ದೇಶ ಸುರಕ್ಷಿತವಾದರೆ ಮಾತ್ರ ಮಠ ಮಂದಿರಗಳಿಗೆ ಭವಿಷ್ಯ
ತುಮಕೂರು: ದೇಶ ಸುರಕ್ಷಿತವಾದರೆ ಮಾತ್ರ ಮಠ ಮಂದಿರಗಳಿಗೆ ಭವಿಷ್ಯ ಎಂದು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾ ಭವನದಲ್ಲಿ ಸಂಸ್ಕಾರ ಭಾರತಿ ವತಿಯಿಂದ ಆಯೋಜಿಸಲಾಗಿದ್ದ ಭಾರತಮಾತಾ ಪೂಜನ್, ಭರತಮುನಿಜಯಂತಿ ಹಾಗು ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಧೈರ್ಯ ಸ್ಥೈರ್ಯಗಳ ಮೂರ್ತ ರೂಪ ಭಾರತ ಎಂದು ಅಭಿಪ್ರಾಯಪಟ್ಟ ಅವರು ಪ್ರಸ್ತುತ ಸ್ಥಿತಿಯಲ್ಲಿ ವಿವೇಕಾನಂದರ ಆದರ್ಶ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕು. ಆಗ ಮಾತ್ರ ಜಯಂತ್ಯುತ್ಸವಕ್ಕೆ ಅರ್ಥ ಬರುತ್ತದೆ ಎಂದರು.
ವಿಷಾದ: ಇಂದು ದೇಶದಲ್ಲಿ ಸಮರ್ಥ ನಾಯಕತ್ವ, ದೂರದರ್ಶಿತ್ವ, ಸಂಸ್ಕೃತಿ, ಸಂಸ್ಕಾರಗಳ ಕೊರತೆ ದಿನೇ ದಿನೇ ಹೆಚ್ಚುತ್ತಿದೆ. ನೈತಿಕ ಪ್ರಜ್ಞೆ, ರಾಷ್ಟ್ರ ಪ್ರಜ್ಞೆ ಅಪರೂಪವಾಗುವಂತಹ ಕಾಲ ಬಂದೊದಗಿದೆ ಎಂದು ವಿಷಾದಿಸಿದರು. ಇಂದಿನ ಯುವಕರು ದೇಶದ ಬಗ್ಗೆ ಚಿಂತನೆ ಮಾಡಬೇಕು. ಸ್ವಾತಂತ್ರ್ಯ ಯೋಧರ ಸೇವೆಯನ್ನು ಸ್ವತಂತ್ರ್ಯ ಪೂರ್ವದ ರಾಷ್ಟ್ರಭಕ್ತರನ್ನು ಅನುಸರಿಸಿದ್ದಲ್ಲಿ ಸಮಾಜದ ಬದಲಾವಣೆ ಸಾಧ್ಯ ಎಂದರು. ಇಂದಿನ ಸಮಾಜಕ್ಕೆ ಸಕಾರಾತ್ಮಕ ಸಂದೇಶ ಹೋಗಬೇಕು. ರಾಷ್ಟ್ರದ್ರೋಹಿಗಳನ್ನು ಶಿಕ್ಷಿಸಿ ದೂರದರ್ಶನದಲ್ಲಿ ಚರ್ಚಿಸುವುದು ದುರಂತ ಎಂದರು. ಸಂಸ್ಕಾರ ಭಾರತೀಯಂತಹ ಸಂಘಟನೆಗಳು ಇಂದು ಅತ್ಯವಶ್ಯಕ. ಇಂತಹ ಕಾರ್ಯಕ್ರಮಗಳು ನಡೆಯುತ್ತಾ ಇದ್ದರೆ ಸಮಾಜದಲ್ಲಿ ಸಾತ್ವಿಕ ಬದಲಾವಣೆ ತರಲು ಸಾಧ್ಯ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ್ಯ ಘೋಷ್ ಪ್ರಮುಖ ನಾಗರಾಜ ಸ್ವಾಮಿ ಮಾತನಾಡಿ ವಿವೇಕಾನಂದರ ಆದರ್ಶವನ್ನು ಯುವಜನತೆ ಹೇಗೆ ಬಳಸಿಕೊಳ್ಳಬೇಕು. ಆ ಮೂಲಕ ರಾಷ್ಟ್ರವನ್ನು ಹೇಗೆ ಬಲಿಷ್ಠವಾಗಿ ಮಾಡಬೇಕು ಎಂದು ತಿಳಿಸಿದರು. ನಾಟ್ಯ ಶಾಸ್ತ್ರದ ಮೂಲ ಪುರುಷ ಭರತಮುನಿ ಬಗ್ಗೆ ಮತ್ತು ಭಾರತ ಮಾತಾ ಪೂಜನ್ ಮಹತ್ವದ ಬಗ್ಗೆ ಸಭೆಗೆ ವಿವರಿಸಿದರು. ಪ್ರತಿಯೊಬ್ಬರಲ್ಲೂ ರಾಷ್ಟ್ರಪ್ರಜ್ಞೆ ಜಾಗೃತಗೊಳ್ಳಬೇಕು. ಮಾನವ ಸಂಬಂಧಗಳು ಸುಂದರ, ಸುಸಂಸ್ಕೃತ ಸಮಾಜಕ್ಕೆ ಸಹಾಯಕವಾಗಬೇಕು ಎಂದರು.
ಮುಕ್ತವಾಗಿ ಪಾಲ್ಗೊಳ್ಳಿ: ವಿದ್ಯಾರ್ಥಿಗಳು, ಯುವಕರು ಪಠ್ಯ ವಿಷಯಕ್ಕಷ್ಟೆ ಗಮನಕೊಡದೇ ರಾಷ್ಟ್ರ ಚಿಂತನೆಯಲ್ಲೂ ಮುಕ್ತವಾಗಿ ಪಾಲ್ಗೊಳ್ಳಬೇಕು ಎಂದರು.
ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಗರ ಕಾರ್ಯಾಧ್ಯಕ್ಷ ಅನಂತರಾಮಯ್ಯ ಸ್ವಾಗತಿಸಿದರು. ಗ.ಸಿ. ಶ್ರೀನಿವಾಸಮೂರ್ತಿ ಸಂಸ್ಕಾರ ಭಾರತೀಯ ಉದ್ದೇಶಗಳನ್ನು ವಿವರಿಸಿದರು.
ನಾ. ವೆಂಕಟೇಶ ಜೋಯಿಸ್ ಅವರು ನಿರೂಪಿಸಿದರು. ಕಡೆಗೆ ಸಾಗರ್ ಮತ್ತು ತಂಡದವರು ಭರತ ನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಎಂ.ವಿ. ಶ್ರೀಶೈಲ ದೇಶಿಕನ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

