ಪಿಯುಸಿ. ಪೂರಕ ಪರೀಕ್ಷೆ ಕಟ್ಟೆಚ್ಚರ ವಹಿಸಲು ಕ್ರಮ
ತುಮಕೂರು: ಜುಲೈ 3 ರಿಂದ 12 ರವರೆಗೆ ತುಮಕೂರು ಜಿಲ್ಲೆಯಾದ್ಯಂತ ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಎಲ್ಲಾ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಿಳಿಸಿದ್ದಾರೆ.
ಪರೀಕ್ಷೆಗಳಲ್ಲಿ ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಆಯಾ ತಾಲೂಕಿನ ತಹಸೀಲ್ದಾರರು ಹಾಗೂ ಪ್ರತಿ ತಾಲೂಕಿನ ನೋಡಲ್ ಅಧಿಕಾರಿಗಳು ಪರೀಕ್ಷೆ ನಡೆಯುವ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನಕಲು ಮಾಡುವುದನ್ನು ತಡೆಗಟ್ಟಲು ಅವರು ಸೂಚನೆ ನೀಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್, ಬ್ಲೂಟೂತ್, ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದಲ್ಲಿ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯೊಳಗೆ ಇರುವ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ನಡೆಯುವ ಅವಧಿಯಲ್ಲಿ ಮುಚ್ಚಲು ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ
ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬಿ.ಸಿ.ಎಂ. ಇಲಾಖೆಯಿಂದ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಚಿಕ್ಕನಾಯಕನಹಳ್ಳಿ ಟೌನ್ನಲ್ಲಿ 2013-14ನೇ ಸಾಲಿಗೆ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು, ತಾಲೂಕು ವಿಸ್ತರಣಾಧಿಕಾರಿಗಳ ಕಚೇರಿ, ಬಿ.ಸಿ.ಎಂ. ಇಲಾಖೆ, ಹಳೇ ಪ್ರವಾಸಿ ಮಂದಿರದ ಪಕ್ಕ ಇರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಚಿಕ್ಕನಾಯಕನಹಳ್ಳಿ ಇಲ್ಲಿಂದ ಅಥವಾ ಸಂಬಂಧಿಸಿದ ವಿದ್ಯಾರ್ಥಿ ನಿಲಯದಿಂದ ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 19 ಸಂಜೆ 5.30 ರೊಳಗಾಗಿ ಸಂಬಂಧಿಸಿದ ದಾಖಲಾತಿಯೊಂದಿಗೆ ನಿಲಯ ಪಾಲಕರಿಗೆ ಸಲ್ಲಿಸುವುದು.
ವ್ಯಕ್ತಿ ಮೇಲೆ ಕರಡಿ ದಾಳಿ: ತೀವ್ರ ಗಾಯ
ಶಿರಾ: ವ್ಯಕ್ತಿಯೊಬ್ಬರ ಮೇಲೆ ಕರಡಿಯೊಂದು ದಾಳಿ ನಡೆಸಿ ಕಚ್ಚಿ ತೀವ್ರ ಗಾಯಗೊಳಿಸಿರುವ ಘಟನೆ ತಾಲೂಕಿನ ಬರಗೂರು ಕೆರೆ ಅಂಗಳದಲ್ಲಿ ನಡೆದಿದೆ. ಗೌಡಗೆರೆಯ ವಾಸಿ ನಾಗೇಂದ್ರಪ್ಪ (28) ಎಂಬುವರೆ ಕರಡಿ ದಾಳಿಗೊಳಗಾಗಿರುವ ವ್ಯಕ್ತಿ. ಇವರು ಬರಗೂರು ಸಮೀಪ ಇರುವ ಕದರೀಹಳ್ಳಿಗೆ ತಮ್ಮ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದಾಗ ಬರಗೂರು ಕೆರೆ ಅಂಗಳದ ಬಳ್ಳಾರಿ ಜಾಲಿ ಗುಂಪಿನಿಂದ 2 ಮರಿ ಹಾಗೂ ಒಂದು ದೊಡ್ಡ ಕರಡಿ ಏಕಾ ಏಕಿ ದಾಳಿ ನಡೆಸಿವೆ. ಅವುಗಳಲ್ಲಿ ದೊಡ್ಡ ಕರಡಿ ಈತನ ಭುಜ ಮತ್ತು ಬಲಕೆನ್ನೆಗೆ ಉಗುರಿನಿಂದ ಪರಚಿ ಗಾಯಗೊಳಿಸಿದೆ. ಕರಡಿ ದಾಳಿಯಿಂದ ತಪ್ಪಿಸಿಕೊಂಡು ಊರಿನತ್ತ ಓಡಿ ಬಂದ ನಾಗೇಂದ್ರಪ್ಪನನ್ನು ನೋಡಿದ ಗ್ರಾಮಸ್ಥರು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಮಹಿಳೆ ಕೊಲೆ
ಮಧುಗಿರಿ: ವಿವಾಹಿತ ಮಹಿಳೆಯೊಬ್ಬಳನ್ನು ಇಟ್ಟುಕೊಂಡಿದ್ದ ವ್ಯಕ್ತಿಯೇ ಆಕೆ ಪಾನಮತ್ತಳಾಗಿ ಮಲಗಿದ್ದಾಗ ತಲೆ ಮೇಲೆ ಸೈಜು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಮಧುಗಿರಿ ಪಟ್ಟಣದ ತುಮಕೂರು ಗೇಟ್ ಬಳಿ ಭಾನುವಾರ ಮಧ್ಯ ರಾತ್ರಿ ನಡೆದಿದೆ. ಲಕ್ಕಮ್ಮ(45) ಕೊಲೆಯಾಗಿರುವ ದುರ್ದೈವಿ ಎಂದು ಗುರುತಿಸಲಾಗಿದ್ದು, ಈಕೆ ವಿವಾಹವಾಗಿ ಗಂಡನನ್ನು ಬಿಟ್ಟಿದ್ದಳು. ನಂತರ ಕೃಷ್ಣಪ್ಪ ಎಂಬಾತನ ಜತೆ ಸಂಸಾರ ನಡೆಸುತ್ತಿದ್ದಳು. ಲಕ್ಕಮ್ಮ ಮತ್ತು ಕೃಷ್ಣಪ್ಪ ಇಬ್ಬರು ಕುಡುಕರಾಗಿದ್ದು ಪ್ರತಿದಿನ ಸಣ್ಣ ಪುಟ್ಟ ಗಲಾಟೆ ನಡೆಯುತ್ತಿತ್ತು. ಆದರೆ ಭಾನುವಾರ ರಾತ್ರಿ ಇವರಿಬ್ಬರ ಗಲಾಟೆ ತಾರಕಕ್ಕೇರಿ ಆಕೆ ಮಲಗಿದ್ದಾಗ ಕೃಷ್ಣಪ್ಪ ಲಕ್ಕಮ್ಮಳ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು ಆರೋಪಿ ಕೃಷ್ಣಪ್ಪನನ್ನು ಬಂಧಿಸಲಾಗಿದೆ ಎಂದು ಸಿಪಿಐ ವಿಶ್ವಾಸ್ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಡಾ.ಸೌಮ್ಯಲತಾ, ಪಿಎಸೈ ನಿರ್ಮಲ ಭೇಟಿ ನೀಡಿ ಪರಿಶೀಲಿಸಿದರು.
ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ
ತುಮಕೂರು: 2013-14 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಲು ಉತ್ತೇಜನವನ್ನು ನೀಡಲು ಪ್ರೋತ್ಸಾಹಧನ ಮಂಜೂರಾತಿಗಾಗಿ ತುಮಕೂರು ಜಿಲ್ಲೆಯ ಮತೀಯ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಜೈನ್ಸ್, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಆಂಗ್ಲೋ ಇಂಡಿಯನ್ ಮತ್ತು ಬೌದ್ಧ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರಿಂದ ಪಡೆಯಬಹುದಾಗಿದೆ. ಅರ್ಹ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಮದಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಸೆಪ್ಟೆಂಬರ್ 20 ರೊಳಗೆ ಸಲ್ಲಿಸುವುದು. ವಿದ್ಯಾರ್ಥಿಯ ಕುಟುಂಬದ ಆದಾಯ 2 ಲಕ್ಷಗಳಿಗಿಂತ ಮೀರಿರಬಾರದು. ವಿದ್ಯಾರ್ಥಿ ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ವಿದ್ಯಾರ್ಥಿಗಳಿಂದ ಸ್ವೀಕರಿಸಿರುವ ಅರ್ಜಿಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರು, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ತುಮಕೂರು ಅವರಿಗೆ ಸೆಪ್ಟೆಂಬರ್ 30ರೊಳಗೆ ಸಲ್ಲಿಸತಕ್ಕದ್ದು.
ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ
ತುಮಕೂರು: ಮಿಪ್ಸೆಡ್ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವತಿಯರಿಗಾಗಿ ವಸತಿಯುತ 30 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿಯನ್ನು ನೀಡುವ ಸಲುವಾಗಿ ಅರ್ಹರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಯುವತಿಯರು ಬ್ಯೂಟಿ ಪಾರ್ಲರ್ ತರಬೇತಿಗಾಗಿ ಕನ್ನಡ ಓದಲು ಮತ್ತು ಬರೆಯಲು ಬರುವ 18 ರಿಂದ 45 ವಯೋವುತಿಯೊಳಗಿನ ಅಭ್ಯರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿರುವವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವವರು ಸಹ ನೇರವಾಗಿ ಮಿಪ್ಸೆಡ್ ತರಬೇತಿ ಸಂಸ್ಥೆ, 1ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕುವೆಂಪು ವೃತ್ತ, ಕುವೆಂಪು ನಗರ, ಭುವಿ ಆಯುರ್ವೇದ್ ಆಸ್ಪತ್ರೆ ಹಿಂಭಾಗ, ತುಮಕೂರು ಇಲ್ಲಿ ಜುಲೈ 6 ರಂದು ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯ ಒಳಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಅರ್ಜಿಯಲ್ಲಿ ದೂ.ವಾ.ಸಂ. ಅಥವಾ ಮೊಬೈಲ್ ಸಂಖ್ಯೆ ನಮೂದಿಸಬೇಕು. ಹೆಚ್ಚಿನ ವಿವರಗಳಿಗೆ 0816-2273386 ಸಂಪರ್ಕಿಸಲು ಕೋರಿದ್ದಾರೆ.
ತಾಲೂಕು ನಿವೃತ್ತ ನೌಕರರ ಮಾಸಿಕ ಸಭೆ
ಶಿರಾ: ಜುಲೈ 4 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ತಾಲೂಕಿನ ದೊಡ್ಡ ಹುಲಿಕುಂಟೆ ಗ್ರಾಮದ ಮಾಧ್ಯಮಿಕ ಶಾಲಾ ಆವರಣದಲ್ಲಿ ತಾಲೂಕು ನಿವೃತ್ತ ನೌಕರರ ಮಾಸಿಕ ಸಭೆ ಕರೆದಿದ್ದು ಸಭೆಯಲ್ಲಿ ತಾಲೂಕಿನ ನಿವೃತ್ತ ನೌಕರ ಬಾಂಧವರು ಭಾಗವಹಿಸಿ ತಮ್ಮ ಕುಂದು ಕೊರತೆ ನಿವಾರಣೆ ಮಾಡಿಕೊಳ್ಳಬೇಕೆಂದು ಉಪಾಧ್ಯಕ್ಷರಾದ ಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜೃಂಭಣೆಯ ಗಿರಿಜಾ ಕಲ್ಯಾಣ ಮಹೋತ್ಸವ
ತಿಪಟೂರು: ನಗರದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ 106ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಆಲದಕೊಂಬೆ ಅಮ್ಮನವರ ಜಾತ್ರ ಮಹೋತ್ಸವ
ಗುಬ್ಬಿ: ತಾಲೂಕಿನ ಇತಿಹಾಸ ಪ್ರಸಿದ್ಧ ಗುಬ್ಬಿ ಹೊಸಹಳ್ಳಿ ಗ್ರಾಮದ 33 ಹಳ್ಳಿಗಳ ಕುಲದೇವತೆ ಆಲದಕೊಂಬೆ ಅಮ್ಮನವರ ಜಾತ್ರ ಮಹೋತ್ಸವವು ಜುಲೈ 2 ರಿಂದ 4 ರವರೆಗೆ ನಡೆಯಲಿದ್ದು ಗುಬ್ಬಿ ಹೊಸಹಳ್ಳಿ ಸಂಸ್ದಾನದ ಮುತ್ತಿನ ಮುಮ್ಮಡಿ ಏಳುನಾಡು ಪ್ರಭುಗಳಾದ ಹುಚ್ಚೀರಪ್ಪಾಜಿ ಅರಸ್ ಅವರ ನೇತೃದಲ್ಲಿ ಜಾತ್ರಾ ಮಹೋತ್ಸವು ನಡೆಯಲಿದೆ. ಜುಲೈ 2 ರಂದು ಅಮ್ಮನವರನ್ನು ಪೂಜೆಗೆ ಕರೆದೊಯ್ಯಲಾಗುವುದು, ಜುಲೈ 3 ರಂದು ಆರತಿ ಮತ್ತು ಅಗ್ನಿಕೊಂಡ, ಜುಲೈ 4 ರಂದು ವೈಭವಯುತವಾಗಿ ಅಮ್ಮನವರ ರಥೋತ್ಸವ ಹಾಗೂ ವಿವಿಧ ಉತ್ಸವಗಳು ನಡೆಯಲಿದೆ. ನಂತರ ಜಾತ್ರಾ ಮಹೋತ್ಸವದ ಅಂಗಾವಾಗಿ ನಡೆಯಲಿರುವ ಧಾರ್ಮಿಕ ಸಮಾರಂಭದಲ್ಲಿ ಗುಬ್ಬಿ ಹೊಸಹಳ್ಳಿ ಸಂಸ್ಥಾನದ ಮುತ್ತಿನ ಮುಮ್ಮಡಿ ಏಳುನಾಡು ಹುಚ್ಚೀರಪ್ಪಾಜಿ ಅರಸ್ ಅವರ ಸಮ್ಮುಖದಲ್ಲಿ ನಡೆಯಲಿದೆ. ಈ ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ತೊರೆಮಠ ರಾಜಶೇಖರ ಸ್ವಾಮೀಜಿ ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

