ತುಮಕೂರು

ಚಲನಚಿತ್ರ ಅತ್ಯಂತ ಸಮರ್ಥ ಮಾಧ್ಯಮ

Published On :

ತುಮಕೂರು: ಚಲನಚಿತ್ರ ಜನಸಾಮಾನ್ಯರನ್ನು ಅತಿಸುಲಭವಾಗಿ ಮತ್ತು ಸಮರ್ಥವಾಗಿ ತಲುಪಬಲ್ಲ ಸಶಕ್ತ ಮಾಧ್ಯಮ ಎಂದು  ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಣದ ಆಸೆಗೆ ಈ ಕ್ಷೇತ್ರವನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕೊರಟಗೆರೆಯ ಮಯೂರ ಪಿಕ್ಚರ್ಸ್ ವತಿಯಿಂದ ಆಯೋಜಿಸಿದ್ದ ಕರಿಗಿರಿ ಕ್ಷೇತ್ರ ದೇವರಾಯನದುರ್ಗದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಮಹಾತ್ಮ ಎಂಬ ಟೆಲಿ ಚಿತ್ರ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಪುರಾಣ ಪುರುಷರು, ನಂತರ ಐತಿಹಾಸಿಕ ಪುರುಷರು, ಆನಂತರ ಇತಿಹಾಸ ಪುರುಷರು ಚಲನಚಿತ್ರಗಳ ಕಥಾವಸ್ತುವಾದರೆ, ಇಂದು ಜನರಿಗೆ, ಸರಕಾರಗಳಿಗೆ ಸಂಕಟ ನೀಡಿದ್ದ ವೀರಪ್ಪನ್, ದಂಡುಪಾಳ್ಯ, ಉಮೇಶ್ ರೆಡ್ಡಿಯಂತಹ ವ್ಯಕ್ತಿಗಳು ಚಲನಚಿತ್ರಗಳ ಕಥಾವಸ್ತುಗಳಾಗುತ್ತಿದ್ದಾರೆ. ಇದು ಭಾರತದ ದುರಂತ ಎಂದರು.
ಕೇವಲ ಹಣದ ಆಸೆಗಾಗಿ ಸಿನಿಮಾ ಅನ್ನುವಂತಹ ತತ್ವಗಳ ಹಿಂದೆ ಬೀಳದೆ ಸಮಾಜಕ್ಕೆ ನೈತಿಕತೆ, ರಾಷ್ಟ್ರಭಕ್ತಿ ಹೇಳುವಂತಹ ಚಿತ್ರಗಳನ್ನು ಕೊಡುವತ್ತ ಗಮನಹರಿಸಬೇಕೆಂದ ಅವರು, ಕಥೆಯ ಆಯ್ಕೆಯ ಸಂದರ್ಭದಲ್ಲಿ ನೈತಿಕತೆಯನ್ನು ನಿರ್ಮಾಪಕರು, ನಿರ್ದೇಶಕರು ಪ್ರದರ್ಶಿಸಬೇಕಿದೆ ಎಂದರು.
ಪುಣ್ಯ ಕ್ಷೇತ್ರಗಳ ಪರಿಚಯ: ಇಡೀ ನಾಡಿಗೆ ಹೆಸರುವಾಸಿಯಾದ ಈ ಕರಿಗಿರಿ ಕ್ಷೇತ್ರದ ಬಗ್ಗೆ ಇರುವ ಟೆಲಿಚಿತ್ರವನ್ನು ಬೇರೆ ಭಾಷೆಗಳಿಗೂ ಡಬ್ ಮಾಡುವ ಮೂಲಕ ಆಲ್ಲಿನ ಜನರಿಗೂ ನಮ್ಮ ಪುಣ್ಯ ಕ್ಷೇತ್ರಗಳ ಪರಿಚಯ ಮಾಡಿಸಬೇಕೆಂದು ಚಲನಚಿತ್ರ ನಿರ್ಮಾಪಕ ಗೋವಿಂದರಾಜು ಅವರಿಗೆ ಶಿವಾನಂದಶಿವಾಚಾರ್ಯ ಸ್ವಾಮಿ ಸಲಹೆ ನೀಡಿದರು.
ಜಿ.ಪಂ. ಸಿಇಓ ಗೋವಿಂದರಾಜು ಮಾತನಾಡಿ, ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಚಲನಚಿತ್ರ ಒಂದು ಸಶಕ್ತ ಮಾಧ್ಯಮ. ಒಳ್ಳೆಯ ಸಂದೇಶಗಳನ್ನು ನೀಡುವ ಚಿತ್ರಗಳು ಹೆಚ್ಚಾಗಬೇಕಿದೆ. ಜನರಿಗೆ ಬೇಕಾದನ್ನು ನಾವು ನೀಡುತ್ತೇವೆ ಎಂದು ಕೆಟ್ಟ ಸಂದೇಶಗಳನ್ನು ನೀಡುವ ಕೆಲಸ ಆಗಬಾರದು. ನೀವು ಯಾವುದೇ ಉದ್ದೇಶದಿಂದ ಸಿನಿಮಾ ತೆಗೆದರೂ ಅದನ್ನು ನೋಡುವ ಪ್ರೇಕ್ಷಕ ಯಾವ ರೀತಿ ತೆಗೆದುಕೊಳ್ಳುತ್ತಾನೆ ಎಂಬುದು ಮುಖ್ಯವಾಗುತ್ತದೆ ಎಂದರು.
ಕುಟುಂಬ ಸಮೇತ ನೋಡುವ ಚಿತ್ರ: ಚಲನಚಿತ್ರದ ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಚಲನಚಿತ್ರ ನಿರ್ಮಾಪಕ ಮುರುಳೀಧರ ಹಾಲಪ್ಪ, ಕರಿಗಿರಿ ಕ್ಷೇತ್ರ ದೇವರಾಯದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮಹಾತ್ಮೆ ಟೆಲಿ ಚಿತ್ರ ಕುಟುಂಬ ಸಮೇತ  ಕುಳಿತು ನೋಡುವಂತಹ ಚಿತ್ರವಾಗಿದೆ. ಈ ನಾಡಿನ ಇತಿಹಾಸ ಪ್ರಸಿದ್ದ ದೇವಾಲಯವಾಗಿದ್ದು, ಈ ಚಿತ್ರದಲ್ಲಿನ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದ ಹಲವಾರು ಆಂಶಗಳಿವೆ ಎಂದರು.
ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಗೊರವನಹಳ್ಳಿ ದೇವಾಲಯ ಮುಖ್ಯ ಅರ್ಚಕ ಪ್ರಸನ್ನಕುಮಾರ ಸ್ವಾಮೀಜಿ, ಸಾಹಿತಿ ಕವಿತಾ ಕೃಷ್ಣ, ಪತ್ರಿಕೋದ್ಯಮಿ ಎಸ್. ನಾಗಣ್ಣ, ಟಿ.ಆರ್. ಅಂಜನಪ್ಪ, ಚಲನಚಿತ್ರ ನಿರ್ದೇಶಕ ಗಂಧರ್ವ, ಚಲನಚಿತ್ರ ನಟರಾದ ರಘು, ಮತ್ತಿತರರ ಕಲಾವಿದರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಟೆಲಿ ಚಿತ್ರ ಪ್ರದರ್ಶನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.