ತುಮಕೂರು

ಓದಿದವರಿಂದಲೇ ಶೋಷಣೆ ಹೆಚ್ಚು: ಡಾ.ಓಎಲ್ಎನ್

Published On :

ತುಮಕೂರು:  ಸಮಾಜದಲ್ಲಿ ಓದಿದವರಿಂದಲೇ ಭ್ರಷ್ಟಾಚಾರ ಮತ್ತು ಶೋಷಣೆ ಹೆಚ್ಚಾಗಿ ನಡೆಯುತ್ತಿದೆ ಎಂದು ವಿಮರ್ಶಕ ಡಾ. ಒ.ಎಲ್. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಜಿ.ವಿ. ಆನಂದಮೂರ್ತಿ ಅವರ 'ಬುದ್ಧ ತೋರಿದ ಹಾದಿ' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಓದಿದವರು ಹಳ್ಳಿಯವರಿಂದ ದೂರ ಸರಿಯುತ್ತಾರೆ. ವಿದ್ವಾಂಸರೆಂದರೆ ಜನರು ನಮಸ್ಕಾರ ಹಾಕಿ ದೂರ ಹೋಗುತ್ತಾರೆ. ಅಂದರೆ ಓದಿದವರು ಸಾಮಾನ್ಯರ ಜೊತೆಗೆ ಹೆಚ್ಚು ಬೆರೆಯುವುದಿಲ್ಲ. ಜೊತೆಗೆ ಓದಿದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಮಾಯಕರಿಗೆ ವಂಚನೆ ಜೊತೆಗೆ ಶೋಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ವಿಶ್ವದಲ್ಲಿ ಧರ್ಮಯುದ್ಧಗಳು ಸಾಕಷ್ಟು ನಡೆದಿವೆ. ಧರ್ಮಕ್ಕಾಗಿ ನಡೆದಷ್ಟು ಹಿಂಸೆಗಳು ಬೇರೆ ಯಾವುದಕ್ಕೂ ನಡೆದಿಲ್ಲ. ಭಾರತ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹಿಂಸೆಗಳು, ಯುದ್ಧಗಳು ನಡೆದಿವೆ. ಧರ್ಮದ ಹೆಸರಿನಲ್ಲಿ ನಡೆದ ಕ್ರೌರ್ಯಗಳು ಬಣ್ಣಿಸಲಸದಳ. ಇಂತಹ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದವರು ಬುದ್ಧ ಮತ್ತು ಬಸವಣ್ಣ ಮಾತ್ರ ಎಂದು ತಿಳಿಸಿದರು.
ಹಿಂದೆ ಮೇಲ್ವರ್ಗದವರು ಮಾತ್ರ ಓದುತ್ತಿದ್ದರು. ಉಳಿದವರು ಓದುತ್ತಿರಲಿಲ್ಲ. ದೂರವಾಣಿ, ಮೊಬೈಲ್, ಟಿವಿ, ಸಿನಿಮಾ ಹಿಂದೆ ಇರಲಿಲ್ಲ.
ಹೀಗಾಗಿ ಓದುವುದೊಂದೇ ಮಾರ್ಗವಾಗಿತ್ತು. ಆದರೆ, ಇಂದು ಇವೆಲ್ಲವೂ ಇದ್ದು ಬೇರೆ ಬೇರೆ ಆಕರ್ಷಣೆಗಳು ಓದುವುದನ್ನು ಕಡಿಮೆ ಮಾಡಿವೆ. ಇಂತಹ ಸಂದರ್ಭ ಯುವಕರಿಗೆ ಬೇಕಾಗುವುದನ್ನು ಓದಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಸಿ.ಎನ್. ನರಸಿಂಹಮೂರ್ತಿ ಮಾತನಾಡಿ, ಬುದ್ಧನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಬುದ್ಧ ತೋರಿದ ಹಾದಿ ಉತ್ತಮ ಪುಸ್ತಕವಾಗಿದೆ. ಸಾಹಿತ್ಯ ಅಭಿರುಚಿ ಇರುವವರಿಗೆ ಜ್ಞಾನ ಸಂಪಾದಿಸಿಕೊಳ್ಳಲು ಹೆಚ್ಚಿನ ಅವಕಾಶವಿದೆ. ಸಾಹಿತ್ಯಕ್ಕೆ ಸಂತೋಷ ಕೊಡುವ ಶಕ್ತಿ ಇದೆ ಎಂದು ಹೇಳಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸಮನ್ವಯಾಧಿಕಾರಿ ವೈಎಂವಿ ರೆಡ್ಡಿ, ಸಿರಿಗನ್ನಡ ಪುಸ್ತಕ ಮಳಿಗೆಯ ಪ್ರೊ. ಜಿ.ಎಂ. ಶ್ರೀನಿವಾಸಯ್ಯ, ಪ್ರಾಂಶುಪಾಲ ಪ್ರೊ. ಎಚ್.ಎನ್. ವಿಜಯೇಂದ್ರ ಉಪಸ್ಥಿತರಿದ್ದರು.
ಪುಸ್ತಕ ಮನೆಯ ಡಾ. ಜಿ.ವಿ. ಆನಂದಮೂರ್ತಿ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಮಂಜೇಗೌಡ ನಿರೂಪಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಗೋವಿಂದರಾಜು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.