ಆಸ್ಪತ್ರೆಯಲ್ಲಿ ಸ್ವಿಚ್ ಬೋರ್ಡ್ಗೆ ಬೆಂಕಿ: ಆತಂಕದಲ್ಲಿ ರೋಗಿಗಳು
ಕ.ಪ್ರ. ವಾರ್ತೆ ಕುಣಿಗಲ್ ಜು.15
ಉದ್ಘಾಟನೆಯಾಗದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಮೇಲು ಅಂತಸ್ತಿನ ವಿದ್ಯುತ್ ಸ್ವಿಚ್ ಬೋರ್ಡ್ ದಿಢೀರ್ ಹೊತ್ತಿ ಉರಿದು, ದಟ್ಟ ಹೊಗೆ ಆವರಿಸಿದ ಕಾರಣ, ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳು, ಸಾರ್ವಜನಿಕರು, ಕೆಲ ಸಿಬ್ಬಂದಿ ಗಾಬರಿಗೊಂಡು ಆಸ್ಪತ್ರೆಯಿಂದ ಹೊರಗೆ ದೌಡಾಯಿಸಿ, ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಪಟ್ಟಣದ ಮೂವತ್ತು ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯನ್ನು 2007ರಲ್ಲಿ ಅಂದಿನ ಶಾಸಕ ಎಚ್.ನಿಂಗಪ್ಪ 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸಲು ಶ್ರಮಿಸಿದ ಕಾರಣ, 157 ಲಕ್ಷ ವೆಚ್ಚದಲ್ಲಿ 2008ರಲ್ಲಿ ಕಾಮಗಾರಿ ಪ್ರಾರಂಭಗೊಂಡು, ಕುಂಟುತ್ತಾ ಸಾಗಿ, ಕೊನೆಗೆ 2013ರ ಮಾರ್ಚ್ನಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿತು. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೇಲ್ದರ್ಜೆಗೆ ಏರಿದ ಸಾರ್ವಜನಿಕ ಆಸ್ಪತ್ರೆ ಕಟ್ಟಡ, ಅಧಿಕೃತ ಉದ್ಘಾಟನೆ ಭಾಗ್ಯ ಕಾಣದೆ, ವಿವಿಧ ಪ್ರಯೋಗಾಲಯಗಳು, ಆಪ್ತಸಮಾಲೋಚನೆ ಕೇಂದ್ರ, ಕ್ಷಯರೋಗ ನಿಯಂತ್ರಣ ಕೇಂದ್ರಗಳು ಮಂಜೂರಾದ ಮೇರೆಗೆ, ಮೇಲು ಅಂತಸ್ತಿನ ಕಟ್ಟದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿತ್ತು.ಸೋಮವಾರ ಎಂದಿನಂತೆ ರೋಗಿಗಳು, ಸಾರ್ವಜನಿಕರು ವಿವಿಧ ಕೆಲಸಕ್ಕೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಜಮಾವಣೆಗೊಂಡಿದ್ದು, 12ಗಂಟೆ ಸಮಯದಲ್ಲಿ ಮೇಲು ಅಂತಸ್ತಿನ ಪ್ರಾಂಗಣದ ಸ್ವಿಚ್ಬೋರ್ಡ್ ದಿಢೀರ್ ಧಗ, ಧಗನೆ ಹೊತ್ತಿ ಉರಿಯ ತೊಡಗಿ, ಕಪ್ಪು ದಟ್ಟ ಹೊಗೆ ಆಸ್ಪತ್ರೆ ತುಂಬೆಲ್ಲಾ ವ್ಯಾಪಿಸಿತು. ಗಾಬರಿಗೊಂಡ ರೋಗಿಗಳು, ಸಾರ್ವಜನಿಕರು, ಕೆಲ ಸಿಬ್ಬಂದಿಗಳು ಆಸ್ಪತ್ರೆ ಕಟ್ಟಡದಿಂದ ಹೊರಗೆ ದೌಡಾಯಿಸಿ ಮುಂಭಾಗ ಜಮಾವಣೆಗೊಂಡರು.
ಸ್ವಿಚ್ ಆಫ್: ಎಚ್ಚೆತ್ತ ಆಸ್ಪತ್ರೆಯ ಸ್ವಚ್ಛತಾ ಮತ್ತು, ಡಿ ಗ್ರೂಪ್ ಸಿಬ್ಬಂದಿ ಕೂಡಲೆ, ಮೇನ್ ಸ್ವಿಚ್ ಆಫ್ ಮಾಡಿ, ಅಗ್ನಿಶಾಮಕ ಯಂತ್ರದ ಮೂಲಕ, ಹೊತ್ತಿ ಉರಿಯುತ್ತಿದ್ದ ಸ್ವಿಚ್ ಬೋರ್ಡ್ನ ಬೆಂಕಿ ನಿಯಂತ್ರಿಸಿ, ಹೆಚ್ಚಿನ ಅನಾಹುತ ತಡೆಗಟ್ಟಿದರು. ಕೆಟ್ಟ ವಾಸನೆಯುಕ್ತ ದಟ್ಟ ಹೊಗೆ ಆಸ್ಪತ್ರೆ ತುಂಬೆಲ್ಲಾ ಹರಡಿ ರೋಗಿಗಳು ಪರದಾಡುವಂತಾಯಿತು. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಾಗರಿಕರಾದ ಶ್ರೀನಿವಾಸ್, ಸಿದ್ದರಾಜು ಇತರರು, ಅಧಿಕ ಸಾಮರ್ಥ್ಯದ ವಿದ್ಯುತ್ ಪ್ರವಹಿಸುವ ಶಕ್ತಿಇರುವ ಗುಣಮಟ್ಟದ ವಿದ್ಯುತ್ ವೈರ್ ಹಾಕದೆ, ಕಳಪೆ ಗುಣಮಟ್ಟದ ವೈರ್ ಅಳವಡಿಸಿರುವುದೇ ಘಟನೆಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

