ತುಮಕೂರು

ಆರೋಗ್ಯಕ್ಕೆ ಉತ್ತಮ ಆಹಾರ, ಯೋಗ ಅಗತ್ಯ

Published On :

ಕನ್ನಡಪ್ರಭ ವಾರ್ತೆ  ತುಮಕೂರು  ಡಿ.25
ಉತ್ತಮ ಆರೋಗ್ಯಕ್ಕೆ ನಿಯಮಿತ ಯೋಗಾಭ್ಯಾಸ, ಉತ್ತಮ ಆಹಾರವೇ ಮದ್ದು ಎಂದು ರಾಜ್ಯ ಲೋಕಾಯುಕ್ತ ನ್ಯಾಯಾಧೀಶ ಡಾ. ವೈ. ಭಾಸ್ಕರರಾವ್ ಪ್ರತಿಪಾದಿಸಿದರು. ಅವರು ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಆಯುಷ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ಸಂಪತ್ತಿಗೆ ಇನ್ನೊಂದು ಹೆಸರೇ ಭಾರತ. ವಿಶ್ವದಲ್ಲಿಲ್ಲದ ವೈವಿಧ್ಯಮಯ ಸಸ್ಯ ಸಂಪತ್ತು ನಮ್ಮ ದೇಶದಲ್ಲಿದೆ.
ವಿಶ್ವದ ಸಸ್ಯೋದ್ಯಾನ ಭಾರತ. ಸಾವಿರಾರು ವರ್ಷಗಳಿಂದ ವಿವಿಧ ರೋಗಗಳಿಗೆ ಆಯುರ್ವೇದ, ಗಿಡಮೂಲಿಕೆ ಔಷಧಿ ನೀಡಿ ಉಪಚರಿಸಲಾಗುತ್ತಿದೆ. ಉತ್ತಮ ಆಹಾರ ಅಭ್ಯಾಸ, ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಯೋಗಕ್ಕೆ ಹೆಚ್ಚಿನ ಒತ್ತು ನೀಡುವ, ಪ್ರಚಾರ ನೀಡುವ ಅಗತ್ಯವಿದೆ ಎಂದರು.
ಇಂದು ಸಾಮಾನ್ಯ ಜನತೆಗೆ ಆರೋಗ್ಯ ಕೈಗೆಟುಕದಂತಾಗಿದೆ. ಹಳ್ಳಿ ಜನ ಜೀವ ಉಳಿಸುವ ದೇವರೆಂದು ನಂಬಿ ವೈದ್ಯರ ಬಳಿ ಜನ ಬರುತ್ತಾರೆ. ಜಾನುವಾರು ಮಾರಿ ಚಿಕಿತ್ಸೆಗೆ ಹಣ ಹೊಂದಿಸಿಕೊಳ್ಳುವ ಮುಗ್ಧ ಗ್ರಾಮೀಣರಿಂದಲೇ ಸುಲಿಗೆ ಮಾಡಲಾಗುತ್ತದೆ. ವೈದ್ಯರೇ ಹಣ ಮಾಡುವುದೇ ವೃತ್ತಿಯಲ್ಲ ಎಂಬುದನ್ನು ನೆನಪಿಡಿ. ವೈದ್ಯ ವೃತ್ತಿ ಇರುವುದು ಜೀವ ಉಳಿಸಲಿಕ್ಕಾಗಿ ಎಂಬುದನ್ನು ನೆನಪಿಡಿ. ಉತ್ತಮ ಸೇವಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವೈದ್ಯ ವೃತ್ತಿಯ ಘನತೆ ಎತ್ತಿ ಹಿಡಿಯಿರಿ ಎಂದು ಕಿವಿಮಾತು ಹೇಳಿದರು.
ಪ್ರೋತ್ಸಾಹ ಧನ: ಛತ್ತೀಸ್‌ಘಡದಲ್ಲಿ ಬುಡಕಟ್ಟು ಜನರಿಗೆ ಶಸ್ತ್ರಚಿಕಿತ್ಸೆಗೆ ಸರ್ಕಾರ ಪ್ರೋತ್ಸಾಹಧನ ಘೋಷಿಸಿದೆ. ಕಾಲುನೋವು ಅಂತಾ ಬರುವ ಮಹಿಳೆಯರ ಗರ್ಭಕೋಶವನ್ನೇ ಹಣಕ್ಕಾಗಿ ತೆಗೆದು ಹಾಕುವಂತ ಕೀಚಕ ಪ್ರವೃತ್ತಿಯ ವೈದ್ಯರು ನಮ್ಮಲ್ಲಿದ್ದಾರೆ. ಇಂತಹ ಮನೋವೃತ್ತಿಯನ್ನು ಬಿಟ್ಟು ಜನರ ಸೇವೆ ಮಾಡಬೇಕಿದೆ ಎಂದರು.
ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಆರೋಗ್ಯ ಸೇವೆ ದೊರಕಬೇಕು. ಮಧುಮೇಹ ಪರೀಕ್ಷೆಯನ್ನು ತಾಲೂಕು, ಗ್ರಾಪಂ, ಪಿಎಚ್‌ಸಿ ಮಟ್ಟದಲ್ಲಿ ನಡೆಸುವ ಮೂಲಕ ಆನ್‌ಲೈನ್‌ನಲ್ಲೇ ಅವರಿಗೆ ಇನ್ಸುಲಿನ್, ಯೋಗಾಭ್ಯಾಸ, ಆಹಾರಪಥ್ಯ ಇರಬೇಕೆಂಬ ಮಾಹಿತಿ ನೀಡಿ ಜನತೆಯನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಬೇಕು ಎಂದು ಕಿವಿ ಮಾತು ಹೇಳಿದರು.
.30 ಭ್ರಷ್ಟ ದೇಶಗಳಲ್ಲಿ ಒಂದು : ಆರೋಗ್ಯ ಸೇವಾ ವಲಯದಲ್ಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಆರೋಗ್ಯ ವಲಯದಲ್ಲಿರುವ 30 ಪರಮ ಭ್ರಷ್ಟ ದೇಶಗಳಲ್ಲಿ ನಮ್ಮ ದೇಶವು ಒಂದಾಗಿರುವುದು ವಿಷಾದನೀಯ ಸಂಗತಿ ಎಂದರು.
ಆರೋಗ್ಯ, ಶಿಕ್ಷಣ, ಪೊಲೀಸ್, ಲೋಕೋಪಯೋಗಿ, ಕಂದಾಯ ಸೇರಿದಂತೆ 10 ವಲಯಗಳಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ. ನಂ.1 ಸ್ಥಾನದಲ್ಲಿದ್ದರೆ ಪೊಲೀಸ್ ಇಲಾಖೆಯಿದ್ದರೆ, ನಂತರದ ಸ್ಥಾನದಲ್ಲಿ ಆರೋಗ್ಯ ಇಲಾಖೆ ಇದೆ. ಆರೋಗ್ಯ ಸೇವೆ ಸಲ್ಲಿಸುತ್ತಿರುವ  ವೈದ್ಯರಿಗಿಂತ ನರ್ಸ್‌ಗಳೇ ಹೆಚ್ಚು ಭ್ರಷ್ಟರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಹಣ ನೀಡುವಂತೆ ಪೀಡಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಢಕೆಟ್ಟ ಚಟಗಳಿಂದ ದೂರವಿರಿ: ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮಾತನಾಡಿ, ಸರ್ಕಾರಿ ನೌಕರರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತಿಮುಖ್ಯ. ಬೆಳಗ್ಗೆ 10 ರಿಂದ ಸಂಜೆ 5 ರೊಳಗೆ ದಣಿದು ಹೋಗಿರುತ್ತಾರೆ. ಕೆಟ್ಟ ಚಟ, ಹವ್ಯಾಸಗಳಿಂದ ದೂರ ಇರುವ ಮೂಲಕ ಆರೋಗ್ಯವಂತರಾಗುವಂತೆ  ಸಲಹೆಯಿತ್ತರು.  ಜಿಪಂ ಸಿಇಒ ಗೋವಿಂದರಾಜು, ಜಿಲ್ಲಾ ಆಯುಷ್ ಅಧಿಕಾರಿ ಡಾ.ಹೊನ್ನತ್ತಿ ಡಿ.ರಾಮರಾವ್, ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ರಮೇಶ್‌ಚಂದ್ರ ಉಪಸ್ಥಿತರಿದ್ದರು.
ಸೇವಾ ಮನೋಭಾವ ಅಗತ್ಯ
ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಣಕ್ಕೆ ವೈದ್ಯರು ಮುಂದಾಗಬೇಕು. ಇಲ್ಲಿಂದಲೇ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಸಂಕಲ್ಪ ತೊಡಬೇಕಿದೆ. ವೈದ್ಯರು, ದೇವರೆಂಬ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಭಾಸ್ಕರ್‌ರಾವ್ ಕಿವಿಮಾತು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.