ರೇಷ್ಮೆ ಕೃಷಿಯತ್ತ ಯುವಕರ ನಿರಾಸಕ್ತಿ
ಕುಣಿಗಲ್: ಮೈಸೂರು ಬಿತ್ತನೆ ರೇಷ್ಮೆ ಕೃಷಿ ಶತಮಾನದ ಇತಿಹಾಸ ಹೊಂದಿದ್ದು, ಉತ್ಕೃಷ್ಟ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಮೂಲವಾದ ಈ ವಲಯದಲ್ಲಿ, ರೇಷ್ಮೆ ಕೃಷಿ ಕೈಗೊಳ್ಳುವಲ್ಲಿ ಯುವ ರೈತರು, ಯುವಕರು ಆಸಕ್ತಿ ಕಳೆದುಕೊಳ್ಳುವುದು ನಿಜಕ್ಕೂ ಖೇದಕರ ಎಂದು ಶಾಸಕ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.
ಶನಿವಾರ ತಾಲೂಕಿನ ಹುಲಿಯೂರುದುರ್ಗದಲ್ಲಿ ರೇಷ್ಮೆ ಕೃಷಿ ಕಾರ್ಯಾಗಾರ ಮತ್ತು ರೇಷ್ಮೆ ಬೆಳೆಗಾರರಿಗೆ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮೈಸೂರು ರೇಷ್ಮೆ ಬಿತ್ತನೆ ವಲಯವೆಂದು ಖ್ಯಾತಿಗೊಳಗಾಗಿ ರಾಜ್ಯ ಸೇರಿದಂತೆ ರಾಷ್ಟ್ರದ ವಿವಿಧೆಡೆಗೆ ಉತ್ಕೃಷ್ಟ ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆಗೆ ಇಲ್ಲಿನ ಗೂಡುಗಳನ್ನು ಪೂರೈಸಲಾಗುತ್ತಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಾಲೂಕು ಉತ್ತಮ ಹೆಸರು ಪಡೆದುಕೊಂಡಿತ್ತು. ಆದರೆ, ಇಂದಿನ ಪೀಳಿಗೆ ಸರ್ಕಾರದ ಹಲವು ಸವಲತ್ತು, ಪ್ರೋತ್ಸಾಹದ ನಡುವೆಯೂ, ಗ್ರಾಮಾಂತರ ಪ್ರದೇಶದ ಯುವಕರು, ಯುವ ರೈತರು ರೇಷ್ಮೆ ಕೃಷಿಯ ಬಗೆಗೆ ಆಸಕ್ತಿ ತೋರದೆ, ನಗರ ಪ್ರದೇಶದ ಕಡೆಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದು ಮೈಸೂರು ರೇಷ್ಮೆ ಬಿತ್ತನಾ ವಲಯ ಕಡಿಮೆಯಾಗಲು ಕಾರಣವಾಗುತ್ತಿರುವುದು ಆತಂಕಕಾರಿಯಾಗಿದೆ. ರೈತರು ರೇಷ್ಮೆ ಕಸಬನ್ನು ಕೃಷಿಯ ಉಪಕಸುಬಾಗಿ ಹೈನುಗಾರಿಕೆಯೊಂದಿಗೆ ಪರಿಣಾಮಕಾರಿಯಾಗಿ ಕೈಗೊಂಡಲ್ಲಿ ಆರ್ಥಿಕಭಿವೃದ್ಧಿ ಹೊಂದಬಹುದು. ಸರ್ಕಾರದಿಂದಲೂ ರೇಷ್ಮೆ ಕೃಷಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು ಸವಲತ್ತುಗಳನ್ನು ಬಳಸಿಕೊಂಡು ಮೈಸೂರು ಬಿತ್ತನೆವಲಯದ ಗತವೈಭವವನ್ನು ಮರುಕಳಿಸುವತ್ತ ಶ್ರಮಿಸಬೇಕೆಂದರು.
ಪ್ರೋತ್ಸಾಹ: ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಲಿಯೂರುದುರ್ಗ ಗ್ರಾಪಂ ಅಧ್ಯಕ್ಷ ವೆಂಕಟೇಶ್, ರೇಷ್ಮೆಕೃಷಿ ಸೇರಿದಂತೆ ಹೈನುಗಾರಿಕೆ, ಕೃಷಿ ಚಟುವಟಿಕೆ ಕೈಗೊಳ್ಳಲು ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಸಾಕಷ್ಟು ಪ್ರೋತ್ಸಾಹ, ಸವಲತ್ತು ನೀಡುತ್ತಿದ್ದು ಸಂಬಂಧಪಟ್ಟ ಇಲಾಖಾಧಿಕಾರಿಗಳು ಸರ್ಕಾರದ ಸವಲತ್ತುಗಳ ಬಗ್ಗೆ ಗ್ರಾಮಾಂತರ ಪ್ರದೇಶದ ರೈತರಲ್ಲಿ ಸೂಕ್ತ ಅರಿವು ಮೂಡಿಸಿ, ಸವಲತ್ತುಗಳ ಸದ್ಬಳಕೆಯಾಗುವ ದಿಸೆಯಲ್ಲಿ ಶ್ರಮಿಸಬೇಕೆಂದರು.
ಕಾರ್ಯಕ್ರಮದಲ್ಲಿ ಐದು ಲಕ್ಷ ರು.ಗಳಿಗೂ ಹೆಚ್ಚಿನ ಸಹಾಯಧನದ ಚೆಕ್ ಹಾಗೂ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು.
ತಾಪಂ ಸದಸ್ಯೆ ಉಮಾ ವೆಂಕಟೇಶ್, ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಚ್.ಜಿ.ನಾಗರಾಜ್, ಉಪನಿರ್ದೇಶಕ ರಾಜು, ಕೆ.ಎಸ್. ವೆಂಕಟರಾವ್, ಪುಟ್ಟಲಿಂಗಯ್ಯ, ಅಣ್ಣೋಜಿರಾವ್, ಮುಸ್ತಾಫ್ ಅಲಿಖಾನ್, ಕೇಂದ್ರ ರೇಷ್ಮೆ ಮಂಡಲಿ ವಿಜ್ಞಾನಿ ಡಾ.ಹಿರಿಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

