ತುಮಕೂರು

ರೈತರ ಕಾಮಧೇನುವಾಗಲಿರುವ ತೆಂಗು ಉತ್ಪಾದಕರ ಒಕ್ಕೂಟ ಅಸ್ತಿತ್ವಕ್ಕೆ

Published On :

ತುರುವೇಕೆರೆ: ರಾಜ್ಯದಲ್ಲೇ ಪ್ರಪ್ರಥಮವಾಗಿ ತಾಲೂಕಿನಲ್ಲಿ ತಲೆ ಎತ್ತಲಿರುವ ತೆಂಗು ಉತ್ಪಾದಕರ ಕಂಪನಿಯ ಪ್ರಥಮ ಹಂತವಾಗಿ ತೆಂಗು ಉತ್ಪಾದಕರ ಒಕ್ಕೂಟವನ್ನು  ತೋಟಗಾರಿಕಾ ಇಲಾಖಾ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರೇಲಿಗೇಗೌಡ ರವರು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
 ತಾಲೂಕಿನ ಮಾಚೇನಹಳ್ಳಿಯ ಬಾಪೂಜಿ ಕೇಂದ್ರ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಂಗು ಉತ್ಪಾದಕರ ಒಕ್ಕೂಟ ಉದ್ಘಾಟನೆ ಮಾಡಿ ಮಾತನಾಡಿದ ಶಂಕರಲಿಂಗೇಗೌಡರು ದೇಶದ ವಿವಿಧ ರಾಜ್ಯಗಳಲ್ಲಿ ತೆಂಗು ಉತ್ಪಾದಕರ ಸಂಘಗಳು ಅಸ್ಥಿತ್ವಕ್ಕೆ ಬಂದು ಸರ್ಕಾರದಿಂದ ದೊರೆಯುವ ಸಕಲ ಸೌಲಭ್ಯಗಳನ್ನೂ ಪಡೆಯುತ್ತಿವೆ. ಆದರೆ ರಾಜ್ಯದಲ್ಲಿ ತೆಂಗು ಬೆಳೆಗಾರರೇ ಕಂಪನಿ ನಡೆಸುವ ಸ್ಥಿತಿ ಇಲ್ಲವಾಗಿತ್ತು. ತಮ್ಮ ಅಧಿಕಾರದ ಕೊನೆ ಅವಧಿಯಲ್ಲಾದರೂ ತಮ್ಮ ತಾಲೂಕಿನಲ್ಲೇ ತೆಂಗು ಉತ್ಪಾದಕರ ಕಂಪನಿ ಪ್ರಾರಂಭ ಮಾಡಲು ಮುಂದಾಗಿರುವುದು ತಮಗೆ ಸಂತಸ ತಂದಿದೆ ಎಂದರು.
 ಒಕ್ಕೂಟದ ನಾಮಫಲಕ ಅನಾವರಣ ಮಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ರೈತರಿಗೆ ನಿಜವಾದ ವಿರೋಧಿಗಳು ಮಧ್ಯವರ್ತಿಗಳು. ಮಧ್ಯವರ್ತಿಗಳು ರೈತರ ಬೆಳೆಗಳನ್ನು ಮನಸ್ಸಿಗೆ ಬಂದಂತೆ ನಿರ್ಧರಿಸುತ್ತಾರೆ. ಕೇವಲ ಮೂರೇ ದಿನದಲ್ಲಿ ಕೊಬರಿಯ ಬೆಲೆ ಸಾವಿರಾರು ರು.ಗಳ ವ್ಯತ್ಯಾಸ ಮಾಡುತ್ತಾರೆ. ವರ್ಷವಿಡೀ ಕಷ್ಟಪಟ್ಟ ರೈತರ ಬದುಕನ್ನು ಮಧ್ಯವರ್ತಿಗಳು ಮೂರಾಬಟ್ಟೆ ಮಾಡುತ್ತಾರೆ. ಇವರ ನಿಯಂತ್ರಣದಿಂದ ಪಾರಾಗಲು ತೆಂಗು ಉತ್ಪಾದಕರ ಕಂಪನಿಯನ್ನು ಪ್ರಾರಂಭಿಸಲು ಮುಂದಾಗಿರುವುದು ಸಾರ್ಥಕತೆಯನ್ನು ತರಲಿದೆ ಎಂದರು.
ಮಾದಿಹಳ್ಳಿಯಲ್ಲಿ ತೆಂಗು ಅಭಿವೃಧ್ಧಿ ಪಾರ್ಕ್: ತಾಲ್ಲೂಕಿನ ಮಾದಿಹಳ್ಳಿಯಲ್ಲಿ ಸುಮಾರು 10 ಎಕರೆ ಜಮೀನಿನಲ್ಲಿ ತೆಂಗು ಬೆಳೆಗಳ ಉತ್ಪಾದನೆಗಳ ಅಭಿವೃಧ್ಧಿ ಪಡಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತೋಟಗಾರಿಕಾ ಇಲಾಖಾ ಜಂಟಿ ನಿರ್ದೇಶಕ ಡಾ.ದುಂಡಿ ಹೇಳಿದರು.
 ತೆಂಗು ಅಭಿವೃಧ್ಧಿ ಮಂಡಲಿಯ ಉಪನಿರ್ದೇಶಕ ವಿಜಯಕುಮಾರ್ ಹಳ್ಳಿಕೇರಿ ಮಾತನಾಡಿ ರಾಜ್ಯದಲ್ಲಿ 300 ತೆಂಗು ಬೆಳೆಗಾರರ ಸಂಘಗಳು ನೋಂದಣಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲ್ಪತರು ತೆಂಗು ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ಸಿದ್ದಬಸಪ್ಪ ಮಾತನಾಡಿ ತೆಂಗಿನ ಉತ್ಪನ್ನವಾಗಿರುವ ಹೆಡೆ ಮಟ್ಟೆ, ತೆಂಗಿನ ಗರಿ, ಕಾಯಿ, ಎಳನೀರು, ಕೊಬರಿ ಮತ್ತಿತರೆ ವಸ್ತುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರು ಮಾಡುವ ಘಟಕಗಳನ್ನು ಪ್ರತಿ ತೆಂಗು ಉತ್ಪಾದಕರ ಸಂಘಗಳಲ್ಲಿ ಸ್ಥಾಪಿಸಿ ಪ್ರತಿ ರೈತರನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡುವ ಪ್ರಯತ್ನಕ್ಕೆ ತಾಲ್ಲೂಕಿನ ರೈತಾಪಿಗಳು ಸಹಕಾರ ನೀಡಬೇಕು ಎಂದರು.
 ಸಮಾರಂಭದಲ್ಲಿ ತೋಟಗಾರಿಕಾ ಇಲಾಖಾ ಉಪನಿರ್ದೇಶಕಿ ಸವಿತಾ, ತಹಸೀಲ್ದಾರ್ ನಂಜಪ್ಪ, ಕಂಪನಿಯ ಉಪಾಧ್ಯಕ್ಷ ಡಾ.ಎಸ್.ವಿ.ಗೋವಿಂದಪ್ಪ, ಪ್ರಗತಿ ಪರ ರೈತ ಡಾ.ಬಿ.ನಂಜಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಆನಂದ್ ಕುಮಾರ್, ತೋಟಗಾರಿಕಾ ಸಹಾಯಕ ನಿರ್ದೇಶಕ ಜಿ.ಡಿ.ಗಂಗಾಧರ್, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಜಿ.ವಿ.ಲಿಂಗರಾಜಪ್ಪ ಭಾಗವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.