ಮಠಗಳು, ಖಾಸಗಿ ಸಂಸ್ಥೆಗಳಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು
ಶಿರಾ: ಶಿಕ್ಷಣ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣಕ್ಕೆ ಪೈಪೋಟಿ ಹೆಚ್ಚುತ್ತಿದ್ದು ಜನಸಂಖ್ಯೆ ಹೆಚ್ಚಳದಿಂದ ಸರ್ಕಾರ ಶೈಕ್ಷಣಿಕ ಅಗತ್ಯತೆಯನ್ನು ನಿಭಾಯಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಅನೇಕ ಮಠಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಳಜಿ ವಹಿಸಿ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಅಂಶವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಅವರು ಪಟ್ಟಣದ ಕೆ.ಮಲ್ಲಣ್ಣ ಸ್ಮಾರಕ ರಂಗನಾಥ ಪ.ಪೂ. ಕಾಲೇಜಿನ 2012-13 ನೇ ಸಾಲಿನ ಕ್ರೀಡೆ ಸಾಹಿತ್ಯ, ಸಾಂಸ್ಕೃತಿಕ, ಎನ್.ಎಸ್.ಎಸ್. ಮತ್ತು ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರ್ನಾಟಕದ ಅನುಕರಣೆ: ಕೆಲವೆ ವರ್ಷಗಳ ಹಿಂದೆ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವಿಶ್ವ ವಿದ್ಯಾಲಯಗಳು ಮಾತ್ರ ಇರುತ್ತಿದ್ದವು. ಇತ್ತೀಚೆಗೆ ಖಾಸಗಿ ವಿಶ್ವ ವಿದ್ಯಾಲಯಗಳು ರಚನೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೆವೆ ಎಂದ ಟಿ.ಬಿ.ಜಯಚಂದ್ರ ಅವರು ಶಿಕ್ಷಣದಲ್ಲಿ ಉತ್ತಮ ಗುಣಮಟ್ಟ, ಪೈಪೋಟಿ ಹಾಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಗುಣಮಟ್ಟಕ್ಕಾಗಿ ಪೈಪೋಟಿ ಉಂಟಾಗಿದೆ. ಇದರಿಂದ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ. ಈ ದಿಸೆಯಲ್ಲಿ ಬೇರೆ ರಾಜ್ಯಗಳು ಕರ್ನಾಟಕದ ಶಿಕ್ಷಣ ಪದ್ಧತಿಯನ್ನು ಅನುಕರಣ ಮಾಡುತ್ತಿವೆ ಎಂದರು.
ತಾಕೀತು: ಭಾರತ ಸರ್ಕಾರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಪರಿಶಿಷ್ಟರಿಗೆ ಇಂತಿಷ್ಟು ಮೀಸಲಾತಿ ನೀಡಬೇಕೆಂದು ತಾಕೀತು ಮಾಡಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದವರಿಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ಸೌಲಭ್ಯ ದೊರೆತಿದೆ. ಸರ್ಕಾರದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನುದಾನ ಮೊದಲಾದ ಸೌಲಭ್ಯಗಳು ದೊರಕುತ್ತಿವೆ ಎಂದರು.
ಕೀರ್ತಿ ಸಂಪಾದಿಸಿ: ಮಾಜಿ ಸಚಿವ ಬಿ.ಸತ್ಯನಾರಾಯಣ ಅವರು ಮಾತನಾಡಿ ನಾಡು, ನುಡಿ, ಸಾಹಿತ್ಯ, ಕ್ರೀಡೆ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾಗವಹಿಸಿ ಯಶಸ್ವಿಯಾಗಿ, ಪ್ರತಿಭೆ ಪ್ರದರ್ಶಿಸಿ ಕೀರ್ತಿ ಸಂಪಾದಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಹಾಗೆಯೇ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಜವಾಬ್ದಾರಿ ಶಾಲೆಗೂ ಮತ್ತು ಸಮಾಜಕ್ಕೂ ಇದೆ ಎಂದರು.
ಶ್ರೀಕ್ಷೇತ್ರ ಪಟ್ಟನಾಯಕನಹಳ್ಳಿಯ ಶ್ರೀಗುರುಗುಂಡ ಬ್ರಹ್ಮೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡುತ್ತ, ಹಲವು ಸಂಪತ್ತುಗಳಿಗಿಂತ ವಿದ್ಯೆ ಅಪಾರ ಮೌಲ್ಯವನ್ನು ಹೊಂದಿದ್ದು, ಯಾರು ಕಸಿಯದ ಸಂಪತ್ತಾಗಿದೆ. ಇಂತಹ ವಿದ್ಯೆಯನ್ನು ಪಡೆಯಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
ಇದೇ ಸಂದರ್ಬದಲ್ಲಿ 2012 ರ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಂಪಾದಿಸಿದ ವಿಂಗ್ಸ್ ಆಫ್ ಯಂಗ್ ಮೈಂಡ್ಸ್ ಎನ್ನುವ ಪುಸ್ತಕ ಮತ್ತು ಸಿ.ಡಿ. ಯನ್ನು ಬಿಡುಗಡೆ ಮಾಡಲಾಯಿತು.
ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷರಾದ ಆರ್.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪಿ.ಎಂ.ರಂಗನಾಥಪ್ಪ, ಕಾರ್ಯದರ್ಶಿ ಎಚ್.ಜಿ. ಲಿಂಗಯ್ಯ, ಉಪಾಧ್ಯಕ್ಷರಾದ ಕೆ.ಎಂ.ಹೆಂಜಾರಪ್ಪ, ಕೆ.ಎಲ್. ಮುಕುಂದಪ್ಪ, ಸಿ.ಎಂ. ಪ್ರಕಾಶ ಗೌಡ, ಖಜಾಂಜಿ ಬಿ.ಆರ್. ಜನಾರ್ದನ್, ಪ್ರೊ. ಎಂ.ಜಿ.ಚಂದ್ರಶೇಖರಯ್ಯ, ಜಿ.ಪಂ. ಸದಸ್ಯರಾದ ಅರೆಹಳ್ಳಿ ರಮೇಶ್, ವಿಶಾಲಾಕ್ಷಿ ಪ್ರಕಾಶ ಗೌಡ, ತಾ.ಪಂ. ಉಪಾಧ್ಯಕ್ಷ ಉದಯ ಶಂಕರ್, ಪ್ರಾಚಾರ್ಯ ಕೆ.ಸೋಮಶೇಖರಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಶಶಿಧರ ಗೌಡ, ಡಿ.ಸಿ.ಅಶೋಕ್, ಮಾಸ್ಟರ್ ಕಿಶನ್, ತಹಸೀಲ್ದಾರ್ ನಾಗಹನುಮಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮದ್ದೆವಳ್ಳಿ ರಾಮಕೃಷ್ಣ, ಕಾಲೇಜಿನ ಉಪನ್ಯಾಸಕರು, ನಿರ್ದೆಶಕರುಗಳು ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

