ಜನಪ್ರತಿನಿಧಿಗಳೊಂದಿಗೆ ಅಗೌರವಯುತ ನಡೆ: ಕ್ರಮಕ್ಕೆ ಕೆಲ ಸದಸ್ಯರ ಆಗ್ರಹ
ಕುಣಿಗಲ್: ಪುರಸಭೆ ಮುಖ್ಯಾಧಿಕಾರಿ ಜನಪ್ರತಿನಿಧಿಗಳೊಂದಿಗೆ ಅಗೌರವಯುತವಾಗಿ ನಡೆದುಕೊಂಡಿರುವ ಕಾರಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಗಂಭೀರ ಚರ್ಚೆ ನಡೆದು ಕೆಲ ಸದಸ್ಯರು ಪರ ನಿಂತರೆ, ಮತ್ತೆ ಕಲವರು ವಿರೋಧ ನಿಂತು ಗೊಂದಲದ ವಾತಾವರಣ ಸೃಷ್ಟಿಸಿದ ಘಟನೆ ಸಾಮಾನ್ಯಸಭೆಯಲ್ಲಿ ನಡೆಯಿತು.
ಸೋಮವಾರ, ಪುರಸಭಾಧ್ಯಕ್ಷೆ ನಳಿನಾಭೈರಪ್ಪ ಅಧ್ಯಕ್ಷೆತೆಯಲ್ಲಿ ನಡೆದ ಸಾಮಾನ್ಯಸಭೆಯ ಪ್ರಾರಂಭಕ್ಕೆ, ಸಾಮಾನ್ಯಸಭೆಯ ಅನುಮೋದನೆ ಇಲ್ಲದೆ 2012-13ನೇ ಸಾಲಿನ ಹಿಂದುಳಿದ ವರ್ಗದ ಅನುದಾನ, ವಿಕಲಾಂಗ ಅನುದಾನವೆಚ್ಚಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಬಗ್ಗೆ ಸದಸ್ಯರಾದ ಈ. ಮಂಜು, ಹಮೀಗ್, ರಾಮು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಾಗ, ಅಧ್ಯಕ್ಷರು ತಮ್ಮ ಗಮನಕ್ಕೆ ಬಂದಿಲ್ಲ ಎಂದರು. ಇದನ್ನು ಖಂಡಿಸಿದ ಸದಸ್ಯ ಮಂಜು, ಅಧ್ಯಕ್ಷರ ಗಮನಕ್ಕೆ ಬಾರದೆ ಸ್ಥಳೀಯ ಪತ್ರಿಕೆಯಲ್ಲಿ ಜಾಹಿರಾತು ಪ್ರಕಟಗೊಂಡಿರುವುದು ನೋಡಿದರೆ ನಾಳೆ ಪುರಸಭೆ ಕಟ್ಟಡ ಹರಾಜಿಗೆ ಎಂದು ಜಾಹಿರಾತು ಪ್ರಕಟಗೊಂಡರೂ ಆಶ್ಚರ್ಯಪಡುವಂತಿಲ್ಲ. ಇದು ಅಧ್ಯಕ್ಷರ ಕಾರ್ಯವೈಖರಿ ಎಂದು ಖಂಡಿಸಿದಾಗ, ಅಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳುವ ಭರವೆ ನೀಡಿದ ಮೇರೆಗೆ ಚರ್ಚೆ ಅಂತ್ಯಗೊಂಡಿತು.
ಗೊಂದಲದ ಗೂಡು: ಇದೇ 9ರಂದು ನಡೆದ ಸಾಮಾನ್ಯಸಭೆಯಲ್ಲಿ ಮುಖ್ಯಾಧಿಕಾರಿ, ಉಪಾಧ್ಯಕ್ಷರ ವಿರುದ್ಧ ಬಳಸಿದ ಅವಾಚ್ಯಶಬ್ದಗಳ ಬಗ್ಗೆ ಪ್ರಸ್ತಾಪಗೊಂಡು, ಮುಖ್ಯಾಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ ಚರ್ಚೆಗೆ ಬಂದಾಗ, ಉಪಾಧ್ಯಕ್ಷ ರಂಗಸ್ವಾಮಿ ನಡೆದ ವಿಷಯ ವಿವರಿಸಿದರು. ಜನಪ್ರತಿನಿಧಿಗಳೊಂದಿಗೆ ಆಧಿಕಾರಿಗಳ ಅಸಭ್ಯ ವರ್ತನೆ ಸಹಿಸಲು ಸಾಧ್ಯವೆ ಎಂದು ಸದಸ್ಯರನ್ನು ಪ್ರಶ್ನಿಸಿ, ತಾವು ನಿರ್ಣಯದ ಪರವಿದ್ದು, ಜನಪ್ರತಿನಿಧಿಗಳ ಬಗ್ಗೆ ಗೌರವ ಇರುವ ಸದಸ್ಯರು ನಿರ್ಣಯ ಬೆಂಬಲಿಸಿ, ಇಲ್ಲವಾದರೆ ತಾವು ಏಕಾಂಗಿ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
ಸದಸ್ಯ ಬಲರಾಮ್ ಈ ನಿಲುವಿಗೆ ಬೆಂಬಲ ವ್ಯಕ್ತಪಡಿಸಿ ಸುದೀರ್ಘ ಚರ್ಚೆ ನಡೆಸಿದರು. ಆದರೆ ಸದಸ್ಯರಾದ ಕೆಂಪಣ್ಣ, ರಾಮು, ಹಮೀದ್, ತಿಮ್ಮಮ್ಮ ತಾವು ಈ ನಿರ್ಣಯ, ವಿರೋಧಿಸುವುದಾಗಿ ಹೇಳಿ ಚರ್ಚೆಗೆ ನಿಂತಾಗ ಸಭೆಯಲ್ಲಿ, ಬಹಳ ಹೊತ್ತು ಮುಖ್ಯಾಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಚರ್ಚೆ ನಡೆದು ಗೊಂದಲದ ಗೂಡಾಯಿತು.
ಚರ್ಚೆಗೆ ಸಹಕರಿಸಿ: ಒಂದು ಹಂತದಲ್ಲಿ ಮುಖ್ಯಾಧಿಕಾರಿ ಅನ್ನದಾನಿ, ಆಗಿದ್ದು ಆಗಿದೆ. ವಿಷಯ ಇಲ್ಲಿಯೇ ಕೈ ಬಿಟ್ಟು ಮುಂದಿನ ಚರ್ಚೆಗೆ ಸಹಕರಿಸಿ ಎಂದಾಗ, ಸದಸ್ಯ ಜಯರಾಮ್ ಚರ್ಚೆಗೆ ಇತಿಶ್ರೀ ಹಾಡಿ ಪರ-ವಿರೋಧ ಬರೆಯುವವರು ಮುಕ್ತವಾಗಿ ಅಭಿಪ್ರಾಯ ನಮೂದಿಸಿ, ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಕಳಿಸಿ ಎಂದು ಅಂತ್ಯಗೊಳಿಸಿದರು. ಸದಸ್ಯ ಬಲರಾಮ, 2006-07ನೇ ಸಾಲಿನಿಂದ 2011-12ನೇ ಸಾಲಿನವರೆಗೂ, ಪುರಸಭೆಯಲ್ಲಿ ಶೇ.22.75ರ ಅನುದಾನ ವೆಚ್ಚದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಮುಖ್ಯಾಧಿಕಾರಿ, ಸೇರಿದಂತೆ ಸಿಬ್ಬಂದಿಗಳೇ ಸಭೆಯ ಗಮನಕ್ಕೆ ತಾರದೆ ಮನಬಂದಂತೆ ತಮಗೆ ಬೇಕಾದವರಿಗೆ, ಅನರ್ಹ ಫಲಾನುಭವಿಗಳಿಗೂ ಚೆಕ್ ಹರಿದು ಕೋಟ್ಯಂತರ ರು. ಅಪವ್ಯಯ ಮಾಡಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಪೌರಾಡಳಿತ ನಿರ್ದೇಶಕರು ಹಾಗೂ ಲೋಕಾಯುಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ಣಯ ಬರೆಸಿದ್ದು, ವ್ಯವಸ್ಥಾಪಕ ಹನುಮಂತಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯ ಬಲರಾಮ್ ಆಕ್ಷೇಪಿಸಿ ಅಧಿಕಾರಿಗಳಿಗೆ ಅಕ್ಷೇಪ ಇದ್ದರೆ ಅದನ್ನು ತನಿಖಾಧಿಕಾರಿಗಳ ಮುಂದೆ ಹೇಳಿ, ಈಗ ಸಭೆಯ ಮುಂದೆ ಅಸಮಾಧಾನ ಸಲ್ಲ ಎಂದು ನಿರ್ಣಯ ಬರೆಸಿ, ಅಂಗೀಕಾರಕ್ಕೆ ಸೂಚಿಸಿದರು.
ವಿವಿಧ ವಿಷಯಗಳ ಮೇಲೆ ಚರ್ಚೆ ನಡೆದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸ್ಥಾಯಿಸಮಿತಿ ಅಧ್ಯಕ್ಷ ಚಂದ್ರಶೇಖರ್, ಅಭಿಯಂತರರಾದ ಶಿಲ್ಪ, ಶ್ರೀಕಾಂತ, ನರಸೇಗೌಡ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

