ವೈದ್ಯರ ಕೊರತೆಗೆ ಆಕ್ರೋಶ: ಶಾಸಕ ತಿಮ್ಮರಾಯಪ್ಪಗೆ ಮುತ್ತಿಗೆ
ಪಾವಗಡ: ವೈದ್ಯರ ಕೊರತೆ ಹಿನ್ನಲೆಯಲ್ಲಿ ರೋಗದಿಂದ ನರಳುತ್ತಿದ್ದ 5 ಮಂದಿ ಈಗಾಗಲೇ ಮೃತಪಟ್ಟಿದ್ದು ಸರ್ಕಾರಿ ಆಸ್ಪತ್ರೆಗೆ ಕೂಡಲೇ ವೈದ್ಯರನ್ನು ನಿಯೋಜಿಸುವಂತೆ ತಾ.ತಿರುಮಣಿ ವ್ಯಾಪ್ತಿಯ ಸಾರ್ವಜನಿಕರು ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರನ್ನು ಮುತ್ತಿಗೆ ಹಾಕಿ ಆಗ್ರಹಿಸಿದ ಪ್ರಸಂಗ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯತು.
ಇದೇ ಸಂದರ್ಭದಲ್ಲಿ ಮುಖಂಡ ರಾಯಚೆರ್ಲ ಅಶ್ವತ್ಥನಾರಾಯಣ ಮಾತನಾಡಿ ತಿರುಮಣಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯಿದ್ದು ಈ ಆಸ್ಪತ್ರೆಗೆ ನಿಯೋಜಿತರಾದ ಡಾ. ವೆಂಕಟೇಶ್ ಎಂಬುವರು ಆಸ್ಪತ್ರೆಗೆ ಆಗಮಿಸುತ್ತಿಲ್ಲ. ಅಲ್ಲದೇ ಈ ಆಸ್ಪತ್ರೆಗೆ ನಿಯೋಜಿತರಾದ ವೈದ್ಯರು ಇದುವರೆಗೂ ಆಸ್ಪತ್ರೆಗೆ ಬಂದೇ ಇಲ್ಲ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಡಿಎಸ್ಒ ಅವರಿಗೆ ದೂರು ನೀಡಿ ಅನೇಕ ದಿನ ಕಳೆದರೂ ವ್ಯವಸ್ಥೆ ಸರಿಪಡಿಸಿ ಆಸ್ಪತ್ರೆಗೆ ಸರ್ಕಾರಿ ವೈದ್ಯರನ್ನು ನಿಯೋಜಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿದರು.
ಮುಖಂಡ ತಿರುಮಣಿ ವೆಂಕಟೇಶ್ ಮಾತನಾಡಿ ತಾ. ಐಎಂಎ ವತಿಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ 24 ಗಂಟೆ ಗ್ರಾಮೀಣ ಪ್ರದೇಶಗಳಲ್ಲಿ ರೋಗಿಗಳ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡುವ ಆರ್ಎಂಪಿ ವೈದ್ಯರು ಕಳೆದ 1ತಿಂಗಳಿಂದ ತಮ್ಮ ಷಾಪ್ಗಳಿಗೆ ಬಾಗಿಲು ಹಾಕಿದ ಪರಿಣಾಮ ತಾ. ರಾಯಚೆರ್ಲು, ಅಚ್ಚಮ್ಮನಹಳ್ಳಿ ಸೇರಿದಂತೆ ತಿರುಮಣಿ ವ್ಯಾಪ್ತಿಯಲ್ಲಿ ರೋಗಗಳಿಂದ ಬಳಲುತ್ತಿದ್ದವರಿಗೆ ವೈದ್ಯರ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಚಿಕತ್ಸೆ ದೊರೆಯದ ಕಾರಣ 5 ಮಂದಿ ಯುವಕರು ಈಗಾಗಲೇ ಮೃತಪಟ್ಟಿದ್ದಾರೆ. ಹೆರಿಗೆ ಸಮಯದಲ್ಲಿ ಮಹಿಳೆಯರಂತು ನಾನಾ ರೀತಿಯ ಹಿಂಸೆ ಅನುಭವಿಸುತ್ತಿದ್ದು ಗ್ರಾಮೀಣ ಪ್ರದೇಶದ ಬಡ ರೋಗಿಗಳ ಹಿತದೃಷ್ಟಿ ಹಿನ್ನಲೆಯಲ್ಲಿ ಅತೀ ಶೀಘ್ರ ಪ್ರತಿ ಗ್ರಾಮಕ್ಕೆ ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಿ. ಇಲ್ಲವಾದರೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಗ್ರಾಮೀಣ ಸೇವೆಯಲ್ಲಿ ನಿರತರಾದ ಆರ್ಎಂಪಿ ವೈದ್ಯರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಒತ್ತಾಯಿಸಿದರು.
ಯಾವುದೇ ಸಮಸ್ಯೆ ಇಲ್ಲದೇ ಗ್ರಾಮೀಣ ಪ್ರದೇಶಗಳ ಸೇವೆಯಲ್ಲಿ ನಿರತರಾದ ಆರ್ಎಂಪಿ ವೈದ್ಯರ ಬಗ್ಗೆ
ಪಿತೂರಿ ಹಿನ್ನಲೆಯಲ್ಲಿ ಐಎಂಎ ಕಮಿಟಿಯವರು ದೂರು ನೀಡಿದ ಪರಿಣಾಮ ವೈದ್ಯರ ಕೊರತೆಯಿಂದ ಬಡ ರೋಗಿಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಅಲ್ಲದೇ 50ರು.ಗಳ ಖರ್ಚು ಬದಲಿಗೆ 500ರು.ಗಳ ವೆಚ್ಚ ಮಾಡುವ ಅನಿವಾರ್ಯವಿದ್ದರೂ ಪಟ್ಟಣದಲ್ಲಿ ವಾಸವಿದ್ದ ಎಂಬಿಬಿಎಸ್ ವೈದ್ಯರು ಬೇಡಿಕೊಂಡರೂ ರಾತ್ರಿ ವೇಳೆ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲವೆಂದು ರಾಯಚೆರ್ಲು ವೆಂಕಟೇಶ್, ಮುತ್ಯಾಲಪ್ಪ, ಮಲ್ಲಿಕಾರ್ಜುನ ಮುಂತಾದವರು ಆರೋಪಿಸಿದರು.
ಸಮಸ್ಯೆಯನ್ನು ಅಲಿಸಿದ ಶಾಸಕ ಕೆ.ಎಂ.ತಿಮ್ಮರಾಯಪ್ಪ ಸಂಬಂಧಪಟ್ಟ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಆಸ್ಪತ್ರೆಗೆ ಸರ್ಕಾರಿ ವೈದ್ಯರನ್ನು ನಿಯೋಜಿಸುವ ಭರವಸೆ ನೀಡಿದರು. ಮುಖಂಡರಾದ ಶಿವಾರೆಡ್ಡಿ, ರಾಜ್ಗೋಪಾಲ್, ತಿರುಮಣಿ ಗ್ರಾಪಂ ಅಧ್ಯಕ್ಷ ನಾಗರಾಜ್, ಗೋಪಾಲಪ್ಪ, ಆರ್.ವೆಂಕಟೇಶ್, ಮುಸ್ತಾಪ್, ಈರಪ್ಪ, ವೆಂಕಟಣ್ಣ, ಗುಂಡಾಲಪ್ಪ ಸೇರಿದಂತೆ ತಿರುಮಣಿ ವ್ಯಾಪ್ತಿಯ ಆನೇಕ ಮಂದಿ ಮುಖಂಡರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

