ಬೆಳೆಗಾರರಿಗೆ ಉತ್ತಮ ಬೆಂಬಲ ಬೆಲೆ ನೀಡಲು ಬೆಳಗಾವಿ ಅದಿವೇಶದಲ್ಲಿ ತಾವು ಒತ್ತಾಯಿಸಿದ್ದರೂ, ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸದ ಕಾರಣ ಅನ್ನದಾತ ಸಂಕಷ್ಟದಲ್ಲಿದ್ದಾನೆ. ಕಬ್ಬಿಗೆ 2500 ಬೆಂಬಲ ಬೆಲೆ ನೀಡಲು ಸರ್ಕಾರ ಆದೇಶ ನೀಡಿದ್ದರೂ, ಸಕ್ಕರೆ ಕಾರ್ಖಾನೆಯವರು ಸೊಪ್ಪು ಹಾಕುತ್ತಿಲ್ಲ. ಇನ್ನು ಬತ್ತಕ್ಕೆ ಕ್ವಿಂಟಾಲ್ 2500 ಬೆಂಬಲ ಬೆಲೆ ನಿಗದಿಗೊಳಿಸುವಂತೆ ಆಗ್ರಹಿಸಿದ್ದರೂ ಸರ್ಕಾರ ಕೇಳುತ್ತಿಲ್ಲ. ಸರ್ಕಾರ ಯಾವುದೇ ಸ್ಪಷ್ಟ, ದೃಢ ನಿಲುವು ತಳೆಯದೆ ಅಭಿವೃದ್ಧಿ ಕಡೆ ಗಮನಹರಿಸದ ಕಾರಣ ಎಲ್ಲಾ ರಂಗಳಲ್ಲೂ ವೈಫಲ್ಯತೆ ಎದ್ದು ಕಾಣುತ್ತಿದೆ. ಇನ್ನಾದರೂ ಮುಖ್ಯಮಂತ್ರಿಗಳು, ಎಚ್ಚೆತ್ತು ಜನಸಾಮಾನ್ಯರ, ರೈತರ ಸಂಕಷ್ಟ ಅರಿತು ಉತ್ತಮ ಆಡಳಿತ ನಡೆಸುವಂತೆ ಆಗ್ರಹಿಸಿದರು.
ಬಿಜೆಪಿ ಸೇರ್ಪಡೆ ಅಂತಿಮ ಹಂತದಲ್ಲಿದೆ: ಬಿಜೆಪಿ ಸೇರುವ ಬಗ್ಗೆ ಎಲ್ಲಾ ಹಂತದ ಚರ್ಚೆಗಳು ಬಹುತೇಕ ಪೂರ್ಣಗೊಂಡಿದ್ದು, ಇನ್ನು ನಾಲ್ಕಾರು ದಿನಗಳಲ್ಲಿ ಅಂತಿಮ ರೂಪು ಸಿಗಬಹುದೆಂದು ಕಾಯುತ್ತಿರುವುದಾಗಿ ತಿಳಿಸಿದರು. ನನ್ನ ರಾಜಕೀಯ ಭವಿಷ್ಯದ ಉತ್ತಮವಾಗುವ ನಿಟ್ಟಿನಲ್ಲಿ ಶಕ್ತಿದೇವತೆಯಾದ ಚೌಡೇಶ್ವರಿ ದೇವಾಲಯಕ್ಕೆ ಬಂದಿರುವ ಬಗ್ಗೆ ಪ್ರಶ್ನಿಸಿದಾಗ, ತಾವು ಜ್ಯೋತಿಷಿಗಳ ಹೇಳಿಕೆ ಮೇಲೆ ತಾವು ಇಲ್ಲಿ ಬಂದಿಲ್ಲ. ಮೊದಲಿನಿಂದಲೂ ಇಲ್ಲಿಗೆ ಬಂದು ಪೂಜೆ ಸಲ್ಲಿಸಬೇಕೆಂದು ಅಂದುಕೊಂಡಿದ್ದು, ಮುಖ್ಯಮಂತ್ರಿಯಾದಾಗಲು ಬರಲು ಆಗಲಿಲ್ಲ ಈಗ ಬಂದು, ತಾವು ಆಡಿಬೆಳೆದ ಮನೆ ಹಾಗೂ ಗ್ರಾಮದೇವತೆ ಚೌಡೇಶ್ವರಿ ಅಮ್ಮ ಹಾಗೂ ಉಜ್ಜಿನಿ ಚೌಡೇಶ್ವರಿ ದರ್ಶನ ಮಾಡಿ  ಪೂಜೆ ಸಲ್ಲಿಸಿದ್ದಾಗಿ ತಿಳಿಸಿದರು. ಸೋದರಮಾವ ಬಸವರಾಜು, ಸಂಬಂಧಿಕರಾದ ಡಾ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಚಿಕ್ಕರಾಮಯ್ಯ, ಜಿಲ್ಲಾ ಪ್ರಧಾನಕಾರ್ಯದರ್ಶಿ ನಟರಾಜ್, ಪ್ರಮುಖರಾದ ಸತೀಶ, ಗಂಗಾಧರ, ನಾರಾಯಣ, ಕೆಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿ, ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಇದೇ ವೇಳೆ ನಿಡಸಾಲೆ ಹಾಗೂ ಉಜ್ಜಿನಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.