ಬಾಲಕಿಗೆ ದುನಿಯಾ ವಿಜಿ ನೆರವು
ಕ.ಪ್ರ. ವಾರ್ತೆ ತುಮಕೂರು ಜು.11
ವಿಚಿತ್ರ ಚರ್ಮ ಕಾಯಿಲೆಯಿಂದ ನರಳುತಿದ್ದ ನಗರದ ಹೆಚ್.ಎಂ.ಎಸ್.ಕಾಲೋನಿಯ ನಿವಾಸಿ ಸೌಮ್ಯ ಮನೆಗೆ ಭೇಟಿ ನೀಡಿದ್ದ ಸಿನಿಮಾ ನಟ ದುನಿಯಾ ವಿಜಿ ಬಾಲಕಿಯ ಚಿಕಿತ್ಸೆಗೆ 1ಲಕ್ಷ ರು. ಚೆಕ್ ನೀಡಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.
ತುಮಕೂರು ನಗರದ ಎಸ್.ಐ.ಟಿ. ಕಾಲೇಜಿನಲ್ಲಿ ಶಿವಾಜಿನಗರ ಸಿನಿಮಾ ಚಿತ್ರೀಕರಣದಲ್ಲಿ ಇದ್ದ ವೇಳೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ನೋಡಿದ ದುನಿಯಾ ವಿಜಿ ಸಂಜೆ 6 ಗಂಟೆ ಸುಮಾರಿಗೆ ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ವಿಚಿತ್ರ ಚರ್ಮ ಕಾಯಿಲೆಯಿಂದ ನರಳುತ್ತಿದ್ದ ಬಾಲಕಿಯ ಮನೆಗೆ ಭೇಟಿ ನೀಡಿ ಆಕೆಗೆ ಸಾಂತ್ವನ ಹೇಳಿದರಲ್ಲದೆ ಕಣ್ಣು ಕಾಣದ ತಾಯಿ, ಕೂಲಿ ಮಾಡುವ ತಂದೆಯಿಂದ ಮಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಒಂದು ಲಕ್ಷ ರು.ಗಳ ಚೆಕ್ ವಿತರಿಸಿ ಚಿಕಿತ್ಸೆಗೆ ಹಾಗೂ
ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದುನಿಯಾ ವಿಜಿ, ವಿಚಿತ್ರ ಚರ್ಮ ಕಾಯಿಲೆಯಿಂದ ಬಳಲುತ್ತಿರುವ ಸೌಮ್ಯಳ ವಿಷಯ ಕೇಳಿ ತುಂಬ ದುಖಃವಾಯಿತು. ಸುಮಾರು 7 ವರ್ಷದಿಂದ ಈ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದಾಗಿ ಶಾಲೆಯನ್ನು ಬಿಟ್ಟಿರುವುದು ನಿಜಕ್ಕೂ ಶೋಚನೀಯ. ಕಣ್ಣು ಕಾಣದ ತಾಯಿ, ಮಗಳಿಗೆ ಚಿಕಿತ್ಸೆ ಕೊಡಿಸಲಾಗದ ತಂದೆ ಇದು ನಿಜಕ್ಕೂ ಅತ್ಯಂತ ವಿಷಾದನೀಯ ಸಂಗತಿ. ಮಾಧ್ಯಮಗಳು ಈ ವಿಷಯವನ್ನು ಸಮಾಜಕ್ಕೆ ತಿಳಿಸುವ ಮೂಲಕ ಒಳ್ಳೆಯ ಕೆಲಸ ಮಾಡಿವೆ. ಹಾಗಾಗಿ ಆಕೆಗೆ ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ. ತುಮಕೂರಿನ ಜನತೆ ಈಕೆಯ ನೆರವಿಗೆ ಬರಬೇಕಾಗಿದೆ ಎಂದರು.
ವಿಚಿತ್ರ ಚರ್ಮ ಕಾಯಿಲೆಗೆ ತುತ್ತಾಗಿರುವ ಸೌಮ್ಯ ಮಾತನಾಡಿ, ಕಳೆದ ಏಳು ವರ್ಷಗಳಿಂದ ನನಗೆ ಈ ಕಾಯಿಲೆಯಿದೆ. ಮೂರು ವರ್ಷಗಳಿಂದ ಶಾಲೆಗೆ ಹೋಗುತ್ತಿಲ್ಲ. ಶಾಲೆಯಲ್ಲಿ ಶಿಕ್ಷಕರು ವಾಸಿ ಮಾಡಿಕೊಂಡು ಬಾ ಎಂದು ಹೇಳಿದರು. ನನ್ನಿಂದ ಇತರರಿಗೆ ತೊಂದರೆಯಾಗುವುದು ಬೇಡ ಎಂಬ ಉದ್ದೇಶದಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದೇನೆ. ಇಂದು ಈ ಅಂಕಲ್ ನನ್ನ ನೆರವಿಗೆ ಬಂದಿದ್ದು ಇವರಿಗೆ ನಮ್ಮ ಕುಟುಂಬ ಚಿರಋಣಿಯಾಗಿದೆ. ನನಗೆ ಕಾಯಿಲೆ ವಾಸಿಯಾದರೆ ಸಾಕು.ಎಲ್ಲರಂತೆ ಓದಿ ನಮ್ಮ ತಂದೆ ತಾಯಿಯನ್ನು ಸಾಕುತ್ತೇನೆ ಎಂದು ಕಣ್ಣೀರಿನ ನಡುವೆಯೂ ಆತ್ಮವಿಶ್ವಾಸ ಪ್ರದರ್ಶಿಸಿದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

