ತುಮಕೂರು

ಶೋಷಿತ ಜನಾಂಗ ಮುಖ್ಯ ವಾಹಿನಿ ಸೇರಲಿ: ಸಚಿವ ಜಾರಕಿಹೊಳಿ ಕರೆ

Published On :

ಕನ್ನಡಪ್ರಭ ವಾರ್ತೆ ಮಧುಗಿರಿ ಡಿ.29
ಶೋಷಿತ ಜನಾಂಗ  ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಆದರ್ಶ ಚಿಂತನೆಗಳನ್ನು  ಅಳವಡಿಸಿಕೊಂಡು ಗುಣ ಮಟ್ಟದ ಶಿಕ್ಷಣ ಕಲಿತು ಬದಲಾವಣೆಗೆ ಪ್ರಯತ್ನಿಸುವ ಮೂಲಕ ಸಮಾಜದ ಮುಖ್ಯ ವಾಹಿನಿ ಸೇರಬೇಕು ಎಂದು  ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ  ಶಿಕ್ಷಕ ಸಮುದಾಯಕ್ಕೆ ಅಬಕಾರಿ ಸಚಿವ ಸತೀಶ್ ಜಾರಕಿ ಹೊಳಿ ಕರೆ ನೀಡಿದರು. ಭಾನುವಾರ ಮಧುಗಿರಿ ಮಾಲೀ ಮರಿಯಪ್ಪ ರಂಗಮಂದಿರದಲ್ಲಿ ಶೈಕ್ಷಣಿಕ ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ, ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಬೃಹತ್ ಶೈಕ್ಷಣಿಕ ಸಮಾವೇಶ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಹಾಕಿ ಕೊಟ್ಟ  ಶಿಕ್ಷಣ, ಹೋರಾಟ, ಸಂಘಟನೆ  ಮರೆತಿರುವುದೇ ಸಮುದಾಯ ಹಿಂದುಳಿಯಲು ಕಾರಣ ಎಂದರು.
 ಸರ್ಕಾರ ಕೊಡುವ ಸೌಲಭ್ಯ ನಂಬಿ ಕೂರದೇ ಜೀವನದ  ಎಲ್ಲ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಶಕ್ತಿ ಸಾಧನ ಶಿಕ್ಷಣ, ಅದನ್ನು ಪಡೆದು ಜನಾಂಗದ ಜಾಗೃತಿಗಾಗಿ  ಸಮಾಜದಲ್ಲಿ ದುಡಿದು ಗೌರವಾನ್ವಿತ ಬದುಕು ಕಟ್ಟಿಕೊಳ್ಳುವ ಮತ್ತು ಸರ್ಕಾರದ ಸಂವಿಧಾನ ಬದ್ಧ ಎಲ್ಲ ಸೌಲಭ್ಯ ಪಡೆಯಲು ನ್ಯಾಯ ಸಮ್ಮತ ಬೇಡಿಕೆ ಈಡೇರಿಸಿ ಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಟ ಕೈಗೊಳ್ಳಬೇಕು. ರಾಜ್ಯದಲ್ಲಿ 85 ಸಾವಿರ ಪ.ಜಾತಿ.ಪಂಗಡದ ಶಿಕ್ಷಕರಿದ್ದು ಪ್ರತಿ ತಿಂಗಳು 100 ರು. ಸಂಗ್ರಹಿಸಿದರೆ ನಿಮ್ಮದೇ ಆದ ಭವನ
ನಿರ್ಮಾಣವಾಗಲಿದೆ. ಮುಂದಿನ ಪ್ರಜೆಗಳನ್ನು ತಯಾರು ಮಾಡುವ ಶಿಕ್ಷಕರಿಗೆ ಕರ್ತವ್ಯ ಪ್ರಜ್ಞೆ ಇರಬೇಕು. ಸರ್ಕಾರದ ಸೌಲಭ್ಯ ಪಡೆಯಲು ಹಂತ, ಹಂತವಾಗಿ  ಹೋರಾಟ ಮಾಡೋಣ. ಮೆರವಣಿಗೆ ಬಿಟ್ಟು ಸಮುದಾಯದ ಒಳಿತಿಗೆ ಕಾರ್ಯಕ್ರಮ ರೂಪಿಸಿ ಎಂದು ಮಾರ್ಮಿಕವಾಗಿ ನುಡಿದರು.
ಸಾಲ ಮನ್ನಾ: ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎನ್.ರಾಜಣ್ಣ  ಮಾತನಾಡಿ, ಸಿದ್ದರಾಮಯ್ಯ ರಾಜ್ಯದ ಸಿಎಂ ಆದ ಕೆಲವೇ ಗಂಟೆಗಳಲ್ಲಿ ಪ.ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ನಿಗಮಗಳಲ್ಲಿ ಪಡೆದ ಸಾಲ ಮನ್ನಾ ಮಾಡಿದರು. ಆದರೆ  ನೀವು ಹಣದ ಬೇಡಿಕೆ ಇಟ್ಟಿಲ್ಲ, ನಿಮ್ಮ ಬೇಡಿಕೆ ಈಡೇರಿಕೆಗೆ ಸಿಎಂಗೆ ಹತ್ತಿರವಿರುವ ಜಾರಕಿ ಹೋಳಿ ಅವರನ್ನು ಕರೆದುಕೊಂಡು ಹೋಗಿ. ನಿಮ್ಮ ಬೇಡಿಕೆಗಳು ಈಡೇರಲಿವೆ ಎಂದು ರಾಜಣ್ಣ ಹೇಳಿದರು.   
ದಾರಿದೀಪ: ಕೊರಟೆಗೆರ ಶಾಸಕ ಪಿ.ಆರ್. ಸುಧಾಕರ ಲಾಲ್ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಎಲ್ಲ ಕಾಲಕ್ಕೂ ದಾರಿದೀಪ ಎಂದರು. ಜಿ.ಪಂ.ಸದಸ್ಯರಾದ ಎಚ್.ಕೆಂಚಮಾರಯ್ಯ, ವೈ.ಎಚ್.ಹುಚ್ಚಯ್ಯ, ರಾಜ್ಯಾಧ್ಯಕ್ಷ ಟಿ.ವಿ. ವೆಂಕಟೇಶಯ್ಯ ಮಾತನಾಡಿದರು. ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ತಾ.ಪಂ.ಅಧ್ಯಕ್ಷೆ ಸಿದ್ದಗಂಗಾಂಬಿಕೆ, ಉಪಾಧ್ಯಕ್ಷೆ ಜುಬೇದಬಾನು, ಡಿಡಿಪಿಐ ಟಿ.ಎಸ್. ಆಂಜನಪ್ಪ, ನಾಯಕ ಸಂಘದ ಅಧ್ಯಕ್ಷ ಬಿ.ಎನ್. ನಾಗರಾಜು, ನೌಕರರ ಸಂಘದ ಅಧ್ಯಕ್ಷ
ಎನ್.ಮಹಾಲಿಂಗೇಶ್, ಜಿಲ್ಲಾಧ್ಯಕ್ಷ ಸಿ.ರಾಮಣ್ಣ, ಬಿಇಓ ವೈ.ಎನ್.ರಾಮಕೃಷ್ಣಯ್ಯ, ಬಿಆರ್ಪಿ ಚಿತ್ತಯ್ಯ, ಪುರಸಭೆ ಸದಸ್ಯ ಎಂ.ಎಸ್. ಚಂದ್ರಶೇಖರ್, ಪಿಸಿಕೆರೆಡ್ಡಿ, ಎಂ.ಜಿ.ಶ್ರೀನಿವಾಸಮೂರ್ತಿ, ಜಗದೀಶ್, ಜಿ.ಸಿದ್ದಗಂಗಪ್ಪ ಇದ್ದರು. ರಾಮಣ್ಣ ಸ್ವಾಗತಿಸಿ ನರಸಿಂಹಮೂರ್ತಿ ನಿರೂಪಿಸಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.