ಪ್ರೀತಿ-ವಿಶ್ವಾಸ ಇಲ್ಲದಿದ್ದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ: ಸದಾನಂದಗೌಡ
ಕ.ಪ್ರ.ವಾರ್ತೆ ಕುಣಿಗಲ್ ಡಿ.22
ಪರಸ್ಪರ ನಂಬಿಕೆ, ವಿಶ್ವಾಸ, ಪ್ರೀತಿ, ಗೌರವಾದರಗಳು ಸ್ವಸ್ಥ ಸಮಾಜದ ಸಂಕೇತವಾಗಿದ್ದು, ಇದನ್ನು ಪಾಲಿಸದ ನಾಗರಿಕರು ನೆಮ್ಮದಿ ಕಾಣಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ಕಿವಿಮಾತು ಹೇಳಿದರು.
ಭಾನುವಾರ ತಾಲೂಕಿನ ಹುತ್ರಿದುರ್ಗ ಹೋಬಳಿಯ ಸಂತೇಪೇಟೆ ಗ್ರಾಮ ಸಮೀಪದ ಬೆಟ್ಟಹಳ್ಳಿ ಉರಿಗದ್ದಿಗೇಶ್ವರ ಕ್ಷೇತ್ರದಲ್ಲಿ ಲೋಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಅತಿ ರುದ್ರ ಮಹಾಯಾಗ, ನೀಲಕಂಠ ಶಿವಾಚಾರ್ಯ ಸ್ವಾಮೀಜಿ 12ನೇ ವರ್ಷದ ಪುಣ್ಯಸ್ಮರಣೆ ಹಾಗೂ ವಿಶಿಷ್ಯ ಕಲಶ ಸ್ಥಾಪನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬದುಕವ ಪ್ರತಿಯೊಬ್ಬ ವ್ಯಕ್ತಿಯ ಭಾವನೆಗಳನ್ನು ಗೌರವಿಸುವಂತ ವಾತಾವರಣ ನಿರ್ಮಾಣಕ್ಕೆ ಸಾತ್ವಿಕ ಸಮಾಜ ನಿರ್ಮಾಣವಾದಾಗ ಸಾಧ್ಯ, ಸಾತ್ಮಿಕ ಸಮಾಜ ನಿರ್ಮಾಣಕ್ಕೆ ನಮ್ಮ ಹಿರಿಯರು, ಮಠ-ಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಾರ್ಗದರ್ಶನ ನೀಡಿದ್ದು, ಎಲ್ಲರ ಭಾವನೆಗಳು ಸ್ವಾಸ್ತ್ಯ, ಸಮಾಜ ನಿರ್ಮಾಣದೆಡೆಗೆ ಸಾಗುವಂತಾಗುವ ನಿಟ್ಟಿನಲ್ಲಿ ಅತಿರುದ್ರ ಮಹಾಯಾಗದಂತ ಧಾರ್ಮಿಕ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜ್ಞಾನದಾನ, ಅನ್ನದಾನ ಎಲ್ಲವೂ ಸರ್ಕಾರವೇ ಮಾಡಲಾಗುವುದಿಲ್ಲ ಗ್ರಾಮಾಂತರ ಪ್ರದೇಶದಲ್ಲಿ ಹಲವು ದಶಕಗಳಿಂದಲೂ ಸ್ಥಳೀಯರ, ಸದ್ಭಕ್ತರ ಸಹಕಾರ, ನೆರವನಿಂದ ಲಕ್ಷೋಪಲಕ್ಷ ಗ್ರಾಮಾಂತರ ಪ್ರದೇಶದ ಬಡಜನತೆಗೆ ಜ್ಞಾನದಾನದ ಜೊತೆಯಲ್ಲಿ ಅನ್ನದಾನವನ್ನು ಮಾಡುತ್ತಿರುವ ಶ್ರೀಕ್ಷೇತ್ರದ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದರು.
ನರೇಂದ್ರಬಾಬು ಶರ್ಮ ಅತಿರುದ್ರ ಮಹಾಯಾಗದ ಫಲ ಕುರಿತು ಉಪನ್ಯಾಸ ನೀಡಿದರು. ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದು, ಶಾಸಕರಾದ ಡಿ,ನಾಗರಾಜಯ್ಯ, ಎಚ್.ಸಿ.ಬಾಲಕೃಷ್ಣ, ಅಶ್ವಥನಾರಾಯಣ, ಬೆಂಗಳೂರು ಕೃಷಿ ವಿವಿ ಉಪ ಕುಲಪತಿ ಡಾ.ನಾರಾಯಣಗೌಡ, ಡಾ.ಆಂಜನಪ್ಪ, ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಮೋ ಅಲೆಯಿಂದ ಬಿಜೆಪಿಗೆ ಈ ಬಾರಿ ಅತಿ ಹೆಚ್ಚಿನ ಸ್ಥಾನ
ಕುಣಿಗಲ್: ಮುಂಬುರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ನಮೋ ಅಲೆ ರಾಜ್ಯದಲ್ಲಿ ಭರ್ಜರಿಯಾಗಿರುವ ಕಾರಣ ರಾಜ್ಯದ 25ಕ್ಕೂ ಹೆಚ್ಚಿನ ಲೋಕಸಭಾ ಸ್ಥಾನಗಳಲ್ಲಿ ಜಯಗಳಿಸಲಿದ್ದೇವೆ ಎಂದು ಮಾಜಿ ಸಿಎಂ ಸದಾನಂದಗೌಡ ಆಶಾಭಾವನೆ ವ್ಯಕ್ತಪಡಿಸಿದರು.
ಬೆಟ್ಟಹಳ್ಳಿ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತಿದ್ದು, ಸರ್ಕಾರ ಕೈಗೊಂಡ ಹಲವು ಅವೈಜ್ಞಾನಿಕ ಕ್ರಮ ಜನತೆಯ ಅಸಮಾಧಾನಕ್ಕೆ ಕಾರಣವಾವಗಿದ್ದು, ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರತಿಪಾದಿಸಿದರು.
ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ರಾಜ್ಯದ ಲೋಕಸಭೆ ಚುನಾವಣೆಗಳ ಮೇಲೂ ಬೀರಲಿದ್ದು, ಹಲವು ಗೊಂದಲಕಾರಿ ನಿರ್ಣಯಗಳನ್ನು ಕೈಗೊಂಡ ಗೊಂದಲಗಳನ್ನು ಬಗೆಹರಿಸುವುದರಲ್ಲಿ ಮುಳುಗಿರುವ ಸಿದ್ದರಾಮಯ್ಯ ಸರ್ಕಾರ ಇನ್ನು ರನ್ವೆಯಲ್ಲಿದ್ದು ಹತ್ತು ತಿಂಗಳಾದರೂ ಟೇಕ್ ಆಫ್ ಅಗಿಲ್ಲ.
ನಮೋ ಅಲೆ ರಾಜ್ಯದಲ್ಲಿ ಭರ್ಜರಿಯಾಗಿರುವ ಕಾರಣ 25ಕ್ಕೂ ಹೆಚ್ಚಿನ ಲೋಕಸಭ ಸ್ಥಾನಗಳಲ್ಲಿ ಜಯಗಳಿಸಲಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

