ತುಮಕೂರು

ಮೈಕ್ರೋ ಇನ್‌ಶ್ಯೂರೆನ್ಸ್ ಪಾಲಿಸಿ ಹಣ ದುರುಪಯೋಗ: ದೂರು

Published On :

ಕ.ಪ್ರ. ವಾರ್ತೆ  ಚಿಕ್ಕನಾಯಕನಹಳ್ಳಿ  ಜು.8
ಜನಸಾಮಾನ್ಯರ ಹಿತಕ್ಕಾಗಿ ಸರ್ಕಾರ ಜಾರಿಗೆ ತರುವ ಯೋಜನೆಗಳು ಮಧ್ಯವರ್ತಿಗಳ ಕೈಯ್ಯಲ್ಲಿ ಸಿಲುಕಿ ಹೇಗೆ ದುರುಪಯೋಗವಾಗುತ್ತವೆ ಎಂಬುದಕ್ಕೆ  ತಾಲೂಕಿನಲ್ಲಿ ನಡೆದಿರುವ ಮೈಕ್ರೋ ಇನ್‌ಶ್ಯೂರೆನ್ಸ್ ದುರುಪಯೋಗ ಉದಾಹರಣೆಯಾಗಿದೆ.
ಭಾರತದ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಗ್ರಾಮೀಣ ಜನರ ಬದುಕಿಗೆ ಭದ್ರತೆ ಕಲ್ಪಿಸುವ ಕನಸಿನ ಕೂಸಾದ ಮೈಕ್ರೋ ಇನ್‌ಶೂರೆನ್ಸ್ ಬಡಜನ ಕೂಲಿನಾಲಿ ಮಾಡಿ ಕೂಡಿಟ್ಟ ಹಣವನ್ನು ಕಟ್ಟಿದ್ದ ಪಾಲಿಸಿದಾರರು ಸದರಿ ಹಣ ತಮ್ಮಬಾಳ ಮುಸ್ಸಂಜೆಯಲ್ಲಿ ನೆರವಿಗೆ ಆಸರೆಯಾಗುವ ಭರವಸೆ ಹೊಂದಿದ್ದರು. ಆದರೆ ಇಲ್ಲಿ ಅವರಿಗೆ ಕಾದಿದ್ದು ನಿರಾಶೆ. ಜೀವವಿಮಾನಿಗಮದ  ಭದ್ರತೆ ಎಂದು ನಂಬಿದ ಗ್ರಾಮೀಣ ಯುವತಿಯರು-ಯುವಕರು ತಮ್ಮ ನೆರೆಹೊರೆಯಲ್ಲಿ ಪಾಲಿಸಿಯನ್ನು ಸಂಗ್ರಹಿಸಿ ಸಮನ್ವಯ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿಕೊಂಡು ಪಟ್ಟಣದಲ್ಲಿ ತೆರೆದಿದ್ದ ಕಚೇರಿಗೆ ಹಣವನ್ನು ತಂದು ಕಟ್ಟಿದ್ದರು. ಆದರೆ ಸಮನ್ವಯ ಸಂಸ್ಥೆಯ ಪ್ರತಿನಿಧಿ ಆ ಹಣವನ್ನು ಜೀವವಿಮಾ ಕಚೇರಿಯಲ್ಲಿ ಸದರಿ ಪಾಲಿಸಿದಾರರ ಖಾತೆಗೆ ಜಮಾ ಮಾಡದೆ ನುಂಗಿ ಹಾಕಿದ್ದಾನೆ. ಇಡೀ ತಾಲೂಕಿನಲ್ಲಿ 96 ಜನ ಸಬ್ ಏಜೆಂಟ್‌ಗಳು ಸಂಗ್ರಹಿಸಿದ ಕೋಟ್ಯಂತರ ರು.ದುರುಪಯೋಗವಾಗಿದ್ದು, ಪಾಲಿಸಿದಾರರಿಗಿಂತ ಹೆಚ್ಚಾಗಿ ಸಬ್ ಏಜೆಂಟರುಗಳು ಆತಂಕದಲ್ಲಿದ್ದಾರೆ.
ಈ ಸಂಬಂಧ ಕೆಲ ಏಜೆಂಟರುಗಳು ಬಂದು ಪಟ್ಟಣದ ಪೊಲೀಸ್ ಠಾಣೆ ಸಂಪರ್ಕಿಸಿ ಆ ಮುಖಾಂತರ ಜೀವವಿಮಾ ನಿಗಮದ ಅಧಿಕಾರಿಗಳನ್ನು ಕರೆಸಿ ಅವರ ಮೂಲಕ ಪೊಲೀಸ್ ಠಾಣೆಯಲ್ಲಿ ಸಮನ್ವಯ ಎನ್‌ಜಿಓ ಪದಾಧಿಕಾರಿಗಳ ಮೇಲೆ ನಂಬಿಕೆ ದ್ರೋಹ ವಂಚನೆ, ಸಾರ್ವಜನಿಕರ ಹಣ ದುರುಪಯೋಗ ಮತ್ತು ಸಂಸ್ಥೆಗೆ ಮೋಸ ಮಾಡಿದ್ದಾರೆಂದು ಆರೋಪಿಸಿ  ದೂರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ನಿಗಮದ ಮೈಕ್ರೋ ಇನ್ ಶೂರೆನ್ಸ್ ಡಿವಿಜನಲ್ ಮ್ಯಾನೇಜರ್ ಬಿ.ಎಸ್.ರಾಮಚಂದ್ರಯ್ಯ, ಕಾನೂನು ಸಲಹೆಗಾರರಾದ ಪಿ.ಎಸ್. ಮಾರ್ಕಾಂಡೇಯ, ಆಡಳಿತಾಧಿಕಾರಿ ಎಚ್.ಬಿ.ಶಿವಣ್ಣ ಇವರುಗಳು ಬಂದು ದೂರು ದಾಖಲಿಸಿ, ಪಾಲಿಸಿದಾರರ ಹಣ ದುರುಪಯೋಗವಾಗಲು ಬಿಡುವುದಿಲ್ಲ. ಸದರಿ ವ್ಯಕ್ತಿಯಿಂದ ವಸೂಲು ಮಾಡಿ ಗ್ರಾಹಕರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು. ಏಜೆಂಟರುಗಳಾದ ಮತಿಗಟ್ಟದ ಗೀತಾ, ತಾಪಂ ಸದಸ್ಯೆ ಹೇಮಾವತಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.