ರಾಜಕಾರಣಿಗಳೆಲ್ಲಾ ಅಯೋಗ್ಯರು, ಮೇಯೋರೆಲ್ಲಾ ಅಧಿಕಾರಿಗಳು: ಜಿಎಸ್ಬಿ
ತುರುವೇಕೆರೆ: ನನ್ನನ್ನೂ ಸೇರಿದಂತೆ ರಾಜಕಾರಣಿಗಳು ಅಯೋಗ್ಯರು. ರೈತರ ಕಷ್ಟವನ್ನು ವಿಧಾನಸಭೆ, ಲೋಕಸಭೆಯಲ್ಲಿ ಚರ್ಚಿಸೋಣ ಅಂದರೆ ಅವರು ಪ್ರತಿನಿಧಿಸುವ ಬೆಳೆಗಳ ಸಂಬಂಧ ಮಾತ್ರ ಮಾತನಾಡುತ್ತಾರೆ ವಿನಃ ಎಲ್ಲರೂ ನಮ್ಮವರೇ ಎಂದು ಯಾರೂ ಭಾವಿಸಿಲ್ಲ. ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ಸಿಗುವ ಲಾಭವನ್ನು ಉಣ್ಣುವವರು ಅಧಿಕಾರಿಗಳೇ. ಅವರು ತಿಂದು ನಮ್ಮಂತಹ ರಾಜಕಾರಣಿಗಳ ಮೂತಿಗೆ ಸವರಿ ಬಿಡುತ್ತಾರೆ. ಇದರಿಂದಾಗಿ ಜನರ ದೃಷ್ಟಿಯಲ್ಲಿ ರಾಜಕಾರಣಿಗಳು ಭ್ರಷ್ಟರು ಎಂಬ ಹಣೆ ಪಟ್ಟಿ ಬರುತ್ತದೆ...
ಹೀಗೆ ಖಡಕ್ ಆಗಿ ಹೇಳಿದವರು ಜಿಲ್ಲಾ ಸಂಸದ ಜಿ.ಎಸ್.ಬಸವರಾಜು. ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ವಿವಿಧ ಅಭಿವೃಧ್ಧಿ ಕಾಮಗಾರಿಗಳ ಚಾಲನೆ ಮತ್ತು ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರೈತರಿಗೆ ಬಹು ಮುಖ್ಯವಾಗಿ ಬೇಕಿರುವುದು ನೀರು ಮತ್ತು ವಿದ್ಯುತ್. ಜನಪ್ರತಿನಿಧಿಗಳು ಎಲ್ಲಿಯವರೆಗೂ ರೈತರೆಲ್ಲರೂ ನಮ್ಮವರೇ ಎಂಬ ಭಾವನೆ ತಾಳಿ ದನಿ ಎತ್ತುವುದಿಲ್ಲವೋ ಅಲ್ಲಿಯವರೆಗೂ ರೈತರ ಜೀವನ ಹಸನಾಗದು ಎಂದರು. ತೆಂಗು, ಅಡಿಕೆ, ಕೊಬರಿ, ಕಬ್ಬು, ಈರುಳ್ಳಿ, ದಾಳಿಂಬೆ, ಹತ್ತಿ ...ಹೀಗೆ ಎಲ್ಲಾ ಬೆಳೆಗಳ ಬಗ್ಗೆ ಪಕ್ಷ ಭೇದ ಮರೆತು ಹೋರಾಡಬೇಕು. ಅದು ಬಿಟ್ಟು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳೆಯುವ ಬೆಳೆಗಳ ಸಂಬಂಧ ಮಾತ್ರ ಮಾತನಾಡಿದರೆ ಬೆಂಬಲ ಸಿಗದು. ರೈತರ ಬೆಂಬಲಕ್ಕೆ ಜನಪ್ರತಿನಿಧಿಗಳು ಬಾರದಿದ್ದಲ್ಲಿ ಮುಂದಿನ ದಿನಗಳು ಭಯಾನಕವಾಗಲಿದೆ ಎಂದು ಬಸವರಾಜು ಅಭಿಪ್ರಾಯ ಪಟ್ಟರು.
ಉತ್ತಮ ಕೆಲಸ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಕೊಂಡಜ್ಜಿ ವಿಶ್ವನಾಥ್ ಅವರ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ಸ್ಥಳೀಯ ಎಪಿಎಂಸಿ ರೈತರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಕೆಲಸ ಮಾಡಿದೆ. ತಾಲೂಕಿನ ಆರ್ಥಿಕ ಬೆಳೆಯಾಗಿರುವ ತೆಂಗಿನ ಕಾಯಿಯ ಮಾರುಕಟ್ಟೆಯನ್ನು ಪ್ರಾರಂಭಿಸಿ ರೈತರ ನೆರವಿಗೆ ಧಾವಿಸಿದೆ. ಇತರೆಡೆ ನಡೆಯುತ್ತಿದ್ದ ರೈತರ ಶೋಷಣೆಯನ್ನು ತಡೆದಂತಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಮಾತನಾಡಿ ರೈತರಿಗೆ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರೈತರು ಬೆಳೆಯುವುದರಿಂದ ವಿಮುಖವಾಗಿದ್ದಾರೆ. ಇದೇ ಪ್ರವೃತ್ತಿ ಮುಂದುವರೆದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎಂದರು.
ಅಚ್ಚರಿ ಮೂಡಿಸಿದ ಮಾತು: ಮಾಜಿ ಶಾಸಕ ಹಾಗೂ ಕೆಪಿಸಿಸಿ ಸದಸ್ಯ ಎಸ್.ರುದ್ರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಜನರು ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡಿದ್ದರು. ಆದರೆ ಏಕಾಏಕಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ ಎಂದು ವಿಷಾದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

