ತುಮಕೂರು

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿ: ಜಯಚಂದ್ರ

Published On :

ಕ.ಪ್ರ.ವಾರ್ತೆ   ತುಮಕೂರು   ಜು.10
ತುಮಕೂರು ನಗರ ಮೂಲಕ ಹಾದು ಹೋಗುವ ರಾ. ಹೆದ್ದಾರಿ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ಅಭಿವೃದ್ಧಿ  ಸೇರಿದಂತೆ ಜಿಲ್ಲೆಯ ಇತರೆ  ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾ.ಹೆ. ಪ್ರಾಧಿಕಾರದ ಅಧ್ಯಕ್ಷರಿಗೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಿದಲ್ಲಿ ಅತಿ ಶೀಘ್ರ ಕಾಮಗಾರಿಗಳಿಗೆ ಅನುಮತಿ ದೊರಕಿಸಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಭರವಸೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತುಮಕೂರು ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಟವಾಡಿ ವೃತ್ತದ ಮಿರ್ಜಿ ಪೆಟ್ರೋಲ್ ಬಂಕ್ನಿಂದ ಎನ್.ಹೆಚ್.-4ರ ರಸ್ತೆಗೆ ಸ್ಕೈವಾಕ್ ನಿರ್ಮಾಣ ಕಾಮಗಾರಿ ಸೇರಿದಂತೆ ಪ್ರಾಧಿಕಾರದಿಂದ ಆಗಬೇಕಿರುವ ಕಾಮಗಾರಿಯನ್ನು ಕ್ರೋಢೀಕರಿಸಿ ವರದಿ ಸಿದ್ಧಪಡಿಸುವಂತೆ ತಿಳಿಸಿದರು.
ತುಮಕೂರು ನಗರ ಸಮಗ್ರ ಅಭಿವೃದ್ಧಿಯಾಗಬೇಕಾದಲ್ಲಿ ಹಾಗೂ ವಿವಿಧ  ಇಲಾಖೆಗಳ ಅಭಿವೃದ್ಧಿ ಯೋಜನೆಗಳಿಗೆ  ಸಂಬಂಧಿಸಿದಂತೆ ನಿವೇಶನಗಳು ಲಭ್ಯವಿರಬೇಕು. ಇಲಾಖೆಗಳು  ಅನುದಾನ ಕ್ರೋಢೀಕರಿಸಿ ಭೂಸ್ವಾಧೀನಪಡಿಸಿಕೊಳ್ಳಬೇಕು.  ನಗರ ಸುತ್ತಮುತ್ತಲ ಪ್ರದೇಶದಲ್ಲಿ ಕನಿಷ್ಠ 100 ಎಕರೆ ಜಮೀನನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಸಂಬಂಧ ಭೂಸ್ವಾಧೀನಪಡಿಸಿಕೊಳ್ಳುವ ಅಗತ್ಯತೆ ಇದೆ. ಟೂಡಾ, ನಗರಸಭೆಗಳು ತಮ್ಮದೇ ಆದ ಜಮೀನು ಹೊಂದಿರಬೇಕು.  ಒಂದೇ ಕಡೆ ಭೂಸ್ವಾಧೀನ ಪ್ರಕ್ರಿಯೆ ಬೇಡ. ನಗರದ ಸುತ್ತಲೂ ವಿವಿಧೆಡೆ ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ ಎಂದರು.
ತುಮಕೂರು ಸುತ್ತಮುತ್ತ  ಸರ್ಕಾರಿ ಭೂಸ್ವಾಧೀನ ಪ್ರಕ್ರಿಯೆಗೆ ಖಾಸಗಿ  ಲೇಔಟ್ಗಳಿಂದ ಅಡಚಣೆಯುಂಟಾಗುತ್ತಿದ್ದು, ಇನ್ನುಮುಂದೆ  ಖಾಸಗಿ ಲೇಔಟ್ಗಳಿಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಮನವಿಗೆ ಸ್ಪಂದನೆ: ತುಮಕೂರು ಅಮಾನಿಕೆರೆ ಆವರಣದಲ್ಲಿ  ಗ್ಲಾಸ್ಹೌಸ್ ಕಾಮಗಾರಿಗೆ ಶಂಕುಸ್ಥಾಪನೆ  ನೆರವೇರಿದ್ದು, ಆಯವ್ಯಯದಲ್ಲಿ ಅನುದಾನ  ಒದಗಿಸಿಕೊಡುವಂತೆ ಶಾಸಕ ಡಾ. ರಫೀಕ್  ಅಹ್ಮದ್ ಅವರ ಮನವಿಗೆ ಸ್ಪಂದಿಸಿದ  ಸಚಿವರು, ಗಾಜಿನ ಮನೆಗೆ ಅನುದಾನ ಒದಗಿಸಲು ತಾವು ಪ್ರಯತ್ನಿಸುವುದಾಗಿ ತಿಳಿಸಿದರು.
ತುಮಕೂರು ಜಿಲ್ಲೆಗೆ 2 ಬಾಲಕರ ಮತ್ತು 3 ಬಾಲಕಿಯರ ಪೋಸ್ಟ್ ಮೆಟ್ರಿಕ್  ಹಾಸ್ಟಲ್ ತೆರೆಯುವ ತುರ್ತು ಅಗತ್ಯತೆ  ಇದ್ದು, ಹಾಸ್ಟಲ್ಗಳಿಗೆ ಪ್ರವೇಶ ಕೋರಿ ಮೂರು ಸಾವಿರದಷ್ಟು ಅರ್ಜಿ ಬರುತ್ತಿದ್ದು, ಕೇವಲ 370 ಸೀಟುಗಳನ್ನು ಮಾತ್ರ ನೀಡಬಹುದಾಗಿದೆ ಎಂದು ಬಿ.ಸಿ.ಎಂ. ಅಧಿಕಾರಿ ಮುದ್ದುಕುಮಾರ್ ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಾಸ್ಟೆಲ್ ಮಂಜೂರಾತಿಗೆ ಸಂಬಂಧಿಸಿದ ವರದಿಯನ್ನು ತಮಗೆ ನೀಡಿದಲ್ಲಿ ಕ್ರಮ ವಹಿಸುವುದಾಗಿ ತಿಳಿಸಿದರು.
ಸಮಸ್ಯೆ ಅಲ್ಲ: ತುಮಕೂರು ನಗರದ ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಿದಲ್ಲಿ ಘನತ್ಯಾಜ್ಯ ವಿಲೇವಾರಿ ಒಂದು ಸಮಸ್ಯೆಯೇ ಅಲ್ಲ ಎಂದು ಸಚಿವರು ನಗರಸಭೆ ಅಧಿಕಾರಿಗಳಿಗೆ ಈ ಸಂದರ್ಭ ತಿಳಿಸಿದರು.
ಕೊಳಗೇರಿ ಅಭಿವೃದ್ಧಿಯಂತಹ  ಪುಣ್ಯಕಾರ್ಯ ಬೇರೊಂದಿಲ್ಲ. ತುಮಕೂರು ಜಿಲ್ಲೆಯಲ್ಲಿ ಗುರುತಿಸಲಾಗಿರುವ ವಿವಿಧ ಕೊಳಗೇರಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಘೋಷಣೆ ಮಾಡುವಂತೆ ಮತ್ತು ಘೋಷಣೆ ಮಾಡಲಾಗಿರುವ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕುರಿತಂತೆ ಶೀಘ್ರ ಕ್ರಮಕೈಗೊಳ್ಳುವಂತೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಡಾ. ರಫೀಕ್ ಅಹ್ಮದ್, ಷಡಕ್ಷರಿ, ಜಿಲ್ಲಾಧಿಕಾರಿ ಶ್ರೀ ಕೆ.ಎಸ್. ಸತ್ಯಮೂರ್ತಿ, ಜಿ.ಪಂ. ಸಿ.ಇ.ಓ. ಗೋವಿಂದರಾಜು, ಅಪರ ಜಿಲ್ಲಾಧಿಕಾರಿ ಶ್ರೀ ಪೆದ್ದಪ್ಪಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.