ರಾಜ್ಯೋತ್ಸವ ಆಚರಿಸಿದರೆ ಸಾಲದು, ನಾಡಿನ ಜಲಸಂಪತ್ತು ರಕ್ಷಣೆಗೂ ಮುಂದಾಗಿ: ಶಾಸಕ
ಕನ್ನಡಪ್ರಭ ವಾರ್ತೆ ಹಾಸನ ಡಿ.26
ರಾಜ್ಯೋತ್ಸವ ಆಚರಿಸಿದ ತಕ್ಷಣ ನಿಮ್ಮ ಕಾರ್ಯ ಮುಗಿಯಲಿಲ್ಲ. ನಾಡಿನ ಜಲಸಂಪತ್ತು ಅನ್ಯ ರಾಜ್ಯಗಳ ಪಾಲಾಗುತ್ತಿದ್ದು ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರವೇ ತಾಲೂಕು ನೀರಾವರಿ ಹೋರಾಟ ಸಮಿತಿ ರಚಿಸಲಿದ್ದು ಯುವಕರು ಮುಂದಾಗಿ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಶ್ಯಾನುಭೋಗರ ಬೀದಿಯ ಕುವೆಂಪು ವೃತ್ತದಲ್ಲಿ ಕನ್ನಡ ಗೆಳೆಯರ ಬಳಗ ಏರ್ಪಡಿಸಿದ್ದ ಬರ ಪರಿಹಾರಕ್ಕಾಗಿ ಗ್ರಾಮದೇವತೆಗಳು ಹಾಗೂ 17ಕ್ಕೂ ಹೆಚ್ಚು ದೇವರುಗಳು ಅದ್ಧೂರಿ ಮೆರವಣಿಗೆ ಹಾಗೂ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ನಾಡು-ನುಡಿ ರಕ್ಷಣೆಗಾಗಿ ಕಂಕಣಬದ್ಧರಾಗಿ ಕಳೆದ 25 ವರ್ಷಗಳಿಂದ ಅದ್ಧೂರಿಯಾಗಿ ವಿಶಿಷ್ಟ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವ ಕನ್ನಡ ಗೆಳೆಯರ ಬಳಗದ ಸಾಧನೆ ಮೆಚ್ಚುವಂತಹದ್ದು ಎಂದು ಅಭಿನಂದಿಸಿದರು. ಎಲ್ಲ ಗ್ರಾಮದೇವತೆಗಳ ಮೆರವಣಿಗೆಯ ಮೂಲಕ ತಾಲೂಕಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿ ನೂತನ ದಾಖಲೆಯನ್ನು ಸ್ಥಾಪಿಸಿದ್ದಾರೆ ಎಂದರು.
ಕೃಷ್ಣ ಅಣೆಕಟ್ಟಿನ ಮೂಲಕ 736 ಟಿಎಂಸಿ ನೀರನ್ನು ರಾಜ್ಯ ಬಳಕೆಮಾಡಿಕೊಳ್ಳಬಹುದೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ರಾಜ್ಯ ಸರ್ಕಾರ ಇನ್ನು 300 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನು ಸಮರ್ಥವಾಗಿ ಬಳಸಿಕೊಂಡ ಆಂಧ್ರ ಸರ್ಕಾರ ಅಣೆಕಟ್ಟನ್ನು ನಿರ್ಮಿಸಿ ನೀರನ್ನು ಬಳಸಿಕೊಳ್ಳುತ್ತಿದೆ.
ಅದೇ ರೀತಿ ಮಹದಾಯಿ ಯೋಜನೆಯ ಮೂಲಕ ಆಲಮಟ್ಟಿ ಜಲಾಶಯದ ನೀರನ್ನು ಗೋವಾ ರಾಜ್ಯಕ್ಕೆ ಮೀನು ಸಾಗಾಣಿಕೆಗಾಗಿ ನೀರು ಹರಿಸಲಾಗುತ್ತಿದೆ. ಆದರೆ ಆಲಮಟ್ಟಿ ಜಲಾಶಯದ ಸುತ್ತಮುತ್ತ ಇರುವ ಉತ್ತರ ಕರ್ನಾಟಕದ ಜನ ಕುಡಿಯಲು ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅಲ್ಲಿನ ಜನರ ಸಮಸ್ಯೆಯನ್ನು ನಿರ್ಮಾಣ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ವಿಷಾದಿಸಿದರು.ರಾಜ್ಯದ ಕೆಲ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಈ ಸಮಸ್ಯೆ ನಿವಾರಣೆಗೆ ಪಕ್ಷಭೇದ ಮರೆತು ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಅರಸೀಕೆರೆ ಕ್ಷೇತ್ರ ಸತತ ಬರಗಾಲ ಎದುರಿಸುತ್ತಿದ್ದು ಕಲ್ಪತರು ನಾಡು ಎಂದು ಹೆಸರಾಗಿದ್ದ ಇಲ್ಲಿ ತೆಂಗಿನ ಬೆಳೆ ಇಲ್ಲಿ ಸಂಪೂರ್ಣ ನಾಶವಾಗಿ ರೈತರ ಆರ್ಥಿಕ ಪರಿಸ್ಥಿತಿ ದುಸ್ಥಿತಿ ತಲುಪಿದ್ದು ಮಳೆಯ ಅಭಾವದಿಂದ ರೈತರು ಬೆಳೆದ ಬೆಳಗಳು ಮೇಲೇಳದೆ ಸಂಕಷ್ಟಕ್ಕೆ ಸಿಲುಕಿಸಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ಇಲ್ಲಿನ ಜನರು ನೀರಿಗಾಗಿ ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

