ತುಮಕೂರು

ಹಸಿವಿನಿಂದ ಕಂಗೆಟ್ಟಿವೆ ಕಾಡುಪ್ರಾಣಿಗಳು

Published On :

ತುಮಕೂರು: ನಿರಂತರ ಬೇಟೆ, ಕಾರಿಡಾರ್ ಛಿದ್ರದಿಂದಾಗಿ ತುಮಕೂರು ಸಮೀಪದ ದೇವರಾಯನದುರ್ಗ ಅರಣ್ಯದಲ್ಲಿ ಈಗ ಕಾಡು ಪ್ರಾಣಿಗಳಿಗೆ ಹಸಿವಿನ ಸಮಸ್ಯೆ ಕಾಣಿಸಿಕೊಂಡಿದೆ.
42.24 ಚದುರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ದೇವರಾಯನದುರ್ಗದಲ್ಲಿ ಜಿಂಕೆ, ಚಿರತೆ, ಕಾಡು ಹಂದಿ, ಕಾಡುಪಾಪ, ಮುಳ್ಳು ಹಂದಿ, ಮುಂಗುಸಿ, ಮೊಲ, ಪುನುಗು ಬೆಕ್ಕು, ಕಾಡು ಬೆಕ್ಕು, ಕಾಡುಕುರಿ, ಕತ್ತೆ ಕಿರುಬ, ನರಿ, ಗುಳ್ಳೆ ನರಿ, ಉಡ, ಹಳದಿ ಗಂಟಲಿನ ಬುಲ್ಬುಲ್, ಸ್ವರ್ಗದ ನೊಣ ಹಿಡುಕ, ಕಾಡುಕೋಳಿ, ನವಿಲು, ಹೆಬ್ಬಾವು, ಹಸಿರು ಹಾವು, ಮಂಡಲದ ಹಾವು, ಕೇರೆ ಹಾವು, ಆಮೆ, ಊಸರವಳ್ಳಿ, ಓತಿ ಕ್ಯಾತಗಳು ಮುಂತಾದ ಪ್ರಾಣಿ, ಪಕ್ಷಿ, ಸರಿಸೃಪಗಳು ಇದ್ದು ಈಗ ಇವಕ್ಕೆಲ್ಲಾ ಹಸಿವಿನ ಸಮಸ್ಯೆ ಕಾಣಿಸಿಕೊಂಡಿದೆ.
ಒಂದೆಡೆ ನಿರಂತರ ಬೇಟೆ, ಇನ್ನೊಂದೆಡೆ ಕಲ್ಲು ಗಣಿಗಾರಿಕೆ, ಮತ್ತೊಂದೆಡೆ ನಾಟ ಕಡಿತದಿಂದಾಗಿ ಸಸ್ಯಹಾರಿ ಪ್ರಾಣಿಗಳ ಆಹಾರ ಮೂಲವಾದ ಗಿಡಗಳೇ ನಾಶವಾಗುತ್ತಿದೆ. ಹೀಗಾಗಿ ಆಹಾರವಿಲ್ಲದೆ ಕಾಡು ಪ್ರಾಣಿಗಳು ಕಂಗಾಲಾಗಿ ವಲಸೆ ಹೋಗುತ್ತಿವೆ. ಇನ್ನೊಂದೆಡೆ ಜಿಂಕೆ, ಹಂದಿಯನ್ನು ಬೇಟೆಯಾಡುತ್ತಿದ್ದ ಚಿರತೆ ಕೂಡ ಪ್ರಾಣಿಗಳಿಲ್ಲದೆ ಊರಿಗೆ ಬಂದಿವೆ.
ಚಿನ್ನಿಗ, ಬೆಳಗುಂಬ, ಚಿನ್ನಿಗನ ಪಾಳ್ಯ, ಇರಕಸಂದ್ರ ಕಾಲೋನಿ, ಊರ್ಡಿಗೆರೆ, ದೇವರಾಯನದುರ್ಗ, ನಾಮದ ಚಿಲುಮೆ, ಅನುಪನಹಳ್ಳಿ ಮುಂತಾದ ಭಾಗಗಳಲ್ಲಿ ದೇವರಾಯನದುರ್ಗ ಅರಣ್ಯ ಪ್ರದೇಶ ಹಬ್ಬಿಕೊಂಡಿದೆ.
ಅರಣ್ಯ ಪ್ರದೇಶಕ್ಕೆ ಎಗ್ಗಿಲ್ಲದೆ ರಾತ್ರಿ ವೇಳೆ ಪ್ರವೇಶ ದೊರೆಯುತ್ತಿದೆ. ಹೀಗಾಗಿ ಅಪಘಾತಗಳಿಗೂ ಸಹ ಕಾಡು ಪ್ರಾಣಿಗಳು ಬಲಿಯಾಗುತ್ತಿವೆ. ಊರ್ಡಿಗೆರೆ ರಸ್ತೆ ಮತ್ತು ಅನುಪನಹಳ್ಳಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಬೇಕಾಗಿದೆ. ಅದು ಕೂಡ ಮಾಡಿಲ್ಲ. ಅಲ್ಲದೇ ಆಗಾಗ ಬೀಳುವ ಕೃತಕ ಕಾಡು ಬೆಂಕಿ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ. ಅರಣ್ಯ ಇಲಾಖೆಯವರು ಮಾತ್ರ ಸಿಬ್ಬಂದಿ ಇಲ್ಲವೆಂದು ಕುಂಟು ನೆಪ ಹೇಳುತ್ತಲೇ ಇದ್ದಾರೆ.
ನಿರಂತರವಾಗಿ ಕಲ್ಲು ಗಣಿಗಾರಿಕೆಗಾಗಿ ಸ್ಫೋಟ ನಡೆಯುತ್ತಲೇ ಇದೆ. ಹೀಗಾಗಿ ಕಾಡು ಪ್ರಾಣಿಗಳು ಆತಂಕಗೊಂಡಿವೆ. ಅಲ್ಲದೇ ಇದನ್ನು ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ಸಂಬಂಧ ಗೆಸ್ಟ್ ಹೌಸ್ಗಳು ತಲೆ ಎತ್ತುತ್ತಿವೆ. ತಡ ರಾತ್ರಿಯವರೆಗೂ ಗುಂಡು ಪಾರ್ಟಿಗಳು ಕಾಡಿನಲ್ಲಿ ನಡೆಯುತ್ತಿದೆ. ಹೀಗಾಗಿ ಕಾಡು ಪ್ರಾಣಿಗಳ ಮುಕ್ತ ಸಂಚಾರಕ್ಕೆ ಇದು ಅಡ್ಡಿಯಾಗಿದೆ.
ಕಾಡಿಗೆ ಎಗ್ಗಿಲ್ಲದ ಪ್ರವೇಶ ಸಿಕ್ಕಿರುವುದರಿಂದ ಕಾಡು ಪ್ರಾಣಿಗಳ ಆವಾಸ ಸ್ಥಾನ ನಾಶವಾಗಿದೆ. ಕಾಡು ಪ್ರಾಣಿಗಳಿಗೆ ಆಹಾರ ಕಾಡಿನಲ್ಲಿ ಸಿಗದೇ ಇರುವುದರಿಂದ ಈಗಾಗಲೇ ಪೆಂಗೋಲಿಯನ್, ಹಂದಿಗಳು, ಜಿಂಕೆ, ಚಿರತೆಗಳು ನಾಡಿನತ್ತ ವಲಸೆ ಮಾಡಿವೆ.
ರಣ ಹದ್ದುಗಳ ಕಣ್ಮರೆ: ದೇವರಾಯನದುರ್ಗದ ಯೋಗ ನರಸಿಂಹಸ್ವಾಮಿ ದೇಗುಲದ ಬಳಿ 4 ವಿವಿಧ ಜಾತಿಯ ಅಪರೂಪದ ರಣಹದ್ದುಗಳು ಇದ್ದವು. ಈಗ ಅವೆಲ್ಲವೂ ಕಣ್ಮರೆಯಾಗುತ್ತಿವೆ. ತುಮಕೂರು ಸಮೀಪದಲ್ಲೇ ಇರುವ ಈ ಅಪರೂಪದ ಅರಣ್ಯ ಪ್ರದೇಶದಲ್ಲಿರುವ ಕಾಡು ಪ್ರಾಣಿಗಳನ್ನು ರಕ್ಷಿಸಬೇಕಾಗಿದೆ. ಇಲ್ಲದಿದ್ದರೆ ದೇವರಾಯನದುರ್ಗ ಅರಣ್ಯ ಪ್ರದೇಶ ಇತಿಹಾಸ ಪುಟ ಸೇರುತ್ತದೆ ಎಂಬ ಆತಂಕ ವನ್ಯಜೀವಿ ಪ್ರೇಮಿಗಳದ್ದಾಗಿದೆ.

- ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.